ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಚುನಾವಣಾ(MLC Election)ಕಣವು ಕುತೂಹಲ ಮೂಡಿಸಿದೆ. ಜೆಡಿಎಸ್(JDS) ನಾಯಕರಿಗೆ ಒಂದು ಲೆಕ್ಕದಲ್ಲಿ ಡಬಲ್ ಟೆನ್ಷನ್ ಶುರುವಾಗಿದೆ. ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವುದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರಿಗೆ(HD Kumarawamy) ಪ್ರತಿಷ್ಠೆಯ ಸವಾಲಾಗಿ ಪರಿಣಮಿಸಿದೆ.
ಎನ್ಡಿಎಯ(NDA) ಮೂರನೇ ಅಭ್ಯರ್ಥಿ ಗೆಲುವಿಗೆ ಸದ್ಯ ನಾಲ್ಕರಿಂದ ಐದು ಮತಗಳ ಕೊರತೆ ಇದೆ. ಈ ಮತಗಳನ್ನು ಕಾಂಗ್ರೆಸ್(Congress) ಪಾಳಯದಿಂದ ಸೆಳೆಯಬೇಕಾದ ಅನಿವಾರ್ಯತೆ ಜೆಡಿಎಸ್ ಮೇಲಿದೆ. ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡ ಇಬ್ಬರು ಗೆಲುವಿನ ಲೆಕ್ಕಾಚಾರ ಹೇಗಿದೆ? ಜೆಡಿಎಸ್ ಲೆಕ್ಕಾಚಾರ ಹೇಗಿದೆ? ಇಲ್ಲಿ ಜಾತಿ ಸಮೀಕರಣ ಕೂಡಾ ಪ್ರಮುಖ ಪಾತ್ರವನ್ನು ವಹಿಸುವ ಸಾಧ್ಯತೆಯಿಲ್ಲದಿಲ್ಲ. ಬಿಜೆಪಿ ಮತ್ತು ಯತ್ನಾಳ್ ಮತ್ತು ಜನಾರ್ದನ ರೆಡ್ಡಿಯವರ ಬೆಂಬಲವನ್ನು ಪಡೆದುಕೊಂಡು, ಗೌರಿಬಿದನೂರು, ಯಶವಂತಪುರ ಮತ್ತು ಯಲ್ಲಾಪುರದ ಶಾಸಕರ ಬೆಂಬಲವನ್ನು ಪಡೆಯುವಲ್ಲಿ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ, ಯಶಸ್ವಿಯಾದರೆ, ಜೆಡಿಎಸ್ ಅಭ್ಯರ್ಥಿ ಗೆಲುವನ್ನು ಸಾಧಿಸಬಹುದು. ಹಾಗಾಗಿ, ವಿಧಾನ ಪರಿಷತ್ ಚುನಾವಣೆ, ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂಓದಿ: ನಾನೇನು ಹರಿದಿಲ್ಲ ಎಂದ ಮೇಲೆ, ನನ್ನ ಬಳಿ ಏನು ಸಲಹೆ ಕೇಳುತ್ತಾರೆ? ಸಿಎಂ ಡಿಕೆಶಿ ನಡೆಗೆ ಕುಮಾರಣ್ಣ ಟಾಂಗ್!
ಇದು ಒಂದು ಕಡೆಯಾದರೆ, ಇನ್ನೊಂದು ಕಡೆ ಪಕ್ಷದೊಳಗೆ ಅಡ್ಡ ಮತದಾನದ ಭೀತಿ ಕಾಡುತ್ತಿದೆ. ಪ್ರಮುಖವಾಗಿ, ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಶಾಸಕರಾದ ಜಿ.ಟಿ. ದೇವೇಗೌಡ ಮತ್ತು ಹನೂರು ಮಂಜುನಾಥ್ ಅವರ ನಡೆ ನಿರ್ಣಾಯಕವಾಗಿದ್ದು, ಅವರ ಮತದಾನದ ಬಗ್ಗೆ ಆತಂಕವಿದೆ. ಈಗಾಗಲೇ ಅವರನ್ನು ಮನವೊಲಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. ಸದ್ಯದ ಸಂಖ್ಯಾಬಲದ ಲೆಕ್ಕಾಚಾರದ ಪ್ರಕಾರ, ಬಿಜೆಪಿಯ ಉಚ್ಚಾಟಿತ ಶಾಸಕರು ಮತ್ತು ಇಬ್ಬರು ಪಕ್ಷೇತರರ ನಡೆ ನಿರ್ಣಾಯಕವಾಗಲಿದೆ. ಇವರ ಬೆಂಬಲ ಯಾರಿಗೆ ಸಿಗಲಿದೆ ಎನ್ನುವುದರ ಮೇಲೆ, ಏಳನೇ ಸ್ಥಾನ ನಿರ್ಧಾರವಾಗಲಿದೆ. ಗೆಲುವಿಗೆ ಬೇಕಾಗಿರುವ ನಂಬರ್ 28.
ಕಾಂಗ್ರೆಸ್, ಸದ್ಯ 134 ಶಾಸಕರ ಬಲವನ್ನು ಹೊಂದಿದೆ ಮತ್ತು ಐದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ನಾಲ್ಕು ಅಭ್ಯರ್ಥಿಗಳಿಗೆ ಮತ ಚಲಾಯಿಸಿದ ನಂತರ (112), 22 ಹೆಚ್ಚುವರಿ ಮತಗಳು ಉಳಿಯಲಿದೆ. ಇನ್ನು ಆರು ಶಾಸಕರ ಬೆಂಬಲ ಅದಕ್ಕೆ ಬೇಕಿದೆ. ಸರ್ವೋದಯ ಪಾರ್ಟಿಯ ಒಬ್ಬರು (ದರ್ಶನ್ ಪುಟ್ಟಣ್ಣಯ್ಯ) ಮತ್ತು ಪಕ್ಷೇತರ ಶಾಸಕರು (ಗೌರಿಬಿದನೂರು, ಪುಟ್ಟಸ್ವಾಮಿ ಗೌಡ), ಇವರ ಬೆಂಬಲ ಕಾಂಗ್ರೆಸ್ಸಿಗೆ ಸಿಗಬಹುದು. ಆದರೂ, ನಾಲ್ಕು ಶಾಸಕರ ಕೊರತೆಯಾಗಲಿದೆ. ಇಲ್ಲಿ ಬಿಜೆಪಿಯಿಂದ ಉಚ್ಚಾಟಿತರಾಗಿರುವ ಶಿವರಾಮ್ ಹೆಬ್ಬಾರ್ ಮತ್ತು ಸೋಮಶೇಖರ್ ಅವರ ಬೆಂಬಲ ಕಾಂಗ್ರೆಸ್ಸಿಗೆ ಸಿಕ್ಕಿದರೂ, ಎರಡು ನಂಬರಿನ ಕೊರತೆಯಾಗಲಿದೆ.
ಬಿಜೆಪಿ ಸದ್ಯ 62 ಸ್ಥಾನವನ್ನು ಹೊಂದಿದೆ, ತಮ್ಮ ಇಬ್ಬರು ಅಭ್ಯರ್ಥಿಗೆ ಬೇಕಾದ ನಂಬರ್ (56) ನಂತರ, ಆರು ಹೆಚ್ಚುವರಿ ಮತಗಳು ಉಳಿಯಲಿದೆ. ಇನ್ನು, ಜೆಡಿಎಸ್ ಹದಿನೆಂಟು ಶಾಸಕರನ್ನು ಹೊಂದಿದೆ. ಎರಡು ಕೂಡಿಸಿದರೆ 24 ಆಗುತ್ತದೆ. ಇಲ್ಲಿ, ಜೆಡಿಎಸ್ಸಿಗೆ ನಾಲ್ಕು ಶಾಸಕರ ಬೆಂಬಲ ಬೇಕಾಗುತ್ತದೆ. ಬಿಜೆಪಿಯಿಂದ ಉಚ್ಚಾಟಿತರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಜನಾರ್ದನ ರೆಡ್ಡಿಯವರ ಬೆಂಬಲವನ್ನು ಪಡೆಯಲು ಜೆಡಿಎಸ್ಸಿಗೆ ಸಾಧ್ಯವಾದರೂ, ಮತ್ತೆ ಎರಡು ಸಂಖ್ಯಾಬಲದ ಕೊರತೆಯಾಗಲಿದೆ.

