ಬೆಂಗಳೂರು: ಇನ್ಮುಂದೆ ರಾಜ್ಯ (Karnataka) ಸಾರಿಗೆ ಇಲಾಖೆಯ (KSRTC, BMTC, NWKRTC, KKRTC) ಎಲ್ಲಾ ಬಸ್‌ಗಳ ಕಿಟಕಿಗಳಿಗೆ ಕಡ್ಡಾಯವಾಗಿ ಕಬ್ಬಿಣದ ಸರಳುಗಳನ್ನು (Iron Bars) ಅಳವಡಿಸುವಂತೆ ಸಾರಿಗೆ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ.
ಗುಟ್ಕಾ ಉಗುಳಲು ಹೋಗಿ ವಿದ್ಯಾರ್ಥಿಯೊಬ್ಬ ಭೀಕರವಾಗಿ ಪ್ರಾಣ ಕಳೆದುಕೊಂಡ ಬೆನ್ನಲ್ಲೇ, ರಾಜ್ಯ ಸರ್ಕಾರಿ ಬಸ್‌ಗಳ ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಈ ಮಹತ್ವದ ಹೆಜ್ಜೆಯನ್ನು ಇಡಲಾಗಿದೆ. ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಅವರು ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೋರಿ ಸಾರಿಗೆ ಇಲಾಖೆಗೆ ಅಧಿಕೃತ ಪತ್ರ ರವಾನಿಸಿದ್ದಾರೆ. ಈ ನಿರ್ಧಾರಕ್ಕೆ ಕಾರಣವಾದ ಆ ಭೀಕರ ದುರಂತ! ಇತ್ತೀಚೆಗೆ ಶಿರೂರು ಗ್ರಾಮದ ಐಟಿಐ ವಿದ್ಯಾರ್ಥಿ ಫಕ್ಕಿರೇಶ (17) ಎಂಬಾತ ಹುಬ್ಬಳ್ಳಿಯಿಂದ ಗದಗ ಜಿಲ್ಲೆಯ ಲಕ್ಷ್ಮೀಶ್ವರಕ್ಕೆ ವಾಯುವ್ಯ ಸಾರಿಗೆ (NWKRTC) ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ. ಈ ವೇಳೆ ಗುಟ್ಕಾ ಉಗುಳಲು ಬಸ್‌ನ ಹಿಂಬದಿ ಸೀಟಿನ ಕಿಟಕಿಯಿಂದ ತಲೆಯನ್ನು ಹೊರಹಾಕಿದ್ದಾಗ, ಹಿಂದಿನಿಂದ ಅತಿವೇಗವಾಗಿ ಬಂದ ಟಿಪ್ಪರ್ ಲಾರಿಯೊಂದು ಆತನ ತಲೆಗೆ ಬಲವಾಗಿ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ವಿದ್ಯಾರ್ಥಿಯ ತಲೆ ದೇಹದಿಂದ ಬೇರ್ಪಟ್ಟು ರಸ್ತೆಗೆ ಬಿದ್ದ ರಕ್ತಸಿಕ್ತ ಘಟನೆ ನಡೆದಿತ್ತು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪ್ರಾಧಿಕಾರ, ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಈ ಸೂಚನೆ ನೀಡಿದೆ. ಪತ್ರದಲ್ಲಿರುವ ಪ್ರಮುಖ ಅಂಶಗಳು ಹೀಗಿವೆ ಕಾನೂನು ಕಟ್ಟುನಿಟ್ಟಿನ ಜಾರಿ ಕರ್ನಾಟಕ ತಂಬಾಕು ಉತ್ಪನ್ನಗಳ ತಿದ್ದುಪಡಿ ವಿಧೇಯಕ-2024 ಮತ್ತು 'ಕೋಟ್ಪಾ' (COTPA) ಕಾಯಿದೆಯನ್ನು ಬಸ್‌ಗಳಲ್ಲಿ ಹಾಗೂ ನಿಲ್ದಾಣಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಬಸ್ ಪ್ರಯಾಣದ ವೇಳೆ ಧೂಮಪಾನ, ಗುಟ್ಕಾ ಹಾಗೂ ತಂಬಾಕು ಸೇವಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

