ಕೊಪ್ಪಳ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ (KUDA) ಹಣ ಅಕ್ರಮವಾಗಿ (Fraud Case) ಬೇರೆ ಬೇರೆ ಖಾತೆಗಳಿಗೆ ಹರಿದ ಪ್ರಕರಣದ ತನಿಖೆ ಇದೀಗ ನಿರ್ಣಾಯಕ ಹಂತ ತಲುಪಿದೆ. ಪ್ರಾಧಿಕಾರಕ್ಕೆ ಸೇರಿದ ₹8.40 ಕೋಟಿ ಹಣದ ಅಕ್ರಮ ವರ್ಗಾವಣೆ (Money Transfer) ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನಲಾಗಿರುವ ರವೀಂದ್ರಕುಮಾರ್ ಹಾಗೂ ಆತನ ಪತ್ನಿ ರಮಾಳನ್ನು ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ.
ಸುಮಾರು 20 ದಿನಗಳಿಂದ ತಲೆಮರೆಸಿಕೊಂಡಿದ್ದ ದಂಪತಿ ಸದ್ಯ ಪೊಲೀಸರ ವಶದಲ್ಲಿದ್ದು, ಹಣದ ವಹಿವಾಟಿನ ಬಗ್ಗೆ ವಿಚಾರಣೆ ನಡೆಯುತ್ತಿದೆ. ಪ್ರಕರಣದ ತನಿಖೆಯಲ್ಲಿ ರವೀಂದ್ರಕುಮಾರ್ ತನ್ನ ಖಾತೆಗೆ ಮಾತ್ರವಲ್ಲದೆ ಕುಟುಂಬದ ಸದಸ್ಯರ ಖಾತೆಗಳಿಗೂ ಪ್ರಾಧಿಕಾರದ ಹಣವನ್ನು ವರ್ಗಾಯಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಪತ್ನಿ ರಮಾ, ಸಹೋದರ ಅನಿಲಕುಮಾರ್ ಸೇರಿದಂತೆ ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣ ಜಮೆಯಾಗಿರುವುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸಹೋದರನ ಬಂಧನದ ಬೆನ್ನಲ್ಲೇ ದಂಪತಿ ಅರೆಸ್ಟ್ KUDAಯ ಹಣಕಾಸು ವಹಿವಾಟಿನಲ್ಲಿ ಅಕ್ರಮ ನಡೆದಿರುವುದು ಪತ್ತೆಯಾದ ಬಳಿಕ ಪ್ರಾಧಿಕಾರದ ಕಮಿಷನರ್ ಶರಣಪ್ಪ ಅವರು ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಹಣ ವರ್ಗಾವಣೆಯ ದಾಖಲೆಗಳನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದರು. ತನಿಖೆಯ ಮುಂದುವರಿದ ಭಾಗವಾಗಿ ರವೀಂದ್ರಕುಮಾರ್‌ನ ಸಹೋದರ ಅನಿಲಕುಮಾರ್‌ನನ್ನು ಪೊಲೀಸರು ಎರಡು ದಿನಗಳ ಹಿಂದೆ ಬಂಧಿಸಿದ್ದರು. ಇದೀಗ ಪ್ರಮುಖ ಆರೋಪಿ ಹಾಗೂ ಆತನ ಪತ್ನಿಯ ಬಂಧನವಾಗಿರುವುದು ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಕುಟುಂಬದ ಖಾತೆಗಳಿಗೆ ಹಣ ವರ್ಗಾವಣೆ ಪ್ರಕರಣದ ಪ್ರಮುಖ ಅಂಶವೇ ಪ್ರಾಧಿಕಾರದ ಹಣ ವಿವಿಧ ವೈಯಕ್ತಿಕ ಖಾತೆಗಳಿಗೆ ಹೋಗಿರುವುದು. ರವೀಂದ್ರಕುಮಾರ್ ತನ್ನ ಖಾತೆಯ ಜತೆಗೆ ಪತ್ನಿ ಮತ್ತು ಸಂಬಂಧಿಕರ ಖಾತೆಗಳನ್ನು ಬಳಸಿಕೊಂಡಿದ್ದಾನೆ ಎಂಬ ಆರೋಪವಿದ್ದು, ಈ ಖಾತೆಗಳ ಮೂಲಕ ನಡೆದಿರುವ ಪ್ರತಿಯೊಂದು ವಹಿವಾಟಿನ ವಿವರವನ್ನು ಪೊಲೀಸರು ಕಲೆಹಾಕುತ್ತಿದ್ದಾರೆ. ವರ್ಗಾವಣೆಯಾದ ಹಣವನ್ನು ನಂತರ ಹೇಗೆ ಬಳಸಲಾಗಿದೆ ಎಂಬುದನ್ನು ಪತ್ತೆಹಚ್ಚುವುದು ತನಿಖಾಧಿಕಾರಿಗಳ ಮುಂದಿರುವ ಪ್ರಮುಖ ಸವಾಲಾಗಿದೆ. ಹಣ ಬೇರೆಡೆಗೆ ವರ್ಗಾವಣೆಯಾಗಿದೆಯೇ, ಆಸ್ತಿ ಅಥವಾ ಇತರ ವ್ಯವಹಾರಗಳಲ್ಲಿ ಹೂಡಿಕೆ ಮಾಡಲಾಗಿದೆಯೇ ಎಂಬುದರ ಮೇಲೂ ತನಿಖೆ ನಡೆಯುತ್ತಿದೆ. ಅಧಿಕಾರಿಗಳ ಪಾತ್ರವೂ ತನಿಖೆಯ ವ್ಯಾಪ್ತಿಯಲ್ಲಿ ₹8.40 ಕೋಟಿಯಷ್ಟು ದೊಡ್ಡ ಮೊತ್ತದ ಹಣ ಪ್ರಾಧಿಕಾರದ ಖಾತೆಯಿಂದ ಹೊರ ಹೋಗಲು ಒಳಗಿನವರ ಸಹಕಾರವಿತ್ತೇ ಎಂಬ ಪ್ರಶ್ನೆಯೂ ಇದೀಗ ಎದುರಾಗಿದೆ. ಹಗರಣದಲ್ಲಿ ಇತರ ಅಧಿಕಾರಿಗಳು ಅಥವಾ ಸಿಬ್ಬಂದಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ರವೀಂದ್ರಕುಮಾರ್ ಮತ್ತು ರಮಾ ಅವರ ವಿಚಾರಣೆ ಹಾಗೂ ಬ್ಯಾಂಕ್ ದಾಖಲೆಗಳ ಪರಿಶೀಲನೆಯಿಂದ ಪ್ರಕರಣದ ಹಣಕಾಸಿನ ಜಾಲದ ಬಗ್ಗೆ ಮತ್ತಷ್ಟು ಮಾಹಿತಿ ಸಿಗುವ ನಿರೀಕ್ಷೆಯಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿರುವ ಇತರರ ಮೇಲೂ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

