ಮಂಡ್ಯ: ಚಾಮುಂಡೇಶ್ವರಿ (Mandya) ಸಕ್ಕರೆ ಕಾರ್ಖಾನೆಯಲ್ಲಿ (Sugar Factory) ಕಂಟೈನರ್ ಸ್ವಚ್ಛಗೊಳಿಸುವಾಗ ಕಾಲುಜಾರಿ ಬಿದ್ದು ಗುತ್ತಿಗೆ ಕಾರ್ಮಿಕ ಮೃತಪಟ್ಟಿದ್ದು (Labor Death), ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ಕುಟುಂಬಸ್ಥರು ಕಾರ್ಖಾನೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದ ಬಳಿಕ 22 ಲಕ್ಷ ರೂ.
ಪರಿಹಾರಕ್ಕೆ ಒಪ್ಪಂದವಾಗಿದೆ.
ಮೈಸೂರು ಜಿಲ್ಲೆಯ ಬನ್ನೂರು ಸಮೀಪದ ಗೊರವನಹಳ್ಳಿ ಗ್ರಾಮದ ಜಯರಾಮು ಹಾಗೂ ರತ್ನಮ್ಮ ದಂಪತಿಯ ಪುತ್ರ ಅರುಣ್ ಕುಮಾರ್ (ARUN KUMAR - 23) ಮೃತಪಟ್ಟ ದುರ್ದೈವಿ. ಕಳೆದ ಐದು ವರ್ಷಗಳಿಂದ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕನಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ.
ಸ್ವಚ್ಛಗೊಳಿಸುವಾಗ ಬಿದ್ದು ಸಾವು
ಸೋಮವಾರ ಸಂಜೆ ಸಕ್ಕರೆ ಪಾಕದ ಕಂಟೈನರ್ ದುರಸ್ತಿ ಮಾಡುವ ಸಲುವಾಗಿ ಅದನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಈ ವೇಳೆ ಕಾಲುಜಾರಿ ಕಂಟೈನರ್ ಒಳಗೆ ಬಿದ್ದ ಅರುಣ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಕಾರ್ಖಾನೆಯ ಆಡಳಿತ ಮಂಡಳಿಯು ಆಸ್ಪತ್ರೆಗೆ ಕರೆದೊಯ್ದರಾದರೂ, ಅಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದರು.
ಆಡಳಿತ ಮಂಡಳಿಯಿಂದ ಮರೆಮಾಚುವ ಯತ್ನ ಆರೋಪ
ಸೋಮವಾರ ರಾತ್ರಿ ಅರುಣ್ ಕುಮಾರ್ ಸಂಬಂಧಿಕರನ್ನು ಕರೆದಿದ್ದ ಕಾರ್ಖಾನೆಯ ಆಡಳಿತ ಮಂಡಳಿಯು, ಅರುಣ್ ಅವರಿಗೆ ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ತಿಳಿಸಿ, ತರಾತುರಿಯಲ್ಲಿ 2 ಲಕ್ಷ ರೂ. ಪರಿಹಾರ ನೀಡಿ ಅಂತ್ಯಕ್ರಿಯೆ ನಡೆಸುವಂತೆ ಸೂಚಿಸಿತ್ತು. ಅದರಂತೆ ಮೃತದೇಹವನ್ನು ಸ್ವಗ್ರಾಮ ಗೊರವನಹಳ್ಳಿಗೆ ಕೊಂಡೊಯ್ಯಲಾಗಿತ್ತು. ಆದರೆ ಮೃತನ ಭುಜ, ಬೆನ್ನು ಹಾಗೂ ತಲೆಯ ಭಾಗದಲ್ಲಿ ಗಾಯದ ಗುರುತುಗಳು ಸ್ಪಷ್ಟವಾಗಿ ಕಂಡುಬಂದಿದ್ದರಿಂದ ಕುಟುಂಬಸ್ಥರಿಗೆ ಸಾವಿನ ಬಗ್ಗೆ ಭಾರೀ ಅನುಮಾನ ಮೂಡಿತ್ತು.
ಮಂಗಳವಾರ ಬೆಳಿಗ್ಗೆ ಕಾರ್ಖಾನೆಯ ಮುಖ್ಯದ್ವಾರದ ಬಳಿಯೇ ಶವವಿಟ್ಟು ಕುಟುಂಬಸ್ಥರು ಮತ್ತು ಗ್ರಾಮಸ್ಥರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಬೆಂಗಳೂರಿನ ಡಾ.ಅಂಬೇಡ್ಕರ್ ಸೇನೆ ರಾಜ್ಯ ಘಟಕದ ಅಧ್ಯಕ್ಷ ಪಿ. ಮೂರ್ತಿ, ರೈತ ಸಂಘದ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣ್ ಸೇರಿದಂತೆ ಅನೇಕರು ಭಾಗವಹಿಸಿ ನ್ಯಾಯಕ್ಕಾಗಿ ಆಗ್ರಹಿಸಿದರು.
22 ಲಕ್ಷ ರೂ. ಪರಿಹಾರಕ್ಕೆ ಒಪ್ಪಂದ
ಸ್ಥಳಕ್ಕೆ ತಹಶೀಲ್ದಾರ್ ಶಿವಕುಮಾರ್ ಬಿರಾದಾರ್ ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್ ಅನಿಲ್ ನೇತೃತ್ವದಲ್ಲಿ ಉದ್ವಿಗ್ನ ಪರಿಸ್ಥಿತಿ ನಿಯಂತ್ರಿಸಿ, ಕುಟುಂಬಸ್ಥರು ಹಾಗೂ ಕಾರ್ಖಾನೆ ಮಾಲೀಕರ ಸಭೆ ನಡೆಸಲಾಯಿತು. ಸಭೆಯ ಚರ್ಚೆಯ ಬಳಿಕ ಕಾರ್ಖಾನೆಯವರು ಒಟ್ಟು 22 ಲಕ್ಷ ರೂ. ಪರಿಹಾರದ ಚೆಕ್ ಅನ್ನು ನೀಡಿದರು. ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಗಿದ್ದು, ಮೃತದೇಹವನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

