Dailyhunt
KOLAR: ಹಲವರ ಮೇಲೆ ಕೋತಿಗಳಿಂದ ದಾಳಿ, 15ಕ್ಕೂ ಹೆಚ್ಚು ಮಂದಿಗೆ ತೀವ್ರ ಗಾಯ!

KOLAR: ಹಲವರ ಮೇಲೆ ಕೋತಿಗಳಿಂದ ದಾಳಿ, 15ಕ್ಕೂ ಹೆಚ್ಚು ಮಂದಿಗೆ ತೀವ್ರ ಗಾಯ!

Navasamaja.com 2 weeks ago

ಕೋಲಾರ ನಗರದ (Kolar) ಹೊರವಲಯದಲ್ಲಿರುವ ಪ್ರಸಿದ್ಧ ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರವಾದ ಅಂತರಗಂಗೆಯಲ್ಲಿ (Antharagange) (ದಕ್ಷಿಣ ಕಾಶಿ) ಮಂಗಗಳ ಹಾವಳಿ ಮಿತಿಮೀರಿದ್ದು, ಪ್ರವಾಸಿಗರು (Tourists) ಮತ್ತು ಭಕ್ತರ ಮೇಲೆ ನಡೆಸಿದ ದಾಳಿಯಲ್ಲಿ 15ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ (Injury).

ಬೇಸಿಗೆಯ ಬಿಸಿಲು ಏರುತ್ತಿದ್ದಂತೆ ಅರಣ್ಯ ಪ್ರದೇಶದಲ್ಲಿ ಆಹಾರ ಮತ್ತು ನೀರಿನ ಅಭಾವ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಹಸಿವಿನಿಂದ ಕಂಗಾಲಾಗಿರುವ ಸಾವಿರಾರು ಕೋತಿಗಳ ಹಿಂಡು, ಕ್ಷೇತ್ರಕ್ಕೆ ಬರುವ ಸಾರ್ವಜನಿಕರ ಮೇಲೆ ಎರಗುತ್ತಿವೆ. ಮಂಗಗಳ ಹಿಂಸಾತ್ಮಕ ವರ್ತನೆಯಿಂದಾಗಿ ಗಾಯಗೊಂಡಿರುವ ಪ್ರವಾಸಿಗರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕ್ಷೇತ್ರದಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ಅಶ್ವಿನಿ ಎಂಬ ಮಹಿಳೆಯ ತಲೆಗೆ ಕೋತಿಗಳು ಬಲವಾಗಿ ಕಚ್ಚಿದ್ದು, ಗಾಯದ ತೀವ್ರತೆಯಿಂದಾಗಿ ಅವರಿಗೆ ನಾಲ್ಕು ಹೊಲಿಗೆಗಳನ್ನು ಹಾಕಲಾಗಿದೆ. ಇದರೊಂದಿಗೆ ಶ್ರೀನಾಥ್ ಎಂಬ ಪ್ರವಾಸಿಗನ ಕೈಗೆ ಕೋತಿಗಳು ಕಚ್ಚಿ ಗಾಯಗೊಳಿಸಿವೆ. ಅಷ್ಟೇ ಅಲ್ಲದೆ, ಬೆಂಗಳೂರು ಮೂಲದ ಭವ್ಯ ಎಂಬ ಮಹಿಳೆಯ ಕಿವಿಯನ್ನೇ ಕೋತಿಗಳು ಕಚ್ಚಿ ಹರಿದುಹಾಕಿವೆ ಎಂದು ವರದಿಯಾಗಿದೆ.

ಸ್ಥಳೀಯರ ಆಕ್ರೋಶ ಮತ್ತು ಆಗ್ರಹ

ಅಂತರಗಂಗೆ ಕ್ಷೇತ್ರವು ಮುಜರಾಯಿ ಮತ್ತು ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ. ಪ್ರತಿ ವರ್ಷ ಬೇಸಿಗೆಯಲ್ಲಿ ಕಾಡುಪ್ರಾಣಿಗಳಿಗೆ ಕುಡಿಯುವ ನೀರು ಮತ್ತು ಆಹಾರದ ವ್ಯವಸ್ಥೆ ಇಲ್ಲದೆ ಇಂತಹ ಘಟನೆಗಳು ಮರುಕಳಿಸುತ್ತವೆ. ಮಂಗಗಳು ರೋಗಗ್ರಸ್ತವಾದಂತೆ ವರ್ತಿಸುತ್ತಿದ್ದು, ಪ್ರವಾಸಿಗರ ಪ್ರಾಣಕ್ಕೆ ಸಂಚಕಾರ ತಂದೊಡ್ಡಿವೆ.

ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಗಳು ತಕ್ಷಣವೇ ಎಚ್ಚೆತ್ತುಕೊಂಡು, ಅಂತರಗಂಗೆ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗೆ ಆಹಾರ ಮತ್ತು ನೀರಿನ ಸಮರ್ಪಕ ವ್ಯವಸ್ಥೆ ಮಾಡಬೇಕು. ಹಾಗೆಯೇ, ಪ್ರವಾಸಿಗರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮತ್ತು ಭಕ್ತರು ತೀವ್ರವಾಗಿ ಒತ್ತಾಯಿಸಿದ್ದಾರೆ.

ಇದನ್ನೂಓದಿ: ಕರ್ತವ್ಯನಿರತ ಮಹಿಳಾ ಪಿಎಸ್‌ಐ ನಾಪತ್ತೆ, ಮಗಳಿಂದ ದೂರು ದಾಖಲು

Dailyhunt
Disclaimer: This content has not been generated, created or edited by Dailyhunt. Publisher: Navasamaja