ಬೆಂಗಳೂರು: ರಾಜ್ಯದ ಶಿಕ್ಷಣ (Education) ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳ ಕುರಿತು ಮಾತನಾಡಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, (Madhu bangarappa) ದೇಶದ ಬಹುತೇಕ ರಾಜ್ಯಗಳಲ್ಲಿ ಈಗಾಗಲೇ ದ್ವಿಭಾಷಾ ಶಿಕ್ಷಣ ಪದ್ಧತಿ ಜಾರಿಯಲ್ಲಿದೆ ಎಂದು ಪ್ರತಿಪಾದಿಸಿದ್ದಾರೆ.
ಮೂರನೇ ಭಾಷಾ ವಿಷಯಕ್ಕೆ ಅಂಕಗಳ ಬದಲಾಗಿ ಗ್ರೇಡ್ (Grade) ನೀಡುವ ಸರ್ಕಾರದ ನಿರ್ಧಾರವನ್ನು ಅವರು ಈ ಸಂದರ್ಭದಲ್ಲಿ ಸಮರ್ಥಿಸಿಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ಪ್ರಧಾನಿ ನರೇಂದ್ರ ಮೋದಿ ಅವರನ್ನು ಖುಷಿಪಡಿಸಲು ಬಿಜೆಪಿಯವರು ಎಲ್ಲೆಡೆ ಹಿಂದಿ ಭಾಷೆಯನ್ನು ಪ್ರಮೋಟ್ ಮಾಡುತ್ತಿರುವುದು ಸರಿಯಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮೇಲೆ ಮೂರನೇ ಭಾಷೆಯನ್ನು ಹೇರಲಾಗುತ್ತಿದೆ. ನಮ್ಮ ಕನ್ನಡಿಗರು ಜೀವನೋಪಾಯಕ್ಕಾಗಿ ಹಿಂದಿ ಕಲಿಯುತ್ತಿದ್ದಾರೆ, ಅಂತಹವರ ಮೇಲೆ ಯಾವುದೇ ಒತ್ತಡ ಇರಬಾರದು. ನಾವು ಯಾವುದೇ ಭಾಷೆಯ ವಿರುದ್ಧವಾಗಿಲ್ಲ, ಆದರೆ ಕನ್ನಡಿಗರ ಹಿತರಕ್ಷಣೆ ನಮಗೆ ಮುಖ್ಯ," ಎಂದು ತಿಳಿಸಿದರು. ಬಿಜೆಪಿ ನಾಯಕರ ಟೀಕೆಗೆ ಪ್ರತ್ಯುತ್ತರ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುರಿತು ಮಾತನಾಡಿದ ಅವರು, "ಯಡಿಯೂರಪ್ಪನವರು ರಾಜ್ಯವನ್ನಾಳಿದವರು, ಅವರಿಗೆ ನಾವು ಗೌರವ ಕೊಡುತ್ತೇವೆ. ಆದರೆ ಕನ್ನಡಿಗರಿಗೆ ಅನ್ಯಾಯವಾದಾಗ ಬಿಜೆಪಿಯವರು ಧ್ವನಿ ಎತ್ತುವುದಿಲ್ಲ. ತೆರಿಗೆ ಪಾವತಿಯಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದ್ದರೂ, ರಾಜ್ಯಕ್ಕೆ ಬರಬೇಕಾದ ಪಾಲಿನ ಕುರಿತು ಅಥವಾ ಬರಗಾಲದ ಸಂದರ್ಭದಲ್ಲಿ ಬಿಜೆಪಿ ನಾಯಕರು ಮೌನ ವಹಿಸುತ್ತಾರೆ," ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಶಿಕ್ಷಣ ಸಚಿವರಿಗೆ ಶಿಕ್ಷಣವಿಲ್ಲ ಎಂದು ಮಾಡಿದ್ದ ಟೀಕೆಗೆ ತಿರುಗೇಟು ನೀಡಿದ ಮಧು ಬಂಗಾರಪ್ಪ, "ಶೋಭಾ ಕರಂದ್ಲಾಜೆ ಅವರು ಹಿಂದಿ ಮಾತನಾಡುತ್ತಿರುವುದನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇನೆ. ಅವರು ಹಿಂದಿ ಭಾಷೆಯ ವಿಚಾರದಲ್ಲಿ ಈ ನಿರ್ಧಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಹಾಗೆಯೇ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಕನ್ನಡ ಭಾಷಾ ಬಳಕೆ ಬಗ್ಗೆಯೂ ಅವರು ಪ್ರಶ್ನೆ ಮಾಡಿದರು. ಸಿಬಿಎಸ್‌ಇ ಶಿಕ್ಷಣ ಕೇಂದ್ರ ಸರ್ಕಾರದ ಅಧೀನದಲ್ಲಿದ್ದರೂ, ರಾಜ್ಯದ ನಿಯಮಗಳನ್ನು ನಾವು ರೂಪಿಸಿದ್ದೇವೆ ಎಂದು ಸಚಿವರು ಇದೇ ವೇಳೆ ಸ್ಪಷ್ಟಪಡಿಸಿದರು. ಇದನ್ನೂಓದಿ: ಸಿಬಿಎಸ್‌ಇ ಶಾಲೆಗಳಲ್ಲಿ ಮಹತ್ವದ ಬದಲಾವಣೆ.. ಇಲ್ಲಿದೆ ಮಾಹಿತಿ

