ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮದಿಂದ ಎಲ್‌ಪಿಜಿ ಗ್ಯಾಸ್ (LPG Crisis) ಕೊರತೆ ಹೆಚ್ಚಾಗುತ್ತಿದ್ದು, ರಾಜಧಾನಿಯ ಅನೇಕ ಬಂಕ್‌ಗಳು ಮುಚ್ಚಿವೆ.
3 ಕಿಮೀ ಸರತಿ ಸಾಲು
ಈಗಾಗಲೇ ಸೂರ್ಯ ಗ್ಯಾಸ್ ಮತ್ತು ಸೂಪರ್ ಗ್ಯಾಸ್ ಬಂಕ್‌ಗಳಲ್ಲಿ ಬಂದ ಸ್ಟಾಕ್ ಮಧ್ಯಾಹ್ನದ ಒಳಗೆ ಖಾಲಿ ಆಗುತ್ತಿದೆ.
ಅದರ ಜೊತೆಗೆ ಟೋಟಲ್ ಗ್ಯಾಸ್ ತನ್ನ ಎಲ್ಲಾ ಬಂಕ್‌ಗಳನ್ನ ಕ್ಲೋಸ್ ಮಾಡಿದೆ. ಸ್ಟಾಕ್ ಸಿಗುವ ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಬಂಕ್‌ಗಳಲ್ಲಿ ಸುಮಾರು 3 ಕಿಮೀ ಕ್ಯೂ ನಿಲ್ಲುವ ಪರಿಸ್ಥಿತಿ ಬಂದಿದ್ದು, ಆಟೋ ಚಾಲಕರು ಪರದಾಡುತ್ತಿದ್ದಾರೆ. ಏರಿದ ಗ್ಯಾಸ್ ಬೆಲೆ ಬೆಂಗಳೂರು ನಗರಕ್ಕೆ ಪ್ರತಿದಿನ ಸುಮಾರು 45 ಮೆಟ್ರಿಕ್ ಟನ್ ಆಟೋ ಎಲ್‌ಪಿಜಿ ಅಗತ್ಯವಿದೆ. ಆದರೆ, ಸದ್ಯ ಕೇವಲ 25 ಮೆಟ್ರಿಕ್ ಟನ್ ಮಾತ್ರ ಸಿಗುತ್ತಿದೆ, ಪ್ರತಿದಿನ 20 ಮೆಟ್ರಿಕ್ ಟನ್ ಕೊರತೆ ಆಗುತ್ತಿದೆ. ಗೃಹ ಬಳಕೆಯ ಸಿಲಿಂಡರ್‌ಗಳಿಗೆ ಮೊದಲ ಆದ್ಯತೆ ನೀಡಬೇಕಿರುವುದರಿಂದ ಆಟೋ ಗ್ಯಾಸ್ ಪೂರೈಕೆಯನ್ನು ಕಡಿಮೆ ಮಾಡಲಾಗಿದೆ. ಇದರಿಂದಾಗಿ ನಗರದ 25ಕ್ಕೂ ಹೆಚ್ಚು ಖಾಸಗಿ ಗ್ಯಾಸ್ ಕಂಪನಿಗಳು 'ಔಟ್ ಆಫ್ ಸ್ಟಾಕ್' ಬೋರ್ಡ್ ಹಾಕಿವೆ. ಕೇವಲ ಸರ್ಕಾರಿ ಸ್ವಾಮ್ಯದ ಬಂಕ್‌ಗಳಲ್ಲಿ ಮಾತ್ರ ಸೀಮಿತ ಪ್ರಮಾಣದ ಗ್ಯಾಸ್ ಸಿಗುತ್ತಿದ್ದು, ಅಲ್ಲಿಯೂ ಜನದಟ್ಟಣೆ ನಿಯಂತ್ರಿಸುವುದು ಕಷ್ಟವಾಗುತ್ತಿದೆ. ಆಟೋ ಚಾಲಕರಿಂದ ಪ್ರತಿಭಟನೆ ಕೇವಲ ಬೆಂಗಳೂರು ಮಾತ್ರವಲ್ಲದೆ ರಾಯಚೂರು ನಗರದಲ್ಲೂ ಪರಿಸ್ಥಿತಿ ಗಂಭೀರವಾಗಿದೆ. ನಗರದ ಮೂರು ಪ್ರಮುಖ ಗ್ಯಾಸ್ ಬಂಕ್‌ಗಳು ಸಂಪೂರ್ಣವಾಗಿ ಬಂದ್ ಆಗಿದ್ದು, ಆಟೋಗಳು ರಸ್ತೆ ಬದಿಯಲ್ಲಿ ಅನಾಥವಾಗಿ ನಿಂತಿವೆ. ಜೀವನೋಪಾಯಕ್ಕಾಗಿ ಆಟೋವನ್ನೇ ನಂಬಿರುವ ಚಾಲಕರಿಗೆ ಈಗ ಮನೆಯ ಬಾಡಿಗೆ, ಗಾಡಿಯ ಕಂತು ಕಟ್ಟುವುದೇ ದೊಡ್ಡ ಸವಾಲಾಗಿದೆ. ಸರ್ಕಾರ ಮಧ್ಯ ಪ್ರವೇಶಿಸಿ ತಕ್ಷಣವೇ ಪೂರೈಕೆ ಸರಿಪಡಿಸದಿದ್ದರೆ ಸಾವಿರಾರು ಕುಟುಂಬಗಳು ಬೀದಿಗೆ ಬೀಳಲಿವೆ ಎಂದು ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ. ಯುದ್ಧದ ಭೀತಿ ಮತ್ತು ಅಂತರಾಷ್ಟ್ರೀಯ ಸರಬರಾಜು ಸರಪಳಿ ಹದಗೆಟ್ಟಿರುವುದರಿಂದ ಈ ಸಮಸ್ಯೆ ಸದ್ಯಕ್ಕೆ ಸುಧಾರಿಸುವ ಲಕ್ಷಣಗಳು ಕಾಣುತ್ತಿಲ್ಲ.
ಇನ್ನು ಒಂದೆಡೆ ಗ್ಯಾಸ್ ಲಭಿಸದೇ ಒದ್ದಾಡುತ್ತಿದ್ದರೆ, ಮತ್ತೊಂದೆಡೆ ಬೆಲೆ ಏರಿಕೆ ಬಿಸಿ ತಾಗಿದೆ. ಯುದ್ಧಕ್ಕೂ ಮೊದಲು 58 ರೂಪಾಯಿ ಇದ್ದ ಗ್ಯಾಸ್ ಬೆಲೆ 85ಕ್ಕೆ ಏರಿದೆ. ಖಾಸಗಿ ಬಂಕ್‌ಗಳಲ್ಲಿ 120 ರಿಂದ 125 ರೂಪಾಯಿ ಸಹ ಪಡೆಯಲಾಗುತ್ತಿದೆ. ಅಲ್ಲದೇ, ಗ್ಯಾಸ್ ಹಾಕಿಸಲು ಬೆಳಗ್ಗೆ 5 ಗಂಟೆಯಿಂದ ಕ್ಯೂ ನಿಲ್ಲಬೇಕಿದೆ. ಆದರೂ ಸಹ ಗ್ಯಾಸ್ ಸಿಗದೇ ಅನೇಕರು ವಾಪಾಸ್ ಹೋಗುತ್ತಿದ್ದಾರೆ.
ಬೆಂಗಳೂರಿನ ನೆಲಮಂಗಲ ಮತ್ತು ಹೆಸರಘಟ್ಟ ರಸ್ತೆಗಳಲ್ಲಿ ಗ್ಯಾಸ್‌ಗಾಗಿ ರಾತ್ರಿಯಿಡೀ ಆಟೋ ಚಾಲಕರು ಕಾದಿದ್ದು, ಬೆಳಗ್ಗೆ ಗ್ಯಾಸ್ ಖಾಲಿ ಆಗಿದ್ದು ಇದರಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ಯಾಸ್ ಅಭಾವದಿಂದ ಬೇಸತ್ತು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದು, ಸಂಚಾರ ದಟ್ಟಣೆ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

