Dailyhunt Logo
  • Light mode
    Follow system
    Dark mode
    • Play Story
    • App Story
MANGALURU RAILWAY: 119 ವರ್ಷದ ಬಳಿಕ ಕೇರಳದಿಂದ ಮುಕ್ತಿ - ರಾಜ್ಯಕ್ಕೆ ಸೇರಿದ ಮಂಗಳೂರು ರೈಲ್ವೆ!

MANGALURU RAILWAY: 119 ವರ್ಷದ ಬಳಿಕ ಕೇರಳದಿಂದ ಮುಕ್ತಿ - ರಾಜ್ಯಕ್ಕೆ ಸೇರಿದ ಮಂಗಳೂರು ರೈಲ್ವೆ!

Navasamaja.com 1 week ago

ರೋಬ್ಬರಿ 119 ವರ್ಷಗಳ ಕಾಯುವಿಕೆ ಮತ್ತು ನಿರಂತರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಹಿಡಿತದಲ್ಲಿದ್ದ ಕರ್ನಾಟಕದ (Karnataka) ಕರಾವಳಿ ಹೆಬ್ಬಾಗಿಲು ಮಂಗಳೂರು (Mangaluru Railway) ಇದೀಗ ಅಧಿಕೃತವಾಗಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ (Mysuru Division) ಸೇರ್ಪಡೆಯಾಗಿದೆ.

ಇದು ಕನ್ನಡಿಗರ ದಶಕಗಳ ಬೇಡಿಕೆಯಾಗಿದ್ದು, ಕರಾವಳಿ ಹಾಗೂ ಮೈಸೂರು-ಬೆಂಗಳೂರು ನಡುವಿನ ಸಂಪರ್ಕಕ್ಕೆ ಹೊಸ ಬಲ ತಂದುಕೊಟ್ಟಿದೆ.

1907ರಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಮಂಗಳೂರು ರೈಲು ಜಾಲವನ್ನು, 2003ರಲ್ಲಿ ಕರ್ನಾಟಕದ ಹುಬ್ಬಳ್ಳಿ ಕೇಂದ್ರಿತ 'ನೈಋತ್ಯ ರೈಲ್ವೆ' ವಲಯ ರಚನೆಯಾದಾಗಲೂ ನಮ್ಮ ರಾಜ್ಯಕ್ಕೆ ಸೇರಿಸಿರಲಿಲ್ಲ. ಬದಲಾಗಿ ಅದನ್ನು ದಕ್ಷಿಣ ರೈಲ್ವೆಯ ಚೆನ್ನೈ ಮತ್ತು ಪಾಲಕ್ಕಾಡ್ ವಿಭಾಗದ ಅಡಿಯಲ್ಲೇ ಉಳಿಸಿಕೊಳ್ಳಲಾಗಿತ್ತು. ಈ ಮಲತಾಯಿ ಧೋರಣೆಯಿಂದಾಗಿ ಕನ್ನಡಿಗರಿಗೆ ಭಾರೀ ಅನ್ಯಾಯವಾಗುತ್ತಿತ್ತು. ಮಂಗಳೂರಿನಿಂದ ಬರುತ್ತಿದ್ದ ಕೋಟ್ಯಂತರ ರೂಪಾಯಿ ಆದಾಯವೆಲ್ಲ ಕೇರಳದ ಪಾಲಾಗುತ್ತಿತ್ತು. ಅಲ್ಲದೆ, ರೈಲುಗಳ ವೇಳಾಪಟ್ಟಿ ಮತ್ತು ಉದ್ಯೋಗ ನೇಮಕಾತಿಯಲ್ಲಿ ಕನ್ನಡಿಗರನ್ನು ಕಡೆಗಣಿಸಿ ಕೇರಳಿಗರ ಹಿತಾಸಕ್ತಿಗೆ ಹೆಚ್ಚು ಒತ್ತು ನೀಡಲಾಗುತ್ತಿತ್ತು.

ಈಗ ಮಂಗಳೂರು ಮೈಸೂರು ವಿಭಾಗಕ್ಕೆ ಸೇರ್ಪಡೆಯಾಗಿರುವುದರಿಂದ ಕರಾವಳಿ ಮತ್ತು ರಾಜ್ಯದ ಒಳನಾಡಿಗೆ ಬಂಪರ್ ಲಾಭವಾಗಲಿದೆ. ನವ ಮಂಗಳೂರು ಬಂದರಿನಿಂದ (ಪಣಂಬೂರು) ಬರುತ್ತಿದ್ದ ಕೋಟ್ಯಂತರ ರೂಪಾಯಿ ಸರಕು ಸಾಗಣೆ ಆದಾಯ ಇನ್ನು ಮುಂದೆ ನೇರವಾಗಿ ಮೈಸೂರು ವಿಭಾಗಕ್ಕೆ ಹರಿದುಬರಲಿದೆ. ಈ ಹಿಂದೆ ಬೆಂಗಳೂರು ಹಾಗೂ ಮಂಗಳೂರು ನಡುವೆ ಹೊಸ ರೈಲುಗಳನ್ನು ಬಿಡಲು ಅಥವಾ ಸಮಯ ಬದಲಾಯಿಸಲು ಕೇರಳದ ಒಪ್ಪಿಗೆ ಬೇಕಾಗಿತ್ತು. ಇನ್ನು ಮುಂದೆ ಸಂಪೂರ್ಣ ನಿಯಂತ್ರಣ ನಮ್ಮದೇ ಆಗಿರುವುದರಿಂದ, ಅಗತ್ಯಕ್ಕೆ ತಕ್ಕಂತೆ ಹಗಲು-ರಾತ್ರಿ ಎಕ್ಸ್‌ಪ್ರೆಸ್ ರೈಲುಗಳನ್ನು ಸುಲಭವಾಗಿ ಓಡಿಸಬಹುದು. ಜೊತೆಗೆ, ಮಂಗಳೂರು-ಬೆಂಗಳೂರು ಹಳಿ ದ್ವಿಪಥ ಕಾಮಗಾರಿಗೆ ವೇಗ ಸಿಗಲಿದ್ದು, ರೈಲ್ವೆಯ ಗ್ರೂಪ್-ಡಿ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗಲಿದೆ.

ಈ ಬೆಳವಣಿಗೆಯಿಂದ ಕೇರಳದಲ್ಲಿ ಭಾರಿ ಆತಂಕ ಶುರುವಾಗಿದೆ. ಪಣಂಬೂರು ಬಂದರಿನಿಂದ ಪಾಲಕ್ಕಾಡ್ ವಿಭಾಗಕ್ಕೆ ಪ್ರತಿ ವರ್ಷ ಸಿಗುತ್ತಿದ್ದ ಸುಮಾರು 500 ರಿಂದ 600 ಕೋಟಿ ರೂಪಾಯಿ ಆದಾಯ ಖೋತಾ ಆಗುವ ಭೀತಿಯಲ್ಲಿ ಕೇರಳ ನಾಯಕರು ಈ ವಿಲೀನವನ್ನು ಕಟುವಾಗಿ ವಿರೋಧಿಸುತ್ತಿದ್ದಾರೆ. ಈ ಗಡಿ ಬದಲಾವಣೆ ನಿರ್ಧಾರವನ್ನು ತಡೆಹಿಡಿಯುವಂತೆ ಕೋರಿ ಕೇರಳದ ನಾಯಕರು ಪ್ರಧಾನಿ ನರೇಂದ್ರ ಮೋದಿಯವರಿಗೂ ಪತ್ರ ಬರೆದಿದ್ದಾರೆ.

ಒಟ್ಟಾರೆಯಾಗಿ, ಒಂದೇ ನಗರದಲ್ಲಿ ಮೂರು ಪ್ರತ್ಯೇಕ ರೈಲ್ವೆ ವಲಯಗಳಿದ್ದ ಗೊಂದಲ ಈಗ ಬಹುಪಾಲು ನಿವಾರಣೆಯಾಗಿದೆ. ಹೊಸ ಆದೇಶದ ಪ್ರಕಾರ, ತೋಕೂರು ನಿಲ್ದಾಣವು ಮೈಸೂರು ವಿಭಾಗ ಮತ್ತು ಕೊಂಕಣ ರೈಲ್ವೆಯ ಗಡಿಯಾಗಲಿದ್ದು, ಉಳ್ಳಾಲವು ದಕ್ಷಿಣ ದಿಕ್ಕಿನಲ್ಲಿ ನೈಋತ್ಯ ಮತ್ತು ದಕ್ಷಿಣ ರೈಲ್ವೆಯ ಗಡಿಯಾಗಿರಲಿದೆ. ಮುಂದಿನ ದಿನಗಳಲ್ಲಿ ಮಂಗಳೂರು-ರೋಹಾ ನಡುವಿನ ಕೊಂಕಣ ರೈಲ್ವೆಯನ್ನು ಕೂಡ ನೈಋತ್ಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಕೂಗು ಬಲವಾಗಿದ್ದು, ಇದು ಈಡೇರಿದರೆ ಕರ್ನಾಟಕದ ರೈಲು ಜಾಲ ಮತ್ತಷ್ಟು ಶಕ್ತಿಶಾಲಿಯಾಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja