ಮೈಸೂರು: ದಸರಾ (Mysuru Dasara) ಹಿನ್ನೆಲೆಯಲ್ಲಿ ದಸರಾ ಗಜಪಡೆಗಳಿಗೆ ಅರಣ್ಯ ಭವನದಲ್ಲಿ ಇಂದು ಬೆಳಗ್ಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು. ಈ ಮಧ್ಯೆ ಮೈಸೂರು ಅಂಬಾವಿಲಾಸ ಅರಮನೆ ಪ್ರವೇಶಿಸುವ ವೇಳೆ ಶ್ರೀರಾಮ ಆನೆ (SriRama Elephant) ಏಕಾಏಕಿ ಗಾಬರಿಗೊಂಡ ಘಟನೆ ನಡೆದಿದೆ.
ಅರಮನೆ ಮುಂಭಾಗಕ್ಕೆ ಬಂದ ವೇಳೆ ಹೆಚ್ಚಿನ ಜನಸಂದಣಿ ಕಂಡು ಶ್ರೀರಾಮ ಆನೆ ಬೆಚ್ಚಿಬಿದ್ದು, ಕೆಲಕಾಲ ಹಿಂದೆ ಸರಿಯಲು ಯತ್ನಿಸಿದೆ. ಅರಮನೆ ದ್ವಾರದ ಬಳಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳು ಹಾಗೂ ಸುತ್ತಮುತ್ತಲಿನ ಜನರ ಚಲನವಲನದಿಂದ ಆನೆ ಮತ್ತಷ್ಟು ಗಾಬರಿಗೊಂಡಿದೆ.
ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಮಾವುತರು ಹಾಗೂ ಕಾವಾಡಿಗರು ಆನೆಯನ್ನ ಹತೋಟಿಗೆ ತಂದರು.
ಅರಮನೆ ದ್ವಾರಕ್ಕೆ ಆಗಮಿಸಿದ ದಸರಾ ಗಜಪಡೆಗಳನ್ನ (Dasara Elephants) ಇಂದು ಸಂಪ್ರದಾಯಬದ್ಧವಾಗಿ ಸ್ವಾಗತಿಸಲಾಯಿತು. ಒಟ್ಟು 9 ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಗಜಪಡೆಗಳು ಮೈಸೂರು ಅರಮನೆಯತ್ತ ಹೆಜ್ಜೆ ಹಾಕಿದವು.
ಶುಭ ಲಗ್ನದಲ್ಲಿ ದಸರಾ ಗಜಪಡೆಗಳು ಅರಮನೆ ಪ್ರವೇಶಿಸಬೇಕಿದ್ದ ಹಿನ್ನೆಲೆ ಮೈಸೂರು ಜಿಲ್ಲಾಡಳಿತ ವತಿಯಿಂದ ಆನೆಗಳನ್ನ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

