ಬೆಂಗಳೂರು: ವಿಧಾನಸಭೆ ಸ್ಪೀಕರ್ ಆಗಿದ್ದ ಯು.ಟಿ. ಖಾದರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಡಿ.ಕೆ. ಶಿವಕುಮಾರ್ (Dk Shivakumar ) ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಖಾದರ್ ನಿರ್ಗಮನದಿಂದ ತೆರವಾಗಿರುವ ಸಾಂವಿಧಾನಿಕ ಮಹತ್ವದ ಸಭಾಧ್ಯಕ್ಷ ಗಾದಿಗೆ (Speaker ) ಮುಂದಿನ ಸಾರಥಿ ಯಾರು ಎಂಬ ಕುತೂಹಲ ಈಗ ತೀವ್ರಗೊಂಡಿದೆ.
ಸದ್ಯ ಸ್ಪೀಕರ್ ಸ್ಥಾನಕ್ಕೆ ಹಿರಿಯ ಹಾಗೂ ಸಂಸದೀಯ ವ್ಯವಹಾರಗಳ ಆಳವಾದ ಜ್ಞಾನ ಹೊಂದಿರುವ ಅನುಭವಿ ರಾಜಕಾರಣಿ ಎಚ್.ಕೆ. ಪಾಟೀಲ್ (HKP) ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ. ಇವರ ಜೊತೆಗೆ ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರ ಹೆಸರೂ ಸಹ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ.
ಇವರಷ್ಟೇ ಅಲ್ಲದೆ ಹಿರಿಯ ಶಾಸಕರಾದ ಬಸವರಾಜ ರಾಯರೆಡ್ಡಿ ಮತ್ತು ಟಿ.ಬಿ. ಜಯಚಂದ್ರ ಅವರ ಹೆಸರುಗಳು ವರಿಷ್ಠರ ಅಂಗಳದಲ್ಲಿವೆ. ಪ್ರಾದೇಶಿಕ ಮತ್ತು ಸಾಮಾಜಿಕ ಸಮತೋಲನ ಕಾಯ್ದುಕೊಂಡು, ಸದನವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ಹಿರಿಯ ನಾಯಕರೊಬ್ಬರನ್ನು ಮುಂದಿನ ಎರಡು ದಿನಗಳಲ್ಲಿ ಸ್ಪೀಕರ್ ಸ್ಥಾನಕ್ಕೆ ಅಂತಿಮಗೊಳಿಸುವ ಸಾಧ್ಯತೆಯಿದೆ.
ಸಚಿವ ಸಂಪುಟ ರಚನೆಯಲ್ಲಿ ಜಾಗ ಸಿಗದ ಕೆಲವು ಹಿರಿಯ ಅತೃಪ್ತ ನಾಯಕರನ್ನು ಸಮಾಧಾನಪಡಿಸಲು ಈ ಗೌರವಾನ್ವಿತ ಸಾಂವಿಧಾನಿಕ ಹುದ್ದೆಯನ್ನು ಬಳಸಿಕೊಳ್ಳಲು ಕಾಂಗ್ರೆಸ್ ತಂತ್ರ ರೂಪಿಸಿದೆ. ಪ್ರಾದೇಶಿಕ, ಜಾತಿ ಮತ್ತು ಸಾಮಾಜಿಕ ಸಮತೋಲನವನ್ನು ಕಾಯ್ದುಕೊಳ್ಳುವ ಜೊತೆಗೆ, ಸದನದಲ್ಲಿ ಸರ್ಕಾರದ ಪರವಾಗಿ ಬ್ಯಾಟ್ ಮಾಡಬಲ್ಲ ಚತುರ ನಾಯಕರೊಬ್ಬರನ್ನು ಮುಂದಿನ ಎರಡು ದಿನಗಳಲ್ಲಿ ಸ್ಪೀಕರ್ ಸ್ಥಾನಕ್ಕೆ ಅಧಿಕೃತವಾಗಿ ಅಂತಿಮಗೊಳಿಸುವ ಸಾಧ್ಯತೆಯಿದೆ.

