ನವದೆಹಲಿ: ದೇಶಾದ್ಯಂತ ನಾಯಿಕೊಡೆಗಳಂತೆ ತಲೆಎತ್ತುತ್ತಿರುವ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ (ART) ಹಾಗೂ ಐವಿಎಫ್ (IVF) ಕೇಂದ್ರಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ(Central Government) ಭಾರಿ ಮಹತ್ವದ ನಿಯಮವನ್ನು ಜಾರಿಗೊಳಿಸಿದೆ.
ಇನ್ಮುಂದೆ ಎಲ್ಲಾ ಫಲವತ್ತತೆ ಚಿಕಿತ್ಸಾಲಯಗಳು (Fertility Clinics) ಮತ್ತು ವೀರ್ಯ ಬ್ಯಾಂಕುಗಳು (Sperm Banks) ಪ್ರತಿ ಐದು ವರ್ಷಗಳಿಗೊಮ್ಮೆ ಹಾಗೂ ಸರೊಗಸಿ ಚಿಕಿತ್ಸಾಲಯಗಳು ಪ್ರತಿ ಮೂರು ವರ್ಷಗಳಿಗೊಮ್ಮೆ ತಮ್ಮ ಲೈಸೆನ್ಸ್ ಅನ್ನು ಕಡ್ಡಾಯವಾಗಿ ನವೀಕರಿಸಿಕೊಳ್ಳಬೇಕಾಗುತ್ತದೆ. ಲೈಸೆನ್ಸ್ ಅವಧಿ ಮುಗಿಯುವ ಕನಿಷ್ಠ 60 ದಿನಗಳ ಮುಂಚಿತವಾಗಿ ರಾಷ್ಟ್ರೀಯ ART ಮತ್ತು ಸರೊಗಸಿ ನೋಂದಣಿ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ವಿಳಂಬವಾದರೆ ಡಬಲ್ ದಂಡ! ಯಾವ ಕ್ಲಿನಿಕ್‌ಗೆ ಎಷ್ಟು ಶುಲ್ಕ? ಹಂತ 1 IVF ಮತ್ತು ವೀರ್ಯ ಬ್ಯಾಂಕ್‌ಗಳು: ನವೀಕರಣ ಶುಲ್ಕ 25,000 ರೂ. ನಿಗದಿತ ಸಮಯ ಮೀರಿದರೆ 50,000 ರೂ. ದಂಡ. ಹಂತ 2 IVF ಚಿಕಿತ್ಸಾಲಯಗಳು: ನವೀಕರಣ ಶುಲ್ಕ 1 ಲಕ್ಷ ರೂ. ವಿಳಂಬವಾಗಿ ಅರ್ಜಿ ಸಲ್ಲಿಸಿದರೆ ಬರೋಬ್ಬರಿ 2 ಲಕ್ಷ ರೂ. ದಂಡ. ಸರ್ಕಾರಿ ಆಸ್ಪತ್ರೆಗಳಿಗೆ ವಿನಾಯಿತಿ: ಈ ಎಲ್ಲಾ ಕಠಿಣ ನಿಯಮ ಹಾಗೂ ನವೀಕರಣ ಶುಲ್ಕಗಳಿಂದ ಸರ್ಕಾರಿ ಸ್ವಾಮ್ಯದ ಆಸ್ಪತ್ರೆ ಮತ್ತು ಸಂಸ್ಥೆಗಳಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಗುಣಮಟ್ಟ ಮತ್ತು ರೋಗಿಗಳ ಸುರಕ್ಷತೆಗೆ ಆದ್ಯತೆ ನವದೆಹಲಿಯ ನರ್ಚರ್ ಕ್ಲಿನಿಕ್‌ನ ಐವಿಎಫ್ ತಜ್ಞೆ ಡಾ. ಅರ್ಚನಾ ಧವನ್ ಬಜಾಜ್ ಅವರ ಪ್ರಕಾರ, ಸದ್ಯ ದೇಶದ ಕೇವಲ ಶೇ. 20 ರಿಂದ 25 ರಷ್ಟು ಚಿಕಿತ್ಸಾಲಯಗಳಲ್ಲಿ ಮಾತ್ರ ಅಧಿಕೃತ ತಪಾಸಣೆ ನಡೆದಿದೆ. ಈ ಹೊಸ ನಿಯಮದಿಂದಾಗಿ ಕ್ಲಿನಿಕ್‌ಗಳು ತಮ್ಮ ಸೇವೆಗಳನ್ನು ಅಪ್‌ಗ್ರೇಡ್ ಮಾಡಿಕೊಳ್ಳಲೇಬೇಕಾಗುತ್ತದೆ ಮತ್ತು ರೋಗಿಗಳ ದಾಖಲೆಗಳನ್ನು ಉತ್ತಮವಾಗಿ ನಿರ್ವಹಿಸಲು ಇದು ಸಹಾಯ ಮಾಡುತ್ತದೆ. ಭಾರತದಲ್ಲಿ ಹೆಚ್ಚುತ್ತಿದೆ ಬಂಜೆತನದ ಸಮಸ್ಯೆ ಪ್ರಸ್ತುತ ಭಾರತದ ಸಂತಾನೋತ್ಪತ್ತಿ ಆರೋಗ್ಯ ಮಾರುಕಟ್ಟೆಯು 5,000 ಕ್ಕೂ ಹೆಚ್ಚು ಕ್ಲಿನಿಕ್‌ಗಳೊಂದಿಗೆ ಭಾರಿ ವೇಗದಲ್ಲಿ ಬೆಳೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಇದರ ಮೌಲ್ಯ ಬಿಲಿಯನ್ ಡಾಲರ್ ದಾಟುವ ನಿರೀಕ್ಷೆಯಿದೆ. ಮುಂಬೈನ ಲೀಲಾವತಿ ಆಸ್ಪತ್ರೆಯ ಐವಿಎಫ್ ತಜ್ಞ ಹೃಷಿಕೇಶ್ ಪೈ ಅವರು ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿದ್ದು, ಸಣ್ಣ ಚಿಕಿತ್ಸಾಲಯಗಳಿಗೆ ತೊಂದರೆಯಾಗದಂತೆ ಪ್ರಾಯೋಗಿಕವಾಗಿ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಹೊಸ ನಿಯಮಾವಳಿಗಳ ಪ್ರಕಾರ ಲೈಸೆನ್ಸ್ ನವೀಕರಣಕ್ಕೆ ನಿಗದಿತ ಶುಲ್ಕವನ್ನು ನಿಗದಿಪಡಿಸಲಾಗಿದ್ದು, ಸಮಯ ಮೀರಿದರೆ ಭಾರಿ ದಂಡ ತೆರಬೇಕಾಗುತ್ತದೆ:
ಅರ್ಜಿ ಸಲ್ಲಿಸಿದ 60 ದಿನಗಳ ಒಳಗೆ ತಜ್ಞ ಅಧಿಕಾರಿಗಳ ತಂಡವು ಚಿಕಿತ್ಸಾಲಯಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಿದೆ. ಎಲ್ಲಾ ಕ್ಲಿನಿಕಲ್ ಮತ್ತು ನೈತಿಕ ಮಾನದಂಡಗಳನ್ನು ಪಾಲಿಸಿದ್ದರೆ ಮಾತ್ರ ಪರವಾನಗಿ ನವೀಕರಣಗೊಳ್ಳಲಿದ್ದು, ನವೀಕರಿಸಿದ ಪ್ರಮಾಣಪತ್ರವನ್ನು ಚಿಕಿತ್ಸಾಲಯದ ಮುಂಭಾಗದಲ್ಲೇ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ವರದಿಯ ಪ್ರಕಾರ, ಭಾರತದಲ್ಲಿ ಸದ್ಯ ಸುಮಾರು ಶೇ. 15 ರಷ್ಟು ದಂಪತಿಗಳು ಬಂಜೆತನದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ದೇಶದಲ್ಲಿ ವಾಣಿಜ್ಯ ಸರೊಗಸಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದರೂ, ಯಾವುದೇ ಆರ್ಥಿಕ ವ್ಯವಹಾರವಿಲ್ಲದ ಪರಹಿತಚಿಂತನೆಯ (Altruistic) ಸರೊಗಸಿಗೆ ಭಾರಿ ಬೇಡಿಕೆಯಿದೆ.

