ಗ್ಯಾಸ್ (LPG Gas) ಗ್ರಾಹಕರಿಗೆ ಕೇಂದ್ರ ಸರ್ಕಾರವು (Central Govt) ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಅಕ್ರಮ ಗ್ಯಾಸ್ ಸಂಪರ್ಕಗಳನ್ನು ತಡೆಯುವ ನಿಟ್ಟಿನಲ್ಲಿ ಎಲ್ಲಾ ಎಲ್‌ಪಿಜಿ ಗ್ರಾಹಕರು ಇ-ಕೆವೈಸಿ (e-KYC) ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಇದಕ್ಕಾಗಿ ಈ ಮೊದಲು ಆಗಸ್ಟ್ 23ರ ಗಡುವು ನೀಡಲಾಗಿತ್ತು. ನಂತರ, ತೈಲ ಮಾರುಕಟ್ಟೆ ಕಂಪನಿಗಳು ಈ ಅವಧಿಯನ್ನು ಆಗಸ್ಟ್ 31ರವರೆಗೆ ವಿಸ್ತರಿಸಿತ್ತು. ಹೀಗಾಗಿ, ಇ-ಕೆವೈಸಿ ಪ್ರಕ್ರಿಯೆ ಮುಗಿಸದ ಗ್ರಾಹಕರಿಗೆ ಇನ್ನೂ ಎರಡೇ ದಿನಗಳ ಕಾಲಾವಕಾಶ ಉಳಿದಿದೆ. ಕೆಲವರು ನಕಲಿ ದಾಖಲೆಗಳನ್ನು ನೀಡಿ ಗ್ಯಾಸ್ ಸಂಪರ್ಕ ಪಡೆದಿರುವುದು ಮತ್ತು ಇನ್ನು ಕೆಲವರು ಮನೆ ಬಳಕೆಯ ಗ್ಯಾಸ್ ಸಿಲಿಂಡರ್‌ಗಳನ್ನು ಬೇರೆ ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇಂತಹ ಅಕ್ರಮಗಳನ್ನು ತಡೆಯಲು ಹಾಗೂ ನೈಜ ಬಳಕೆದಾರರನ್ನು ಗುರುತಿಸಲು ಈ ನಿಯಮವನ್ನು ಜಾರಿಗೆ ತರಲಾಗಿದೆ. ಹಲವು ವರ್ಷಗಳಿಂದ ಕೆವೈಸಿ ಅಪ್‌ಡೇಟ್ ಮಾಡದ ಗ್ರಾಹಕರ ಸಂಪರ್ಕಗಳನ್ನು ಈಗ ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತಿದೆ. ಇದರ ಜೊತೆಗೆ ಹೊಸ ಗ್ಯಾಸ್ ಸಂಪರ್ಕಗಳ ವಿತರಣೆಯನ್ನೂ ಹಂತಹಂತವಾಗಿ ಪರಿಶೀಲಿಸಲಾಗುತ್ತಿದೆ. ಒಂದು ವೇಳೆ ನೀವು ಆಗಸ್ಟ್ 31ರೊಳಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ, ನಿಮ್ಮ ಗ್ಯಾಸ್ ಸಂಪರ್ಕ ತಕ್ಷಣಕ್ಕೆ ಸಂಪೂರ್ಣವಾಗಿ ರದ್ದಾಗುವುದಿಲ್ಲ. ಆದರೆ, ಮುಂದಿನ ಬಾರಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವಾಗ ನಿಮಗೆ ತಾಂತ್ರಿಕ ಸಮಸ್ಯೆಗಳು ಅಥವಾ ವಿಳಂಬ ಎದುರಾಗಬಹುದು. ಅಷ್ಟೇ ಅಲ್ಲದೆ, ಅರ್ಹ ಗ್ರಾಹಕರಿಗೆ ಸರ್ಕಾರದಿಂದ ಸಿಗುವ ಸಬ್ಸಿಡಿ ಹಣವನ್ನು ಕೂಡ ತಾತ್ಕಾಲಿಕವಾಗಿ ತಡೆಹಿಡಿಯುವ ಸಾಧ್ಯತೆಯಿದೆ. ಆದ್ದರಿಂದ, ಮುಂದಿನ ದಿನಗಳಲ್ಲಿ ಸಿಲಿಂಡರ್ ಬುಕಿಂಗ್ ಮತ್ತು ಸಬ್ಸಿಡಿ ಹಣ ಪಡೆಯುವಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಗ್ರಾಹಕರು ಎಚ್ಚರ ವಹಿಸಬೇಕು. ತಕ್ಷಣವೇ ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಅಥವಾ ಸಂಬಂಧಪಟ್ಟ ಮೊಬೈಲ್ ಆಯಪ್ ಮೂಲಕ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅತ್ಯಗತ್ಯ.

