ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಆಟೋ ಎಲ್ಪಿಜಿ (LPG Crisis) ಸಮಸ್ಯೆ ಜಾಸ್ತಿ ಆಗಿದೆ. ಇದರಿಂದ ಆಟೋ ಚಾಲಕರು ಸಹ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಕಿಲೋಮೀಟರ್ ಗಟ್ಟಲೆ ಕ್ಯೂ
ಗ್ಯಾಸ್ ಅಭಾವ ಆಗಿರುವ ಹಿನ್ನೆಲೆಯಲ್ಲಿ ಗ್ಯಾಸ್ ಬಂಕ್‌ಗಳ ಮುಂದೆ ಕಿಲೋಮೀಟರ್‌ಗಟ್ಟಲೆ ಆಟೋಗಳು ಸರತಿ ಸಾಲಿನಲ್ಲಿ ನಿಂತಿದ್ದು, ಗಂಟೆಗಟ್ಟಲೆ ಕಾದರೂ ಇಂಧನ ಸಿಗದೆ ಚಾಲಕರು ಕಂಗಾಲಾಗಿದ್ದಾರೆ.
ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿರುವುದು ಈ ಬಿಕ್ಕಟ್ಟಿಗೆ ಮುಖ್ಯ ಕಾರಣವಾಗಿದೆ. ಇನ್ನು ಮಾಹಿತಿಗಳ ಪ್ರಕಾರ, ಬೆಂಗಳೂರು ನಗರಕ್ಕೆ ಪ್ರತಿದಿನ ಸುಮಾರು 45 ಮೆಟ್ರಿಕ್ ಟನ್ ಆಟೋ ಎಲ್ಪಿಜಿ ಅಗತ್ಯವಿದೆ. ಆದರೆ, ಸದ್ಯ ಕೇವಲ 25 ಮೆಟ್ರಿಕ್ ಟನ್ ಮಾತ್ರ ಸಿಗುತ್ತಿದೆ, ಪ್ರತಿದಿನ 20 ಮೆಟ್ರಿಕ್ ಟನ್ ಕೊರತೆ ಆಗುತ್ತಿದೆ. ಗೃಹ ಬಳಕೆಯ ಸಿಲಿಂಡರ್‌ಗಳಿಗೆ ಮೊದಲ ಆದ್ಯತೆ ನೀಡಬೇಕಿರುವುದರಿಂದ ಆಟೋ ಗ್ಯಾಸ್ ಪೂರೈಕೆಯನ್ನು ಕಡಿಮೆ ಮಾಡಲಾಗಿದೆ. ಇದರಿಂದಾಗಿ ನಗರದ 25ಕ್ಕೂ ಹೆಚ್ಚು ಖಾಸಗಿ ಗ್ಯಾಸ್ ಕಂಪನಿಗಳು 'ಔಟ್ ಆಫ್ ಸ್ಟಾಕ್' ಬೋರ್ಡ್ ಹಾಕಿವೆ. ಕೇವಲ ಸರ್ಕಾರಿ ಸ್ವಾಮ್ಯದ ಬಂಕ್‌ಗಳಲ್ಲಿ ಮಾತ್ರ ಸೀಮಿತ ಪ್ರಮಾಣದ ಗ್ಯಾಸ್ ಸಿಗುತ್ತಿದ್ದು, ಅಲ್ಲಿಯೂ ಜನದಟ್ಟಣೆ ನಿಯಂತ್ರಿಸುವುದು ಕಷ್ಟವಾಗುತ್ತಿದೆ. ಆಟೋ ಚಾಲಕರಿಂದ ಪ್ರತಿಭಟನೆ ಕೇವಲ ಬೆಂಗಳೂರು ಮಾತ್ರವಲ್ಲದೆ ರಾಯಚೂರು ನಗರದಲ್ಲೂ ಪರಿಸ್ಥಿತಿ ಗಂಭೀರವಾಗಿದೆ. ನಗರದ ಮೂರು ಪ್ರಮುಖ ಗ್ಯಾಸ್ ಬಂಕ್‌ಗಳು ಸಂಪೂರ್ಣವಾಗಿ ಬಂದ್ ಆಗಿದ್ದು, ಆಟೋಗಳು ರಸ್ತೆ ಬದಿಯಲ್ಲಿ ಅನಾಥವಾಗಿ ನಿಂತಿವೆ. ಜೀವನೋಪಾಯಕ್ಕಾಗಿ ಆಟೋವನ್ನೇ ನಂಬಿರುವ ಚಾಲಕರಿಗೆ ಈಗ ಮನೆಯ ಬಾಡಿಗೆ, ಗಾಡಿಯ ಕಂತು ಕಟ್ಟುವುದೇ ದೊಡ್ಡ ಸವಾಲಾಗಿದೆ. ಸರ್ಕಾರ ಮಧ್ಯ ಪ್ರವೇಶಿಸಿ ತಕ್ಷಣವೇ ಪೂರೈಕೆ ಸರಿಪಡಿಸದಿದ್ದರೆ ಸಾವಿರಾರು ಕುಟುಂಬಗಳು ಬೀದಿಗೆ ಬೀಳಲಿವೆ ಎಂದು ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ. ಯುದ್ಧದ ಭೀತಿ ಮತ್ತು ಅಂತರಾಷ್ಟ್ರೀಯ ಸರಬರಾಜು ಸರಪಳಿ ಹದಗೆಟ್ಟಿರುವುದರಿಂದ ಈ ಸಮಸ್ಯೆ ಸದ್ಯಕ್ಕೆ ಸುಧಾರಿಸುವ ಲಕ್ಷಣಗಳು ಕಾಣುತ್ತಿಲ್ಲ.
ಬೆಂಗಳೂರಿನ ನೆಲಮಂಗಲ ಮತ್ತು ಹೆಸರಘಟ್ಟ ರಸ್ತೆಗಳಲ್ಲಿ ಗ್ಯಾಸ್‌ಗಾಗಿ ರಾತ್ರಿಯಿಡೀ ಆಟೋ ಚಾಲಕರು ಕಾದಿದ್ದು, ಬೆಳಗ್ಗೆ ಗ್ಯಾಸ್ ಖಾಲಿ ಆಗಿದ್ದು ಇದರಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ಯಾಸ್ ಅಭಾವದಿಂದ ಬೇಸತ್ತು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದು, ಸಂಚಾರ ದಟ್ಟಣೆ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

