ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ, ಇತ್ತ ಸಿದ್ದರಾಮಯ್ಯ ಅವರ ಪರಮಾಪ್ತ ಹಾಗೂ ಹಿರಿಯ ಸಚಿವ ಎಂ.ಬಿ. ಪಾಟೀಲ್ (MB Patil)ಅವರು ಸಾಮಾಜಿಕ ಜಾಲತಾಣವಾದ ಎಕ್ಸ್ (X) ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಅತ್ಯಂತ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಜಗದ್ಗುರು ಬಸವಣ್ಣನವರ ಮಾರ್ಮಿಕ ವಚನವೊಂದನ್ನು ಟ್ವೀಟ್ ಮಾಡುವ ಮೂಲಕ ಅವರು ಪರೋಕ್ಷವಾಗಿ ಯಾರಿಗೆ ಟಾಂಗ್ ನೀಡಿದ್ದಾರೆ ಎಂಬ ಲೆಕ್ಕಾಚಾರಗಳು ಕಾಂಗ್ರೆಸ್ ವಲಯದಲ್ಲಿ ಶುರುವಾಗಿವೆ.
ಎಂ.ಬಿ.ಪಾ ಟ್ವೀಟ್ ಮಾಡಿರುವ ವಚನ
"ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ,
ಲಿಂಗದ ಮೇಲೆ ನಿಷ್ಠೆಯಿಲ್ಲದ ಭಕ್ತ,
ಇದ್ದರೇನೊ ಶಿವಶಿವಾ! ಹೋದರೇನೊ?
ಕೂಡಲಸಂಗಮದೇವಯ್ಯಾ
ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ!"
ಬಸವಣ್ಣನವರ ಈ ವಚನದ ಸರಳ ಅರ್ಥವೇನೆಂದರೆ- ಗಂಡನ ಮೇಲೆ ನಿಜವಾದ ಪ್ರೀತಿ, ವಿಶ್ವಾಸವಿಲ್ಲದ ಹೆಂಡತಿ ಹಾಗೂ ತಾನು ನಂಬಿದ ಲಿಂಗದ ಮೇಲೆ ನಿಜವಾದ ನಿಷ್ಠೆಯಿಲ್ಲದ ಭಕ್ತ, ಇಬ್ಬರೂ ಇದ್ದರೂ ಒಂದೇ, ಹೋದರೂ ಒಂದೇ, ಅವರಿಂದ ಯಾರಿಗೂ ಯಾವುದೇ ಪ್ರಯೋಜನವಿಲ್ಲ. ಅದು ಹಾಲಿಲ್ಲದ ಹಸುವಿನ ಬಳಿಗೆ ಹಸಿದ ಕರುವನ್ನು ಬಿಟ್ಟಂತೆ ವ್ಯರ್ಥ ಎಂಬುದು ಇದರ ಆಳವಾದ ಅರ್ಥ
ರಾಜಕೀಯ ವಲಯದಲ್ಲಿ ಹುಟ್ಟಿಕೊಂಡಿರುವ ಪ್ರಶ್ನೆಗಳು
ಸಿದ್ದರಾಮಯ್ಯ ಅವರು ಹೈಕಮಾಂಡ್ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ ತಕ್ಷಣವೇ ಎಂ.ಬಿ. ಪಾಟೀಲ್ ಅವರು ಈ ನಿಷ್ಠೆ ಮತ್ತು ವಿಶ್ವಾಸದ ಕುರಿತ ವಚನವನ್ನು ಮುನ್ನೆಲೆಗೆ ತಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ದೇಶಾದ್ಯಂತ ಜಾತಿ ಜನಗಣತಿ ಹಾಗೂ ಅಹಿಂದ ಸಬಲೀಕರಣದ ಬಗ್ಗೆ ಮಾತನಾಡುವ ಕಾಂಗ್ರೆಸ್ ಹೈಕಮಾಂಡ್, ರಾಜ್ಯದಲ್ಲಿದ್ದ ಏಕೈಕ ಹಿಂದುಳಿದ ವರ್ಗಗಳ ಬಲಿಷ್ಠ ನಾಯಕನನ್ನು ಬಲವಂತವಾಗಿ ಕೆಳಗಿಳಿಸಿತು ಎಂಬ ಅಸಮಾಧಾನವನ್ನು ಎಂ.ಬಿ. ಪಾಟೀಲ್ ಈ ಮೂಲಕ ಹೊರಹಾಕಿದ್ದಾರೆಯೇ ಎನ್ನುವ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ.
ಸಿದ್ದರಾಮಯ್ಯ ಬಣದ ಅತ್ಯಂತ ಆಪ್ತ ಹಾಗೂ ಪ್ರಭಾವಿ ಲಿಂಗಾಯತ ನಾಯಕರಾಗಿರುವ ಎಂ.ಬಿ. ಪಾಟೀಲ್, ನಾಯಕತ್ವ ಬದಲಾವಣೆಯ ಈ ಸಂದರ್ಭದಲ್ಲಿ ತೀವ್ರ ಬೇಸರಗೊಂಡಿದ್ದಾರೆ ಎನ್ನಲಾಗುತ್ತಿದ್ದು, ಈ ವಚನದ ಬಾಣ ಯಾರಿಗೆ ತಗುಲಬೇಕೋ ಅವರಿಗೆ ತಲುಪಿದೆ ಎನ್ನಲಾಗುತ್ತಿದೆ.

