Dailyhunt Logo
  • Light mode
    Follow system
    Dark mode
    • Play Story
    • App Story
IVF: 57 ವರ್ಷದ ದಾಂಪತ್ಯ - 74 ರ ಹರೆಯದಲ್ಲಿ ಅವಳಿ ಮಕ್ಕಳ ಜನನ!

IVF: 57 ವರ್ಷದ ದಾಂಪತ್ಯ - 74 ರ ಹರೆಯದಲ್ಲಿ ಅವಳಿ ಮಕ್ಕಳ ಜನನ!

Navasamaja.com 3 weeks ago

ಮರಾವತಿ: 74 ವರ್ಷದ ವೃದ್ಧೆಯೊಬ್ಬರು ಸಾಲು ಸಾಲು ನಿರಾಶೆಗಳ ನಂತರ ಐವಿಎಫ್‌ (IVF) ತಂತ್ರಜ್ಞಾನದ ನೆರವಿನಿಂದ ಅವಳಿ ಹೆಣ್ಣುಮಕ್ಕಳಿಗೆ (Twins) ಜನ್ಮ ನೀಡಿದ ಅಪರೂಪದ ಘಟನೆ (Viral News) ಆಂಧ್ರ ಪ್ರದೇಶದಲ್ಲಿ (Andhra Pradesh) ನಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಕಾವು ಪಡೆದುಕೊಂಡಿದೆ.

ಆಂಧ್ರಪ್ರದೇಶದ ಎರಾಮಟ್ಟಿ ಮಂಗಯಮ್ಮ ಮತ್ತು ರಾಜಾ ರಾವ್ ದಂಪತಿ 57 ವರ್ಷಗಳ ಸುದೀರ್ಘ ದಾಂಪತ್ಯ ಜೀವನ ನಡೆಸಿದ್ದರೂ ಮಕ್ಕಳ ಭಾಗ್ಯವಿಲ್ಲದೆ ಕೊರಗುತ್ತಿದ್ದರು. ತಮ್ಮ ನೆರೆಹೊರೆಯ 55 ವರ್ಷದ ಮಹಿಳೆಯೊಬ್ಬರು ಗರ್ಭಧರಿಸಿ ಮಗುವಿಗೆ ಜನ್ಮ ನೀಡಿದ್ದನ್ನು ಕಂಡ ಮಂಗಯಮ್ಮ, ತಮಗೂ ತಾಯಿಯಾಗುವ ಆಸೆ ಚಿಗುರಿ ಪತಿಯನ್ನು ಒಪ್ಪಿಸಿ ವೈದ್ಯರ ಬಳಿ ತೆರಳಿದ್ದರು.

ನೈಸರ್ಗಿಕವಾಗಿ ಗರ್ಭಧರಿಸುವುದು ಸಾಧ್ಯವಾಗದ ಹಿನ್ನೆಲೆಯಲ್ಲಿ ವೈದ್ಯರು ದಾನಿಯ ಮೊಟ್ಟೆ ಹಾಗೂ ಪತಿಯ ವೀರ್ಯವನ್ನು ಬಳಸಿ ಐವಿಎಫ್‌ ಚಿಕಿತ್ಸೆ ನೀಡಿದ್ದರು. ವೈದ್ಯರ ಸುದೀರ್ಘ ಕಣ್ಣಾವಲು ಮತ್ತು ಕಟ್ಟುನಿಟ್ಟಿನ ನಿಗಾದಲ್ಲಿ ಗರ್ಭಾವಸ್ಥೆ ಪೂರೈಸಿದ ಮಂಗಯಮ್ಮ ಅವರು ಸೆಪ್ಟೆಂಬರ್ 5, 2019ರಂದು ಗುಂಟೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಿ-ಸೆಕ್ಷನ್ ಶಸ್ತ್ರಚಿಕಿತ್ಸೆ ಮೂಲಕ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದರು. ಹೆರಿಗೆಯ ನಂತರ ಮಂಗಯಮ್ಮ ಅವರ ಆರೋಗ್ಯ ಸ್ಥಿರವಾಗಿದ್ದರೂ, ವಯಸ್ಸಿನ ಕಾರಣದಿಂದ ಮಕ್ಕಳಿಗೆ ನೇರವಾಗಿ ಹಾಲುಣಿಸಲು ಸಾಧ್ಯವಾಗಿರಲಿಲ್ಲ.

ಇತ್ತೀಚೆಗೆ ಈ ಘಟನೆ ಮತ್ತೆ ಜಾಲತಾಣಗಳಲ್ಲಿ ಮುನ್ನೆಲೆಗೆ ಬಂದಿದ್ದು, ಇಷ್ಟು ಹೆಚ್ಚಿನ ವಯಸ್ಸಿನಲ್ಲಿ ಮಕ್ಕಳನ್ನು ಹೊಂದುವ ನಿರ್ಧಾರದ ಕುರಿತು ಸಾರ್ವಜನಿಕರಲ್ಲಿ ತೀವ್ರ ಚರ್ಚೆ ಆರಂಭವಾಗಿದೆ. ಇಳಿವಯಸ್ಸಿನಲ್ಲಿ ತಾಯಿಯಾಗುವುದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರಿಯೇ, ಇಂತಹ ಐವಿಎಫ್ ಚಿಕಿತ್ಸೆಗಳಿಗೆ ಗರಿಷ್ಠ ವಯೋಮಿತಿ ನಿಗದಿಯಾಗಬೇಕೇ ಎಂಬಿತ್ಯಾದಿ ಸವಾಲುಗಳನ್ನು ನೆಟ್ಟಿಗರು ಎತ್ತುತ್ತಿದ್ದಾರೆ. ವಯಸ್ಸಾದ ಪೋಷಕರು ಮಕ್ಕಳನ್ನು ಹೇಗೆ ಸಾಕಿ ಬೆಳೆಸುತ್ತಾರೆ ಎಂಬ ಪ್ರಶ್ನೆ ಒಂದೆಡೆಯಾದರೆ, ಪೋಷಕರಾಗುವ ದಂಪತಿಯ ಭಾವನೆಗಳನ್ನು ಗೌರವಿಸಬೇಕು ಎಂಬ ವಾದವೂ ಕೇಳಿಬರುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja