ರಾಮನಗರ: ಕರ್ನಾಟಕ ರಾಜಕಾರಣದ (Karnataka Politics) ಪವರ್ ಹೌಸ್ ಎಂದೇ ಕರೆಯಲ್ಪಡುವ ರಾಮನಗರ ಜಿಲ್ಲೆಗೆ (ಪ್ರಸ್ತುತ ಬೆಂಗಳೂರು ದಕ್ಷಿಣ) ಈಗ ಮತ್ತೊಮ್ಮೆ ಮುಖ್ಯಮಂತ್ರಿ ಗದ್ದುಗೆ ಒಲಿದುಬಂದಿದೆ. ಕಾಂಗ್ರೆಸ್ ಹೈಕಮಾಂಡ್‌ನ ನಿರ್ಧಾರದಂತೆ ಕನಕಪುರ ಕ್ಷೇತ್ರವನ್ನು ಪ್ರತಿನಿಧಿಸುವ ಉಪಮುಖ್ಯಮಂತ್ರಿ ಡಿ.ಕೆ.
ಶಿವಕುಮಾರ್ ಅವರ ಸಿಎಂ ಪಟ್ಟಾಭಿಷೇಕ ಬಹುತೇಕ ಅಂತಿಮಗೊಂಡಿದೆ. ಅಂದುಕೊಂಡಂತೆ ಎಲ್ಲವೂ ನಡೆದು ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೆ, ರಾಮನಗರ ಜಿಲ್ಲೆಯಿಂದ ಈ ಅತ್ಯುನ್ನತ ಹುದ್ದೆಗೇರಿದ ಐದನೇ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅಲ್ಲದೆ, ಕೆಂಗಲ್ ಹನುಮಂತಯ್ಯನವರ ನಂತರ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿಯಾದ ಜಿಲ್ಲೆಯ ಎರಡನೇ ನಾಯಕ ಎಂಬ ಇತಿಹಾಸವನ್ನೂ ಅವರು ಬರೆಯಲಿದ್ದಾರೆ.
1. ಕೆಂಗಲ್ ಹನುಮಂತಯ್ಯ (ಕಾಂಗ್ರೆಸ್)
ಕರ್ನಾಟಕದ ಮೊದಲ ಚುನಾಯಿತ ಮುಖ್ಯಮಂತ್ರಿ ಎಂಬ ಐತಿಹಾಸಿಕ ಖ್ಯಾತಿ ಕೆಂಗಲ್ ಹನುಮಂತಯ್ಯನವರದ್ದು. ಇವರು ಮೂಲತಃ ರಾಮನಗರ ತಾಲೂಕಿನವರಾಗಿದ್ದು, ರಾಜ್ಯದ ಹೆಮ್ಮೆಯ ಆಡಳಿತ ಸೌಧ ವಿಧಾನಸೌಧ ನಿರ್ಮಿಸಿದ ಆಧುನಿಕ ಶಿಲ್ಪಿ. ಅಂದಿನ ಮೈಸೂರು ರಾಜ್ಯದಲ್ಲಿ 1952 ಮತ್ತು 1957ರ ಚುನಾವಣೆಗಳಲ್ಲಿ ರಾಮನಗರ ಕ್ಷೇತ್ರದಿಂದಲೇ ಸ್ಪರ್ಧಿಸಿ ಆಯ್ಕೆಯಾಗಿದ್ದರು. 1952ರ ಮೊದಲ ವಿಧಾನಸಭೆಯಲ್ಲಿ ಮುಖ್ಯಮಂತ್ರಿಯಾದ ಇವರು 4 ವರ್ಷ 5 ತಿಂಗಳ ಕಾಲ ಅತ್ಯುತ್ತಮ ಆಡಳಿತ ನೀಡಿದ್ದರು.
2. ರಾಮಕೃಷ್ಣ ಹೆಗಡೆ (ಜನತಾ ಪಕ್ಷ)
ರಾಜ್ಯದಲ್ಲಿ 1983ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರವಾಗಿ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ ರಾಮಕೃಷ್ಣ ಹೆಗಡೆ ಅವರಿಗೆ ಸಿಎಂ ಆಗುವ ಯೋಗ ಒದಗಿಬಂತು. ವಿಶೇಷವೆಂದರೆ, ಆ ಸಮಯದಲ್ಲಿ ಹೆಗಡೆ ಅವರು ವಿಧಾನಸಭೆ ಅಥವಾ ವಿಧಾನ ಪರಿಷತ್‌ನ ಸದಸ್ಯರಾಗಿರಲಿಲ್ಲ. ಆಗ ಕನಕಪುರ ಕ್ಷೇತ್ರದಿಂದ ಜನತಾ ಪರಿವಾರದಿಂದ ಮೊದಲ ಬಾರಿಗೆ ಗೆದ್ದಿದ್ದ ಹಿರಿಯ ನಾಯಕ ಪಿ.ಜಿ.ಆರ್. ಸಿಂಧ್ಯ ಅವರು ಹೆಗಡೆ ಅವರಿಗಾಗಿ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟರು. ಬಳಿಕ ನಡೆದ ಉಪಚುನಾವಣೆಯಲ್ಲಿ ಕನಕಪುರದಿಂದ ಗೆದ್ದ ಹೆಗಡೆ ಅವರು ಒಂದು ವರ್ಷ ಕಾಲ ಸಿಎಂ ಆಗಿ ಅಧಿಕಾರ ನಡೆಸಿದರು.
3. ಎಚ್.ಡಿ. ದೇವೇಗೌಡ (ಜನತಾ ದಳ)
ಮಣ್ಣಿನ ಮಗ ಎಚ್.ಡಿ. ದೇವೇಗೌಡ ಅವರು 1994ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದರು. ಆ ಚುನಾವಣೆಯಲ್ಲಿ ಜನತಾ ದಳ 115 ಸ್ಥಾನಗಳ ಪ್ರಚಂಡ ಬಹುಮತ ಪಡೆದ ಹಿನ್ನೆಲೆಯಲ್ಲಿ ಗೌಡರು ಮುಖ್ಯಮಂತ್ರಿಯಾದರು. ರಾಮನಗರದ ಶಾಸಕರಾಗಿ 17 ತಿಂಗಳುಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ದೇವೇಗೌಡರು, ಬದಲಾದ ಜಾಗತಿಕ ರಾಜಕೀಯ ಬೆಳವಣಿಗೆಯಿಂದಾಗಿ ಸಿಎಂ ಸ್ಥಾನಕ್ಕೆ ರಿಸೈನ್ ಮಾಡಿ ದೇಶದ ಪ್ರಧಾನಮಂತ್ರಿ (PM) ಹುದ್ದೆಗೇರುವ ಮೂಲಕ ಇತಿಹಾಸ ಸೃಷ್ಟಿಸಿದರು.
4. ಎಚ್.ಡಿ. ಕುಮಾರಸ್ವಾಮಿ (ಜೆಡಿಎಸ್)
ರಾಮನಗರ ಜಿಲ್ಲೆಯಿಂದ ಎರಡು ಬಾರಿ ಮುಖ್ಯಮಂತ್ರಿ ಹುದ್ದೆಗೇರಿದ ಏಕೈಕ ಹಿರಿಮೆ ಎಚ್.ಡಿ. ಕುಮಾರಸ್ವಾಮಿ (ಎಚ್‌ಡಿಕೆ) ಅವರದ್ದು. ತಮ್ಮ ತಂದೆ ದೇವೇಗೌಡರ ಅದೃಷ್ಟದ ಕ್ಷೇತ್ರವಾದ ರಾಮನಗರದಿಂದಲೇ 2004ರಲ್ಲಿ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾದ ಅವರು, ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮೊದಲ ಬಾರಿಗೆ 20 ತಿಂಗಳು ಸಿಎಂ ಆಗಿದ್ದರು. ತದನಂತರ 2018ರ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ಗೆದ್ದು, ಚನ್ನಪಟ್ಟಣವನ್ನು ಉಳಿಸಿಕೊಂಡರು. ಆ ವೇಳೆ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾದಾಗ ರಚನೆಯಾದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಎರಡನೇ ಬಾರಿಗೆ ಸಿಎಂ ಆಗಿ 14 ತಿಂಗಳು ಅಧಿಕಾರ ನಡೆಸಿದರು.
ಐದನೇ ನಾಯಕನಾಗಿ ಡಿ.ಕೆ. ಶಿವಕುಮಾರ್
ಜಿಲ್ಲೆಯ ಕನಕಪುರ ಕ್ಷೇತ್ರದಿಂದ ಸತತವಾಗಿ ಗೆಲ್ಲುತ್ತಾ ಬಂದು, ಕಲ್ಲು ಬಂಡೆಯಂತೆ ಪಕ್ಷ ಸಂಘಟನೆ ಮಾಡಿ ಕಡೆಗೂ ಮುಖ್ಯಮಂತ್ರಿ ಸ್ಥಾನದ ತುದಿಗೆ ಬಂದು ನಿಂತಿದ್ದಾರೆ ಡಿ.ಕೆ. ಶಿವಕುಮಾರ್. ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ಸಾಲಿಗೆ ಈಗ 5ನೇ ನಾಯಕನಾಗಿ ಕನಕಪುರದ ಬಂಡೆ ಡಿಕೆಶಿ ಸೇರ್ಪಡೆಯಾಗುತ್ತಿರುವುದು ಇಡೀ ಜಿಲ್ಲೆಯ ಜನರಲ್ಲಿ ಹೊಸ ಸಂಚಲನ ಮೂಡಿಸಿದೆ.

