ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಭಾರಿ ಕುತೂಹಲ ಮೂಡಿಸಿದ್ದ ಸೌಹಾರ್ದಯುತ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಕೊನೆಗೂ ಮುಕ್ತಾಯದ ಹಂತ ತಲುಪಿದೆ. ಕಳೆದ ಗುರುವಾರ (ಮೇ 28) ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಶನಿವಾರ (ಮೇ 30) ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಡಿ.ಕೆ.
ಶಿವಕುಮಾರ್ ಅವರನ್ನು ನೂತನ ನಾಯಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಜೂನ್ 3ರ ಬುಧವಾರ ಸಂಜೆ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಖಜಾನೆ ಲೆಕ್ಕಾಚಾರ ಬಳಿಕ ಸಿಎಂ ಬದಲಾವಣೆ! ಹಾಲು ಕೆಟ್ಟರೂ ಹಾಲುಮತ ಕೆಡುವುದಿಲ್ಲ ಅದರಂತೆ, ಸಿದ್ದರಾಮಯ್ಯನವರ ಅಪಾರ ಜನಬೆಂಬಲ ಮತ್ತು ಶಾಸಕರ ಶಕ್ತಿಯನ್ನು ಅರಿತಿದ್ದ ಕಾಂಗ್ರೆಸ್ ಹೈಕಮಾಂಡ್, ಅತ್ಯಂತ ಚಾಣಾಕ್ಷತನದಿಂದ ಮತ್ತು ಗೌರವಯುತವಾಗಿ ಅವರ ಮನವೊಲಿಸಿ ರಾಜೀನಾಮೆ ಪಡೆದಿದೆ. ಯಾವುದೇ ಗದ್ದಲವಿಲ್ಲದೆ ಅತ್ಯಂತ ಸ್ಮೂತ್ ಆಗಿ ಅಧಿಕಾರ ಹಸ್ತಾಂತರ ನಡೆದಿರುವುದು ಶ್ರೀಗಳ ಮಾತಿಗೆ ಮತ್ತಷ್ಟು ತೂಕ ತಂದಿದೆ. ಜಾಗತಿಕ ಭವಿಷ್ಯವೂ ಸತ್ಯವಾಗಿತ್ತು!
ರಾಜ್ಯ ರಾಜಕೀಯದ ಈ ವಿದ್ಯಮಾನಗಳ ಮಧ್ಯೆ, ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಹಳ್ಳಿ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು (Kodi Shree) ಈ ಹಿಂದೆ ನುಡಿದಿದ್ದ ರಾಜಕೀಯ ಭವಿಷ್ಯಗಳು ಅಕ್ಷರಶಃ ನಿಜವಾಗಿರುವುದು ಈಗ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಅಧಿಕಾರ ಹಸ್ತಾಂತರದ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗಲೆಲ್ಲಾ ಕೋಡಿಶ್ರೀಗಳು, ಏನಿದ್ದರೂ ಖಜಾನೆ ಲೆಕ್ಕಾಚಾರ ಮುಗಿದ ನಂತರವೇ ಎಲ್ಲವೂ ನಿರ್ಧಾರವಾಗಲಿದೆ ಎಂದು ನಿಗೂಢವಾಗಿ ಹೇಳುತ್ತಿದ್ದರು. ಇಲ್ಲಿ ಖಜಾನೆ ಲೆಕ್ಕಾಚಾರ ಎಂದರೆ ರಾಜ್ಯದ ವಾರ್ಷಿಕ ಆಯವ್ಯಯ (ಬಜೆಟ್) ಮಂಡನೆ ಎಂಬುದು ಈಗ ಸಾಬೀತಾಗಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಬಜೆಟ್ ಮಂಡಿಸಿ, ಆರ್ಥಿಕ ಲೆಕ್ಕಾಚಾರಗಳನ್ನು ಒಂದು ಹಂತಕ್ಕೆ ತಂದ ಕೆಲವು ತಿಂಗಳುಗಳ ಬಳಿಕವೇ ಈ ಹಸ್ತಾಂತರ ಪ್ರಕ್ರಿಯೆ ನಡೆದಿದೆ.
ಸಿದ್ದರಾಮಯ್ಯನವರನ್ನು ಬಲವಂತವಾಗಿ ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವೇ ಇಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದ್ದರು. ಒಂದು ಗಾದೆ ಮಾತಿದೆ, ಹಾಲು ಕೆಟ್ಟರೂ ಹಾಲುಮತ ಕೆಡುವುದಿಲ್ಲ. ಇತಿಹಾಸದಲ್ಲಿ ಹಕ್ಕಬುಕ್ಕರು ವಿಜಯನಗರ ಸಾಮ್ರಾಜ್ಯ ಕಟ್ಟಿದರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ದೇಶಕ್ಕಾಗಿ ಹೋರಾಡಿದರು. ಇವರೆಲ್ಲಾ ಹಾಲುಮತ (ಕುರುಬ) ಸಮುದಾಯದವರು. ಸಮಾಜಕ್ಕೆ ಈ ಸಮುದಾಯದ ಕೊಡುಗೆ ಅಪಾರ. ನಮ್ಮ ಸಿದ್ದರಾಮಯ್ಯನವರೂ ಅದೇ ಸಮುದಾಯದವರು. ಅವರನ್ನು ಯಾರೂ ಬಲವಂತವಾಗಿ ಇಳಿಸಲು ಸಾಧ್ಯವಿಲ್ಲ, ಅವರಾಗಿಯೇ ಬಿಟ್ಟರೆ ಮಾತ್ರ ಈ ಸ್ಥಾನ ಬದಲಾವಣೆ ಸಾಧ್ಯ ಎಂದು ಕೋಡಿಶ್ರೀಗಳು ಭವಿಷ್ಯ ನುಡಿದಿದ್ದರು.
ಕೇವಲ ರಾಜ್ಯ ರಾಜಕೀಯ ಮಾತ್ರವಲ್ಲದೆ, ಕೋಡಿಶ್ರೀಗಳು ಕಳೆದ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ನುಡಿದಿದ್ದ ಜಾಗತಿಕ ಭವಿಷ್ಯವೂ ನಿಜವಾಗಿದ್ದನ್ನು ಜನರು ಈಗ ಸ್ಮರಿಸುತ್ತಿದ್ದಾರೆ. ವಿಶ್ವದ ಪ್ರಭಾವಿ ನಾಯಕನೊಬ್ಬನ ಹತ್ಯೆಯಾಗಲಿದೆ ಮತ್ತು ಜಾಗತಿಕ ಯುದ್ಧದ ಭೀತಿ ಎದುರಾಗಲಿದೆ ಎಂದು ಶ್ರೀಗಳು ಹೇಳಿದ್ದರು. ಅದರ ಬೆನ್ನಲ್ಲೇ ಇಸ್ರೇಲ್ ಮತ್ತು ಅಮೆರಿಕದ ಜಂಟಿ ದಾಳಿಯಲ್ಲಿ ಇರಾನ್ ದೇಶದ ಸರ್ವೋಚ್ಚ ನಾಯಕ ಆಯತೊಲ್ಲ ಆಲಿ ಖಮೇನಿ ಸಾವನ್ನಪ್ಪಿದ್ದರು.

