Dailyhunt
LPG CRISIS: ಅರ್ಜಿ ಹಾಕಿದರೆ ಮಾತ್ರ ಎಲ್​​​​ಪಿಜಿ ಪೂರೈಕೆ: ದೆಹಲಿ ಸರ್ಕಾರದಿಂದ ಹೊಸ ನಿಯಮ

LPG CRISIS: ಅರ್ಜಿ ಹಾಕಿದರೆ ಮಾತ್ರ ಎಲ್​​​​ಪಿಜಿ ಪೂರೈಕೆ: ದೆಹಲಿ ಸರ್ಕಾರದಿಂದ ಹೊಸ ನಿಯಮ

Navasamaja.com 1 week ago

ವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಅನಿಲ ವಿತರಣಾ ವ್ಯವಸ್ಥೆಯನ್ನು ಸುಗಮಗೊಳಿಸಲು ದೆಹಲಿ ಸರ್ಕಾರವು ತನ್ನ ವಾಣಿಜ್ಯ ಅನಿಲ ವಿತರಣಾ ನೀತಿಗೆ ಮಹತ್ವದ ತಿದ್ದುಪಡಿ ತಂದಿದೆ. ಇನ್ನು ಮುಂದೆ ದೆಹಲಿಯ ಕೈಗಾರಿಕಾ ಮತ್ತು ವಾಣಿಜ್ಯ ಬಳಕೆದಾರರು ಹೊಸ ಎಲ್‌ಪಿಜಿ (LPG Crisis) ಸಿಲಿಂಡರ್ ಪಡೆಯಬೇಕಾದರೆ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯ ಎನ್ನುವ ನಿಯಮವನ್ನ ಜಾರಿ ಮಾಡಿದೆ.

ತೈಲ ಮಾರುಕಟ್ಟೆ ಕಂಪನಿಗೆಗಳಿಗೆ ಜವಾಬ್ದಾರಿ ನೀಡಿದ ಸರ್ಕಾರ
ದೆಹಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಗುರುವಾರ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು ಗ್ರಾಹಕರು ಪಿಎನ್‌ಜಿ ಸಂಪರ್ಕಕ್ಕಾಗಿ ನೋಂದಾಯಿಸಿಕೊಂಡು ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರೆ ಮಾತ್ರ ಅವರಿಗೆ ಎಲ್‌ಪಿಜಿ ವಿತರಣೆಗೆ ಅನುಮತಿ ನೀಡಲಾಗುತ್ತದೆ. ಒಂದು ವೇಳೆ ಆ ಪ್ರದೇಶದಲ್ಲಿ ಇನ್ನೂ ಪೈಪ್‌ಲೈನ್ ವ್ಯವಸ್ಥೆ ಇಲ್ಲದಿದ್ದರೆ, ಭವಿಷ್ಯದಲ್ಲಿ ಸಂಪರ್ಕ ಪಡೆಯುವುದಾಗಿ ಲಿಖಿತ ಪತ್ರ ನೀಡಬೇಕಾಗುತ್ತದೆ. ಈ ನಿಯಮ ಪಾಲನೆಯಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ತೈಲ ಮಾರುಕಟ್ಟೆ ಕಂಪನಿಗಳಿಗೆ (OMC) ವಹಿಸಲಾಗಿದೆ.

ಫೆಬ್ರವರಿ ಅಂತ್ಯದಲ್ಲಿ ಪಶ್ಚಿಮ ಏಷ್ಯಾದಲ್ಲಿ ಆರಂಭವಾದ ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ಅನಿಲ ಪೂರೈಕೆಗೆ ವ್ಯತ್ಯಯವುಂಟಾಗಿದೆ. ಭಾರತವು ತನ್ನ ಒಟ್ಟು ಎಲ್‌ಪಿಜಿ ಬಳಕೆಯ ಶೇಕಡಾ 60 ರಷ್ಟು ಭಾಗವನ್ನು ಆಮದು ಮಾಡಿಕೊಳ್ಳುತ್ತಿದ್ದು, ಈ ಸಂಘರ್ಷದಿಂದಾಗಿ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆದಾರರಿಗಿಂತ ಗೃಹಬಳಕೆಯ ಗ್ರಾಹಕರಿಗೆ ಆದ್ಯತೆ ನೀಡುವಂತೆ ಸೂಚಿಸಿದೆ. ಈ ಒತ್ತಡವನ್ನು ಸರಿದೂಗಿಸಲು ದೆಹಲಿ ಸರ್ಕಾರವು ಸದ್ಯ ದೊಡ್ಡ ಗ್ರಾಹಕರನ್ನು ಪಿಎನ್‌ಜಿ ಕಡೆಗೆ ವರ್ಗಾಯಿಸಲು ಮುಂದಾಗಿದೆ.

ದೆಹಲಿಯ ಆಹಾರ ಪೂರೈಕೆ ಇಲಾಖೆಯ ಹೆಚ್ಚುವರಿ ಆಯುಕ್ತ ಅರುಣ್ ಕುಮಾರ್ ಝಾ ಈ ಬಗ್ಗೆ ಮಾಹಿತಿ ನೀಡಿ, ಫೆಬ್ರವರಿಯಲ್ಲಿ ದಿನಕ್ಕೆ ಸರಾಸರಿ 684 ಇದ್ದ ಪಿಎನ್‌ಜಿ ಅರ್ಜಿಗಳ ಸಂಖ್ಯೆ ಮಾರ್ಚ್‌ನಲ್ಲಿ 2,000ಕ್ಕೆ ಏರಿದೆ. ಇದನ್ನು ಶೀಘ್ರದಲ್ಲೇ ದಿನಕ್ಕೆ 3,000ಕ್ಕೆ ಏರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಗ್ರಾಹಕರು ತಮ್ಮ ಬಳಕೆಯ ವರ್ಗಕ್ಕೆ ಅನುಗುಣವಾಗಿ (ಗೃಹಬಳಕೆ ಅಥವಾ ವಾಣಿಜ್ಯ) ಸರಿಯಾದ ಸಂಪರ್ಕ ಪಡೆಯಬೇಕು ಎಂದು ತಿಳಿಸಿದ್ದಾರೆ.

ಕಳ್ಳಸಂತೆಯವಿರುದ್ಧಕಟ್ಟುನಿಟ್ಟಿನಕ್ರಮ
ಇಂಧನ ಪೂರೈಕೆಯಲ್ಲಿನ ವ್ಯತ್ಯಯದ ಲಾಭ ಪಡೆದು ಅಕ್ರಮವಾಗಿ ಅನಿಲ ಸಂಗ್ರಹಣೆ ಮತ್ತು ಕಳ್ಳಸಂತೆಯಲ್ಲಿ ತೊಡಗಿರುವವರ ವಿರುದ್ಧ ದೆಹಲಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಈಗಾಗಲೇ ಇಂತಹ 27 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಗ್ಯಾಸ್ ಏಜೆನ್ಸಿಗಳ ಬಳಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರನ್ನು ನಿಯೋಜಿಸಲಾಗಿದೆ. ಇನ್ನು ವಲಸೆ ಕಾರ್ಮಿಕರು ಗುರುತಿನ ಚೀಟಿ ತೋರಿಸಿ 5 ಕೆಜಿಯ ಸಣ್ಣ ಸಿಲಿಂಡರ್‌ಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಅಕ್ರಮ ಚಟುವಟಿಕೆಗಳ ಬಗ್ಗೆ ದೂರು ನೀಡಲು ಸರ್ಕಾರವು ವಿಶೇಷ ಸಹಾಯವಾಣಿಗಳನ್ನು ಕೂಡ ಆರಂಭಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja