ದಾವಣಗೆರೆ : ಅಡುಗೆ ಅನಿಲ (LPG) ಹಾಗೂ ಆಟೋ ಗ್ಯಾಸ್ (CNG) ಪೂರೈಕೆಯಲ್ಲಿ ಉಂಟಾಗಿರುವ ತೀವ್ರ ವ್ಯತ್ಯಯವು (Crisis) ಈಗ ಕಾಂಗ್ರೆಸ್‌ನ ಒಳಗೇ ಅಸಮಾಧಾನ ಸ್ಫೋಟಗೊಳ್ಳಲು ಕಾರಣವಾಗಿದೆ. ಕೇಂದ್ರ ಸರ್ಕಾರದಿಂದ ಸಮರ್ಪಕವಾಗಿ ಅನಿಲ ಪೂರೈಕೆಯಾಗುತ್ತಿಲ್ಲ ಎಂಬ ಕಟು ಸತ್ಯವನ್ನು ಜನರ ಮುಂದಿಡುವಲ್ಲಿ ವಿಫಲರಾಗಿರುವ ಸಚಿವ ಕೆ.ಎಚ್. ಮುನಿಯಪ್ಪ ಅವರು (KH Muniyappa), ದೆಹಲಿಯ ನಾಯಕರನ್ನು ಪ್ರಸನ್ನಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ (M Laxman) ನೇರವಾಗಿಯೇ ದೂರಿದ್ದಾರೆ.
ಇಂಧನಕ್ಕಾಗಿ ಆಟೋ ಚಾಲಕರು ಇಡೀ ರಾತ್ರಿ ಬಂಕ್‌ಗಳಲ್ಲೇ ಕಳೆಯುವಂತಾಗಿದ್ದು, ಈ ಅವ್ಯವಸ್ಥೆಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಸಾರ್ವಜನಿಕರು ಭಾವಿಸುತ್ತಿದ್ದಾರೆ. ಇಂತಹ ಗಂಭೀರ ಸಂದರ್ಭದಲ್ಲಿ ಹಿರಿಯ ರಾಜಕಾರಣಿಯಾದ ಮುನಿಯಪ್ಪ ಅವರು ಮೌನಕ್ಕೆ ಶರಣಾಗುವುದು ಉತ್ತಮ ಎಂದು ಲಕ್ಷ್ಮಣ್ ಸಲಹೆ ನೀಡಿದ್ದಾರೆ. ಪದೇಪದೆ ನಿರರ್ಥಕ ಸಭೆಗಳನ್ನು ನಡೆಸುವುದನ್ನು ಕೈಬಿಟ್ಟು, ವಾಸ್ತವ ಸ್ಥಿತಿಯನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಅವರು ದಾವಣಗೆರೆಯಲ್ಲಿ ಆಗ್ರಹಿಸಿದರು.

