ಬೆಂಗಳೂರು: ಮಧ್ಯಪ್ರಾಚ್ಯ ದೇಶಗಳ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅನಿಲ ಬಿಕ್ಕಟ್ಟು (Gas Shortage) ತಲೆದೂರಿದ್ದು, ಶಮನಗೊಳಿಸಲು ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಮಹತ್ವದ ಹೆಜ್ಜೆ ಇಟ್ಟಿದೆ.
ಎಲ್‌ಪಿಜಿ ಪೂರೈಕೆ ಹೆಚ್ಚಳ ಆಟೋ ಚಾಲಕರಿಗೆ ಸ್ವಲ್ಪ ಸಮಾಧಾನ ಈ ಕುರಿತು ಮಾಹಿತಿ ನೀಡಿರುವ ಇಂಡಿಯನ್ ಆಯಿಲ್‌ನ ದಕ್ಷಿಣ ಪ್ರಾದೇಶಿಕ ಕಚೇರಿಯ ಮುಖ್ಯ ಮಹಾಪ್ರಬಂಧಕ ವಿ. ವೆಟ್ರಿಸೆಲ್ವಕ್‌ಕುಮಾರ್, "ಹೆಚ್ಚುವರಿ ಕಾರ್ಯಾಚರಣೆಯ ಹೊರೆಯ ಹೊರತಾಗಿಯೂ, ವಾಹನ ಸವಾರರಿಗೆ ನಿರಂತರವಾಗಿ ಇಂಧನ ಸಿಗುವಂತೆ ಮಾಡಲು ಸಂಸ್ಥೆ ಶ್ರಮಿಸುತ್ತಿದೆ" ಎಂದು ತಿಳಿಸಿದ್ದಾರೆ. ಕಳೆದ ಮೂರು ತಿಂಗಳ ಸರಾಸರಿ ಮಾರಾಟಕ್ಕೆ ಹೋಲಿಸಿದರೆ, ಪ್ರಸ್ತುತ ಇಂಡಿಯನ್ ಆಯಿಲ್ ಬಂಕ್‌ಗಳಲ್ಲಿ ದೈನಂದಿನ ಮಾರಾಟವು 43.4 ಮೆಟ್ರಿಕ್ ಟನ್‌ನಿಂದ 59.53 ಮೆಟ್ರಿಕ್ ಟನ್‌ಗೆ ಏರಿಕೆಯಾಗಿದೆ. ಸರ್ಕಾರದ ನಿರ್ದೇಶನಗಳಂತೆ ಎಲ್ಲಾ ವಲಯಗಳಿಗೆ ಸಮಾನವಾಗಿ ಅನಿಲ ಹಂಚಿಕೆ ಮಾಡುತ್ತಲೇ, ವಾಹನ ಸವಾರರಿಗೆ ತೊಂದರೆಯಾಗದಂತೆ ಸುಗಮ ಇಂಧನ ಲಭ್ಯತೆಯನ್ನು ಖಚಿತಪಡಿಸಲು ಸಂಸ್ಥೆ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ಈ ಕ್ರಮದಿಂದಾಗಿ ಕಳೆದ ಕೆಲವು ದಿನಗಳಿಂದ ಗ್ಯಾಸ್‌ಗಾಗಿ ಅಲೆದಾಡುತ್ತಿದ್ದ ಆಟೋ ಚಾಲಕರಿಗೆ ತುಸು ಸಮಾಧಾನ ಸಿಕ್ಕಂತಾಗಿದೆ. ಗೃಹ ಬಳಕೆಗೆ ಸರಿದೂಗಿಸಲು ಎಲ್‌ಪಿಜಿ ಕಡಿಮೆ ಪೂರೈಕೆ, ಆಟೋ ಗ್ಯಾಸ್ಗೆ ಭಾರೀ ಟ್ರಬಲ್! ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಆಟೋ ಎಲ್‌ಪಿಜಿ (LPG Crisis) ಸಮಸ್ಯೆ ಜಾಸ್ತಿ ಆಗಿದೆ. ಇದರಿಂದ ಆಟೋ ಚಾಲಕರು ಸಹ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಕಿಲೋಮೀಟರ್ ಗಟ್ಟಲೆ ಕ್ಯೂ ಇನ್ನು ಮಾಹಿತಿಗಳ ಪ್ರಕಾರ, ಬೆಂಗಳೂರು ನಗರಕ್ಕೆ ಪ್ರತಿದಿನ ಸುಮಾರು 45 ಮೆಟ್ರಿಕ್ ಟನ್ ಆಟೋ ಎಲ್‌ಪಿಜಿ ಅಗತ್ಯವಿದೆ. ಆದರೆ, ಸದ್ಯ ಕೇವಲ 25 ಮೆಟ್ರಿಕ್ ಟನ್ ಮಾತ್ರ ಸಿಗುತ್ತಿದೆ, ಪ್ರತಿದಿನ 20 ಮೆಟ್ರಿಕ್ ಟನ್ ಕೊರತೆ ಆಗುತ್ತಿದೆ. ಗೃಹ ಬಳಕೆಯ ಸಿಲಿಂಡರ್‌ಗಳಿಗೆ ಮೊದಲ ಆದ್ಯತೆ ನೀಡಬೇಕಿರುವುದರಿಂದ ಆಟೋ ಗ್ಯಾಸ್ ಪೂರೈಕೆಯನ್ನು ಕಡಿಮೆ ಮಾಡಲಾಗಿದೆ. ಇದರಿಂದಾಗಿ ನಗರದ 25ಕ್ಕೂ ಹೆಚ್ಚು ಖಾಸಗಿ ಗ್ಯಾಸ್ ಕಂಪನಿಗಳು 'ಔಟ್ ಆಫ್ ಸ್ಟಾಕ್' ಬೋರ್ಡ್ ಹಾಕಿವೆ. ಕೇವಲ ಸರ್ಕಾರಿ ಸ್ವಾಮ್ಯದ ಬಂಕ್‌ಗಳಲ್ಲಿ ಮಾತ್ರ ಸೀಮಿತ ಪ್ರಮಾಣದ ಗ್ಯಾಸ್ ಸಿಗುತ್ತಿದ್ದು, ಅಲ್ಲಿಯೂ ಜನದಟ್ಟಣೆ ನಿಯಂತ್ರಿಸುವುದು ಕಷ್ಟವಾಗುತ್ತಿದೆ.
ರಾಜ್ಯದಲ್ಲಿ ಖಾಸಗಿ ಗ್ಯಾಸ್ ಪೂರೈಕೆದಾರರು ಅನಿಲ ವಿತರಣೆಯನ್ನು ಸ್ಥಗಿತಗೊಳಿಸಿರುವ ಬೆನ್ನಲ್ಲೇ, ಇಂಡಿಯನ್ ಆಯಿಲ್ ತನ್ನ ವಿತರಣಾ ಕೇಂದ್ರಗಳಲ್ಲಿ ಎಲ್‌ಪಿಜಿ ಪೂರೈಕೆಯನ್ನು ಗಣನೀಯವಾಗಿ ಹೆಚ್ಚು ಮಾಡಿದೆ. ಸದ್ಯ ಕರ್ನಾಟಕದಲ್ಲಿ ಇಂಡಿಯನ್ ಆಯಿಲ್‌ನ 55 ಆಟೋ ಎಲ್‌ಪಿಜಿ ವಿತರಣಾ ಕೇಂದ್ರಗಳು (ALDS) ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ, ರಾಜ್ಯದಲ್ಲಿರುವ 300ಕ್ಕೂ ಹೆಚ್ಚು ಖಾಸಗಿ ಗ್ಯಾಸ್ ಮಳಿಗೆಗಳು ಪೂರೈಕೆ ಇಲ್ಲದೆ ಭಾಗಶಃ ಮುಚ್ಚಲ್ಪಟ್ಟಿವೆ. ಈ ಕಾರಣದಿಂದಾಗಿ ಆಟೋ ರಿಕ್ಷಾ ಮತ್ತು ಎಲ್‌ಪಿಜಿ ಕಾರುಗಳ ಮಾಲೀಕರು ಸಾರ್ವಜನಿಕ ವಲಯದ (PSU) ಬಂಕ್‌ಗಳ ಮೇಲೆ ಅವಲಂಬಿತರಾಗಿದ್ದು, ಅಲ್ಲಿ ಬೇಡಿಕೆ ದಿಢೀರ್ ಏರಿಕೆಯಾಗಿದೆ.
ಗ್ಯಾಸ್ ಅಭಾವ ಆಗಿರುವ ಹಿನ್ನೆಲೆಯಲ್ಲಿ ಗ್ಯಾಸ್ ಬಂಕ್‌ಗಳ ಮುಂದೆ ಕಿಲೋಮೀಟರ್‌ಗಟ್ಟಲೆ ಆಟೋಗಳು ಸರತಿ ಸಾಲಿನಲ್ಲಿ ನಿಂತಿದ್ದು, ಗಂಟೆಗಟ್ಟಲೆ ಕಾದರೂ ಇಂಧನ ಸಿಗದೆ ಚಾಲಕರು ಕಂಗಾಲಾಗಿದ್ದಾರೆ. ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿರುವುದು ಈ ಬಿಕ್ಕಟ್ಟಿಗೆ ಮುಖ್ಯ ಕಾರಣವಾಗಿದೆ.

