ನವದೆಹಲಿ: ಸಂಸತ್ತಿನಲ್ಲಿ (Parliament) ಪ್ರತಿಪಕ್ಷಗಳ ತೀವ್ರ ಗದ್ದಲ ಮತ್ತು ಪ್ರತಿಭಟನೆಯ ನಡುವೆಯೇ, ಡಿಜಿಟಲ್ ಹಾಗೂ ವರ್ಚುವಲ್ ದಾಖಲೆಗಳನ್ನು ನ್ಯಾಯಾಲಯಗಳಲ್ಲಿ ಅಧಿಕೃತ ಸಾಕ್ಷ್ಯವಾಗಿ ಪರಿಗಣಿಸಲು ಅವಕಾಶ ನೀಡುವ 'ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ಮಸೂದೆ, 2026' (Bankers' Books Evidence Act, 2026) ಅನ್ನು ಲೋಕಸಭೆಯು (Lok Sabha) ಬುಧವಾರ ಅಂಗೀಕರಿಸಿದೆ.
ಗೊಂದಲದ ವಾತಾವರಣದಲ್ಲೇ ಧ್ವನಿಮತದ ಮೂಲಕ ಮಸೂದೆ ಅಂಗೀಕಾರ ಭಾರತೀಯ ಬ್ಯಾಂಕಿಂಗ್ ಕ್ಷೇತ್ರ ಹಾಗೂ ಕಾನೂನು ವ್ಯವಸ್ಥೆಯನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿರುವ ಕೇಂದ್ರ ಸರ್ಕಾರ, ದಶಕಗಳಷ್ಟು ಹಳೆಯದಾದ 1891ರ 'ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್' ಕಾಯ್ದೆಯನ್ನು ರದ್ದುಗೊಳಿಸಿ, ಅದರ ಜಾಗದಲ್ಲಿ ಈ ಹೊಸ ಕಾಯ್ದೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಕಾನೂನು ಪ್ರಕ್ರಿಯೆಗಳಲ್ಲಿ ಮೂಲ ದಾಖಲೆಗಳನ್ನೇ ತರಬೇಕಾದ ಅಗತ್ಯವಿಲ್ಲದೆ, ಬ್ಯಾಂಕ್ ದಾಖಲೆಗಳ ದೃಢೀಕೃತ ಪ್ರತಿಗಳನ್ನು ಸಾಕ್ಷ್ಯವಾಗಿ ಬಳಸಲು ಈ ಮಸೂದೆಯು ಅನುವು ಮಾಡಿಕೊಡುತ್ತದೆ. ಹಳೆಯ ಕಾಯ್ದೆಯ ಹೆಚ್ಚಿನ ಮುಖ್ಯ ನಿಯಮಗಳನ್ನು ಹಾಗೆಯೇ ಉಳಿಸಿಕೊಂಡು, ಪ್ರಸ್ತುತ ಬ್ಯಾಂಕಿಂಗ್ ವ್ಯವಸ್ಥೆಯ ಅಗತ್ಯಕ್ಕೆ ತಕ್ಕಂತೆ ಹೊಸ ಮಸೂದೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತರಲಾಗಿದೆ. ಹೊಸ ಮಸೂದೆಯ ಪ್ರಮುಖ ಅಂಶ ಈ ಹೊಸ ಮಸೂದೆಯ ಪ್ರಮುಖ ಅಂಶವೆಂದರೆ ಡಿಜಿಟಲ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಕಾಲಕ್ಕೆ ತಕ್ಕಂತೆ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ದಾಖಲೆಗಳಿಗೆ ಕಾನೂನುಬದ್ಧ ಸಾಕ್ಷ್ಯದ ಮಾನ್ಯತೆ ನೀಡಿರುವುದು. ಬ್ಯಾಂಕ್ ನೀಡಿರುವ ಮಾಹಿತಿ ಸರಿಯಾಗಿದೆ, ದತ್ತಾಂಶದಲ್ಲಿ ಯಾವುದೇ ಅನಧಿಕೃತ ಬದಲಾವಣೆ ಅಥವಾ ತಿದ್ದುಪಡಿ ಆಗಿಲ್ಲ ಹಾಗೂ ವ್ಯವಸ್ಥೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂಬುದು ದೃಢಪಟ್ಟರೆ ಅಂತಹ ಡಿಜಿಟಲ್ ದಾಖಲೆಗಳನ್ನು ನ್ಯಾಯಾಲಯಗಳು ಸಿಂಧು ಮತ್ತು ಅಧಿಕೃತ ಸಾಕ್ಷ್ಯವಾಗಿ ಸ್ವೀಕರಿಸಲಿವೆ. ಇದರಿಂದಾಗಿ ಬ್ಯಾಂಕಿಂಗ್ ಅಕ್ರಮಗಳು ಹಾಗೂ ಆರ್ಥಿಕ ಅಪರಾಧಗಳ ತನಿಖೆಯಲ್ಲಿ ನ್ಯಾಯಾಲಯಗಳಿಗೆ ಸಾಕ್ಷ್ಯ ಒದಗಿಸುವುದು ಇನ್ನು ಮುಂದೆ ಇನ್ನಷ್ಟು ಸುಲಭ ಮತ್ತು ವೇಗವಾಗಲಿದೆ. ಇನ್ನು ಬ್ಯಾಂಕ್‌ಗೆ ಸಂಬಂಧಿಸದ ಯಾವುದೇ ಕಾನೂನು ಪ್ರಕ್ರಿಯೆಗಳಲ್ಲಿ ಬ್ಯಾಂಕ್ ಅಧಿಕಾರಿಗಳನ್ನು ಸಾಕ್ಷಿಯಾಗಿ ಹಾಜರಾಗಲು ಅಥವಾ ಬ್ಯಾಂಕ್ ಪುಸ್ತಕಗಳನ್ನು ನೇರವಾಗಿ ಕೋರ್ಟ್‌ಗೆ ತರಲು ಪೀಠವು ಪಟ್ಟು ಹಿಡಿಯುವಂತಿಲ್ಲ ಎಂಬ ನಿಯಮವನ್ನು ಈ ಮಸೂದೆಯಲ್ಲೂ ಕಾಯ್ದುಕೊಳ್ಳಲಾಗಿದೆ. ಆದರೆ, ಬ್ಯಾಂಕ್ ದಾಖಲೆಗಳ ನಿಖರತೆಯ ಮೇಲೆ ಅನುಮಾನವಿದ್ದಾಗ, ದಾಖಲೆ ನಿರ್ವಹಣೆಯಲ್ಲಿ ವ್ಯತ್ಯಯವಾದಾಗ ಅಥವಾ ಕೋರ್ಟ್ ಆದೇಶವನ್ನು ಬ್ಯಾಂಕ್ ಪಾಲಿಸದಿದ್ದಾಗ 'ವಿಶೇಷ ಕಾರಣ' ನೀಡಿ ನ್ಯಾಯಾಲಯವು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಬಹುದಾಗಿದೆ. ಇದರೊಂದಿಗೆ, ಭವಿಷ್ಯದಲ್ಲಿ ಈ ಕಾಯ್ದೆಯ ವ್ಯಾಪ್ತಿಯನ್ನು ಕೇವಲ ಬ್ಯಾಂಕುಗಳು ಮತ್ತು ಅಂಚೆ ಕಚೇರಿ ಉಳಿತಾಯ ಬ್ಯಾಂಕುಗಳಿಗೆ ಮಾತ್ರ ಸೀಮಿತಗೊಳಿಸದೆ, ಹಣಕಾಸು ಕ್ಷೇತ್ರದ ಇತರೆ ಯಾವುದೇ ಸಂಸ್ಥೆಗಳಿಗೂ ವಿಸ್ತರಿಸುವ ವಿಶೇಷ ಅಧಿಕಾರವನ್ನು ಕೇಂದ್ರ ಸರ್ಕಾರ ತನ್ನ ಬಳಿ ಉಳಿಸಿಕೊಂಡಿದೆ.
ಮಧ್ಯಾಹ್ನ 2 ಗಂಟೆಗೆ ಕಲಾಪ ಪುನರಾರಂಭಗೊಳ್ಳುತ್ತಿದ್ದಂತೆಯೇ ವಿಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪೀಠದ ಮನವಿಗೆ ಸ್ಪಂದಿಸದೆ ಕಲಾಪಕ್ಕೆ ಅಡ್ಡಿಪಡಿಸಿದರು. ಈ ಗೊಂದಲದ ವಾತಾವರಣದಲ್ಲೇ ಯಾವುದೇ ಚರ್ಚೆಯಿಲ್ಲದೆ ಧ್ವನಿಮತದ ಮೂಲಕ ಮಸೂದೆಯನ್ನು ಅಂಗೀಕರಿಸಿ, ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ಈ ಹೊಸ ಮಸೂದೆಯು ಬ್ಯಾಂಕುಗಳ ಡಿಜಿಟಲ್ ದಾಖಲೆಗಳಿಗೆ ಕಾನೂನುಬದ್ಧ ಸಾಕ್ಷ್ಯದ ಮಾನ್ಯತೆ ನೀಡಲಿದ್ದು, 1891ರ ಹಳೆಯ ಕಾಯ್ದೆಯನ್ನು ಬದಲಾಯಿಸಲಿದೆ.

