ಬೆಂಗಳೂರು: ಕಾವೇರಿ (Cauvery) ನದಿ ನೀರು ಹಂಚಿಕೆಯ ಮಹಾ ವಿವಾದವು ಇದೀಗ ಚಿತ್ರರಂಗಕ್ಕೂ ತಟ್ಟಿದ್ದು, ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ದಳಪತಿ ವಿಜಯ್ ನಟನೆಯ 'ಜನನಾಯಗನ್' (Jana Nayagan) ಸಿನಿಮಾದ ಪ್ರದರ್ಶನವನ್ನು ಕರ್ನಾಟಕದಾದ್ಯಂತ ಚಿತ್ರಮಂದಿರಗಳ ಮಾಲೀಕರು ರದ್ದುಗೊಳಿಸಿದ್ದಾರೆ.
ರಾಜ್ಯದಲ್ಲಿ ಸದ್ಯ ಸೃಷ್ಟಿಯಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಇದರ ನಡುವೆ, ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಜೊತೆ ನಡೆಸಬೇಕಾಗಿದ್ದ ದ್ವಿಪಕ್ಷೀಯ ಸಭೆಯನ್ನು ಮುಂದೂಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ ಪ್ರಾಧಿಕಾರಗಳು (CWRA, CWMA) ಮತ್ತು ಸುಪ್ರೀಂ ಕೋರ್ಟ್ ನೀಡಿರುವ ನಿಯಮಾವಳಿಗಳಿಗೆ ನಾವು ಬದ್ಧರಾಗಿರಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಮುಂದಿನ ಹೆಜ್ಜೆ ಇಡಲು ಭಾನುವಾರ ಸರ್ವಪಕ್ಷಗಳ ತುರ್ತು ಸಭೆ ಕರೆಯಲಾಗಿದೆ ಎಂದು ಅವರು ವಿವರಿಸಿದ್ದಾರೆ. ಆಗಸ್ಟ್ 13 ರಂದು ಇಡೀ ಕರ್ನಾಟಕ ಸ್ತಬ್ಧ! ವಿವಾದದ ನಡುವೆಯೂ ಬಾಕ್ಸ್ ಆಫೀಸ್‌ನಲ್ಲಿ ವಿಜಯ್ ಜಾದೂ
ಮತ್ತೊಂದೆಡೆ, ಕಾವೇರಿ ವಿಚಾರವಾಗಿ ಬೆಂಗಳೂರಿನಲ್ಲಿ ಸಭೆ ಸೇರಿದ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಮುಖಂಡ ವಾಟಾಳ್ ನಾಗರಾಜ್, ಆಗಸ್ಟ್ 13 ರಂದು ಬೃಹತ್ 'ಕರ್ನಾಟಕ ಬಂದ್' ಘೋಷಿಸಿದ್ದಾರೆ. ಈ ಪ್ರತಿಭಟನೆಗೆ ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 1,600 ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು, ಸಾವಿರಕ್ಕೂ ಅಧಿಕ ಪ್ರಗತಿಪರ ಒಕ್ಕೂಟಗಳು ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ನೇರ ಬೆಂಬಲ ಸೂಚಿಸಿವೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂಬುದು ಇವರೆಲ್ಲರ ಮುಖ್ಯ ಬೇಡಿಕೆಯಾಗಿದೆ. ಇದೇ ವೇಳೆ ಆಗಸ್ಟ್ 3 ರಂದು ಬೆಂಗಳೂರಿಗೆ ಬರಲಿರುವ ತಮಿಳುನಾಡು ಸಿಎಂ ವಿಜಯ್ ಅವರ ಭೇಟಿಗೆ ಎಚ್ಚರಿಕೆ ನೀಡಿರುವ ವಾಟಾಳ್ ನಾಗರಾಜ್, ಅವರು ಸೌಹಾರ್ದಯುತ ಮಾತುಕತೆಗೆ ಬಂದರೆ ಅಭ್ಯಂತರವಿಲ್ಲ, ಆದರೆ ಕಾವೇರಿ ನೀರಿಗಾಗಿ ಒತ್ತಡ ಹೇರಲು ಬಂದರೆ ಬೆಂಗಳೂರು ಏರ್‌ಪೋರ್ಟ್‌ಗೆ ಮುತ್ತಿಗೆ ಹಾಕಿ ತಡೆಯುವುದಾಗಿ ಆಕ್ರೋಶ ಹೊರಹಾಕಿದ್ದಾರೆ.
ಇಷ್ಟೆಲ್ಲಾ ಪ್ರಾದೇಶಿಕ ಹಾಗೂ ರಾಜಕೀಯ ಸಂಘರ್ಷಗಳ ಮಧ್ಯೆಯೂ ದಳಪತಿ ವಿಜಯ್ ಅವರ 'ಜನನಾಯಗನ್' ಚಿತ್ರ ವಿಶ್ವದಾದ್ಯಂತ ಕಲೆಕ್ಷನ್‌ನಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಸ್ಯಾಕ್ನಿಲ್ಕ್ ಸಂಸ್ಥೆಯ ಅಧಿಕೃತ ವರದಿಯ ಪ್ರಕಾರ, ವಾರದ ಸಾಮಾನ್ಯ ದಿನಗಳಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ, ಕಳೆದೆರಡು ದಿನಗಳ ಹಿಂದಷ್ಟೇ ಅಂದರೆ ಬುಧವಾರದ ಒಂದೇ ದಿನ ಬರೋಬ್ಬರಿ 10 ಕೋಟಿ ರೂಪಾಯಿ ಬಾಚಿಕೊಂಡಿದೆ. ಇದರೊಂದಿಗೆ ಚಿತ್ರದ ಒಟ್ಟು ಜಾಗತಿಕ ಗಳಿಕೆ ಭರ್ಜರಿ 255 ಕೋಟಿ ರೂಪಾಯಿಗಳ ಗಡಿಯನ್ನು ದಾಟಿದೆ. ಆದಾಗ್ಯೂ, ಕರ್ನಾಟಕದ ಮಾರುಕಟ್ಟೆಯಲ್ಲಿ ಸಿನಿಮಾ ಪ್ರದರ್ಶನ ಸ್ಥಗಿತಗೊಂಡಿರುವುದು ಮುಂಬರುವ ದಿನಗಳಲ್ಲಿ ಚಿತ್ರದ ಒಟ್ಟಾರೆ ಗಳಿಕೆಯ ಮೇಲೆ ಕೊಂಚ ಪ್ರಭಾವ ಬೀರುವ ಸಾಧ್ಯತೆಯಿದೆ.

