ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಎದುರಾದ ಭೀಕರ ಸೋಲು, ಕಳೆದ 15 ವರ್ಷಗಳಿಂದ ರಾಜ್ಯದಲ್ಲಿ ಸೋಲಿಲ್ಲದೆ ಮುನ್ನುಗ್ಗುತ್ತಿದ್ದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಆಂತರಿಕ ಭದ್ರಕೋಟೆಯನ್ನು ನಡುಗಿಸಿದೆ. ಭಾರತೀಯ ಜನತಾ ಪಕ್ಷದ (BJP) ಭಾರಿ ಆಕ್ರಮಣದ ನಡುವೆಯೂ ಇಷ್ಟು ದಿನ ಒಗ್ಗಟ್ಟು ಪ್ರದರ್ಶಿಸುತ್ತಿದ್ದ ಟಿಎಂಸಿ ನಾಯಕರ ನಡುವಿನ ಅಸಮಾಧಾನ ಈಗ ಬೀದಿಗೆ ಬಂದಿದ್ದು, ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ (Mamata Banerjee) ಅವರ ಕಾರ್ಯತಂತ್ರ ಮತ್ತು ನಾಯಕತ್ವದ ವಿರುದ್ಧವೇ ಹಿರಿಯ ನಾಯಕರು ಬಂಡಾಯದ ಬಾವುಟ ಹಾರಿಸಿದ್ದಾರೆ.
ಪಕ್ಷದ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕಿ ಕಾಕೋಲಿ ಘೋಷ್ ದಸ್ತಿದಾರ್ ಅವರು ಪಕ್ಷದ ಕಾರ್ಯಾಧ್ಯಕ್ಷ ಸುಬ್ರತಾ ಬಕ್ಷಿ ಅವರಿಗೆ ನೀಡಿರುವ ರಾಜೀನಾಮೆ ಪತ್ರ ಪಕ್ಷದ ಒಳಗಿನ ತೀವ್ರ ಅಸಮಾಧಾನವನ್ನು ಬಹಿರಂಗಪಡಿಸಿದೆ. ಈ ಪತ್ರದಲ್ಲಿ, ಮಮತಾ ಬ್ಯಾನರ್ಜಿ ಅವರು ಕಾರ್ಪೊರೇಟ್ ಶೈಲಿಯನ್ನು ಬಿಟ್ಟು ಹಳೇ ಶೈಲಿಯಲ್ಲಿ ಪಕ್ಷವನ್ನು ಮುನ್ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಐ-ಪ್ಯಾಕ್ (I-PAC) ವಿರುದ್ಧ ಭ್ರಷ್ಟಾಚಾರದ ಆರೋಪ
ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಸಂಸ್ಥೆಯಾದ ಐ-ಪ್ಯಾಕ್ (I-PAC) ಮೇಲೆ ಕಾಕೋಲಿ ಘೋಷ್ ಗಂಭೀರ ಆರೋಪ ಮಾಡಿದ್ದಾರೆ. ಐ-ಪ್ಯಾಕ್ (I-PAC) ಈ ಬಾರಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ನಾಯಕರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಪಂಚಾಯತ್ ಹುದ್ದೆಯಿಂದ ಹಿಡಿದು ಶಾಸಕರ (MLA) ಟಿಕೆಟ್‌ವರೆಗೂ ಕಠಿಣ ಚುನಾವಣೆ ಎಂಬ ನೆಪ ಒಡ್ಡಿ ಐ-ಪ್ಯಾಕ್ ಸಂಸ್ಥೆಯು ಹಣ ವಸೂಲಿ ಮಾಡಿದೆ ಮತ್ತು ಪಕ್ಷದ ಹುದ್ದೆಗಳನ್ನು ದುಡ್ಡಿಗೆ ಮಾರಿಕೊಂಡಿದೆ ಎಂಬ ಗಂಭೀರ ಆರೋಪವನ್ನು ಹೆಸರು ಹೇಳಲು ಇಚ್ಛಿಸದ ಹಲವು ಟಿಎಂಸಿ ನಾಯಕರು ಮಾಡಿದ್ದಾರೆ. ಪಕ್ಷವು ತನ್ನ ಮೂಲ ಸಿದ್ಧಾಂತವಾದ ಮಾ, ಮಾತಿ, ಮಾನುಷ್ (ತಾಯಿ, ಮಣ್ಣು, ಮನುಷ್ಯ) ಎಂಬ ತಳಹದಿಯಿಂದ ದೂರ ಸರಿದಿದ್ದೇ ಈ ದುಸ್ಥಿತಿಗೆ ಕಾರಣ ಎಂದು ನಾಯಕರು ದೂರಿದ್ದಾರೆ.
ಸಿಎಂ ಸುವೇಂದು ಅಧಿಕಾರಿ ಭೇಟಿಯಾದ ಶಾಸಕರು
ಪಕ್ಷದ ಒಳಗಿನ ಶೀತಲ ಸಮರ ಇಷ್ಟಕ್ಕೇ ನಿಂತಿಲ್ಲ. ಹಿರಿಯ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಕಾಕೋಲಿ ಘೋಷ್ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿದ್ದಾರೆ. ಪಕ್ಷದ ವಿರುದ್ಧ ಮಾತನಾಡುವವರನ್ನು ಮಟ್ಟ ಹಾಕಲು ಟಿಎಂಸಿ ಐದು ಸದಸ್ಯರ ಸಮಿತಿ ರಚಿಸಿದ್ದು, ಪಕ್ಷದ ವಕ್ತಾರ ರಿಜು ದತ್ತಾ ಅವರನ್ನು ಈಗಾಗಲೇ 6 ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ.
ಇದರ ನಡುವೆ, ಟಿಎಂಸಿಯ ಮೂವರು ಕೌನ್ಸಿಲರ್‌ಗಳಾದ ಅನಿಸುರ್ ರೆಹಮಾನ್, ಬಿನಾ ಮೊಂಡಲ್ ಮತ್ತು ಮೊಹಮ್ಮದ್ ಅಬ್ದುಲ್ ಮತಿನ್ ಅವರು ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಆಡಳಿತಾತ್ಮಕ ಸಭೆಯಲ್ಲಿ ಭಾಗವಹಿಸಿರುವುದು ಭಾರಿ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ಟಿಎಂಸಿ ಶಾಸಕರಾದ ರಿತಬ್ರತಾ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ಅವರು ಸ್ಪೀಕರ್ ರತೀಂದ್ರ ಬೋಸ್ ಅವರ ಕೊಠಡಿಯಲ್ಲಿ ಸುವೇಂದು ಅಧಿಕಾರಿಯನ್ನು ಭೇಟಿ ಮಾಡಿದ್ದಾರೆ. ಇತ್ತೀಚೆಗಷ್ಟೇ ದಿಲ್ಲಿಯ ಸರ್ಕಾರಿ ಅತಿಥಿಗೃಹದಲ್ಲಿ ರಿತಬ್ರತಾ ಅವರು ಸುವೇಂದು ಜೊತೆ ಕಾಣಿಸಿಕೊಂಡ ಫೋಟೋ ವೈರಲ್ ಆಗಿದ್ದು, ಟಿಎಂಸಿ ಶಾಸಕರು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗೆ ಪುಷ್ಟಿ ನೀಡಿದೆ.
ಮೌನಕ್ಕೆ ಶರಣಾದ ಮಾಜಿ ಮಂತ್ರಿಗಳು
ಇಷ್ಟು ದಿನ ಮಮತಾ ಬ್ಯಾನರ್ಜಿ ಅವರ ನೆರಳಿನಂತೆ ಇರುತ್ತಿದ್ದ ಹಿರಿಯ ನಾಯಕರಾದ ಇಂದ್ರನೀಲ್ ಸೇನ್, ಶಶಿ ಪಾಂಜಾ, ಬ್ರತ್ಯಾ ಬಸು, ಮಲೋಯ್ ಘಟಕ್ ಮತ್ತು ಅರೂಪ್ ಬಿಸ್ವಾಸ್ ಈಗ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಇದರ ಜೊತೆಗೆ ಮೇ 11ರಂದು ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸುಜಿತ್ ಬೋಸ್ ಅವರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿರುವುದು ಪಕ್ಷಕ್ಕೆ ಮತ್ತೊಂದು ದೊಡ್ಡ ಹೊಡೆತ ನೀಡಿದೆ.
ಚುನಾವಣಾ ಫಲಿತಾಂಶ ಬಂದು 20 ದಿನ ಕಳೆದರೂ ಮಮತಾ ಬ್ಯಾನರ್ಜಿ ಅವರು ಇನ್ನೂ ಸೋಲಿನ ಆಘಾತದಿಂದ ಹೊರಬಂದಂತೆ ಕಾಣುತ್ತಿಲ್ಲ. ಇತ್ತೀಚೆಗೆ 32 ನಿಮಿಷಗಳ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ್ದ ಅವರು, ನಮ್ಮಿಂದ 150 ಸೀಟುಗಳನ್ನು ಕದಿಯಲಾಗಿದೆ ಎಂದು ಇವಿಎಂ ಮತ್ತು ಚುನಾವಣಾ ಆಯೋಗದ ವಿರುದ್ಧ ಆರೋಪ ಮುಂದುವರಿಸಿದ್ದಾರೆ. ಕಳೆದ ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಮಮತಾ ಸಂಸತ್ ಅಥವಾ ವಿಧಾನಸಭೆಯ ಸದಸ್ಯತ್ವ ಇಲ್ಲದೆ ಸಂಪೂರ್ಣವಾಗಿ ಅಧಿಕಾರ ವಂಚಿತರಾಗಿದ್ದಾರೆ. ಇತ್ತೀಚೆಗೆ ಕಲ್ಕತ್ತಾ ಹೈಕೋರ್ಟ್‌ಗೆ ಭೇಟಿ ನೀಡಿ ವಾಪಸ್ ಬರುವಾಗ ಸಾರ್ವಜನಿಕರು ಅವರ ವಿರುದ್ಧ ಕಳ್ಳ, ಕಳ್ಳ (Thief) ಎಂದು ಘೋಷಣೆ ಕೂಗಿದ್ದಾರೆ. ಇದು ಮಮತಾ ಬ್ಯಾನರ್ಜಿಗೆ ಇರಿಸು ಮುರಿಸು ತಂದಿದೆ.

