ತೆಹರಾನ್ : ಇಸ್ರೇಲ್-ಅಮೆರಿಕ ಜಂಟಿ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದ ಇರಾನ್‌ನ (Iran) ಸರ್ವೋಚ್ಚ ನಾಯಕ (Supreme Leader) ಅಯತೊಲ್ಲಾ ಅಲಿ ಖಮೇನಿ (Ayatollah Khamenei) ಅವರ ಅಧಿಕೃತ ಅಂತ್ಯಕ್ರಿಯೆಯ (Funeral) ವಿಧಿವಿಧಾನಗಳು ಆರಂಭಗೊಂಡಿವೆ.
37 ವರ್ಷಗಳ ಕಾಲ ಇರಾನ್ ಅನ್ನು ಮುನ್ನಡೆಸಿದ್ದ ಖಮೇನಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ತೆಹರಾನ್‌ನ 'ಗ್ರಾಂಡ್ ಮೊಸಲ್ಲಾ' ಪ್ರಾರ್ಥನಾ ಮಂದಿರದಲ್ಲಿ ಇರಿಸಲಾಗಿದೆ. ಇರಾನ್ ಸರ್ಕಾರದ ಆಹ್ವಾನದ ಮೇರೆಗೆ ಭಾರತ ಸರ್ಕಾರದ ಪರವಾಗಿ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ಪಬಿತ್ರಾ ಮಾರ್ಗರಿಟಾ ಮತ್ತು ಬಿಹಾರದ ರಾಜ್ಯಪಾಲರಾದ ಸೈಯದ್ ಅತಾ ಹಸ್ನೈನ್ ಅವರು ಶುಕ್ರವಾರ ತೆಹರಾನ್‌ಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
ಇರಾನ್‌ನಲ್ಲಿ ಒಂದು ವಾರ ಶೋಕಾಚರಣೆ: ಭಾರಿ ಭದ್ರತೆ
ಯುದ್ಧದ ಕಾರಣದಿಂದಾಗಿ ತಡವಾಗಿದ್ದ ಅಂತ್ಯಕ್ರಿಯೆ ಪ್ರಕ್ರಿಯೆಗಳು, ಸದ್ಯ ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯಲ್ಲಿ ನಡೆಯುತ್ತಿವೆ.
ಖಮೇನಿ ಗೌರವಾರ್ಥವಾಗಿ ಇರಾನ್‌ನಲ್ಲಿ ಒಂದು ವಾರದ ಕಾಲ ದೇಶಾದ್ಯಂತ ಬೃಹತ್ ಶವಯಾತ್ರೆ ಮೆರವಣಿಗೆಗಳನ್ನು ಹಮ್ಮಿಕೊಳ್ಳಲಾಗಿದೆ.
ತೆಹರಾನ್ ಬಳಿಕ ಇವರ ಪಾರ್ಥಿವ ಶರೀರವನ್ನು ಶಿಯಾ ಸಮುದಾಯದ ಪವಿತ್ರ ಕೇಂದ್ರಗಳಾದ ಕ್ಯೂಮ್, ನಜಾಫ್ ಮತ್ತು ಕರ್ಬಲಾವಿಗೆ ಕೊಂಡೊಯ್ಯಲಾಗುವುದು. ಮುಂಬರುವ ಗುರುವಾರ ಮಶಾದ್ ನಗರದ ಪವಿತ್ರ ತೀರ್ಥಕ್ಷೇತ್ರದಲ್ಲಿ ಇವರ ಅಂತ್ಯಕ್ರಿಯೆ ನೆರವೇರಲಿದೆ.
ಶನಿವಾರ (ಜುಲೈ 4) ನಡೆಯಲಿರುವ ಮುಖ್ಯ ಅಧಿಕೃತ ಕಾರ್ಯಕ್ರಮಕ್ಕಾಗಿ ಲಕ್ಷಾಂತರ ಜನ ಹಾಗೂ ಜಾಗತಿಕ ಗಣ್ಯರು ತೆಹರಾನ್‌ಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ಪ್ರದೇಶವನ್ನು ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಹೈ-ಸೆಕ್ಯುರಿಟಿ ಕ್ಯಾಂಪ್ ಆಗಿ ಪರಿವರ್ತಿಸಿದ್ದಾರೆ.
ಭಾರತದ ಪರವಾಗಿ ಸಂತಾಪ ಸೂಚನೆ
ಕೇಂದ್ರ ಸಚಿವ ಪಬಿತ್ರಾ ಮಾರ್ಗರಿಟಾ ಮತ್ತು ಬಿಹಾರ ರಾಜ್ಯಪಾಲರು ಭಾರತದ ಜನರ ಪರವಾಗಿ ಇರಾನ್ ನಾಯಕನಿಗೆ ಗೌರವ ಸಲ್ಲಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣವಾದ 'X' ನಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಇತ್ತೀಚಿನ ಪಶ್ಚಿಮ ಏಷ್ಯಾ ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ಅಮಾಯಕರ ಕುಟುಂಬಗಳಿಗೂ ಬಿಹಾರ ರಾಜ್ಯಪಾಲರು ಭಾರತದ ಪರವಾಗಿ ತೀವ್ರ ಸಂತಾಪ ಸೂಚಿಸಿದ್ದಾರೆ.

