ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಸಲಾದ ರೀ-ನೀಟ್ ಯುಜಿ 2026 (NEET UG 2026) ಪರೀಕ್ಷೆಯ ಫಲಿತಾಂಶದ ದಿನಾಂಕದ ಬಗ್ಗೆ ಮಾಹಿತಿ ನೀಡಿದೆ. ಜುಲೈ 20 ರೊಳಗೆ ಅಥವಾ ಅದಕ್ಕೂ ಮುನ್ನವೇ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಎನ್‌ಟಿಎ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಮೇ 3 ರಂದು ನಡೆದಿದ್ದ ಮೂಲ ಪರೀಕ್ಷೆಯು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ರದ್ದಾದ ಕಾರಣ, ಜೂನ್ 21 ರಂದು ದೇಶಾದ್ಯಂತ ಮರು ಪರೀಕ್ಷೆಯನ್ನು ಅತ್ಯಂತ ಕಟ್ಟುನಿಟ್ಟಿನ ಭದ್ರತೆಯಲ್ಲಿ ನಡೆಸಲಾಗಿತ್ತು. ಮರು ಪರೀಕ್ಷೆಯ ತಾತ್ಕಾಲಿಕ ಉತ್ತರ ಪತ್ರಿಕೆಯನ್ನು ಈಗಾಗಲೇ ಜೂನ್ 25 ರಂದು ಬಿಡುಗಡೆ ಮಾಡಲಾಗಿತ್ತು ಮತ್ತು ಆಕ್ಷೇಪಣೆ ಸಲ್ಲಿಸಲು ಜೂನ್ 28 ರವರೆಗೆ ವಿದ್ಯಾರ್ಥಿಗಳಿಗೆ ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ದೇಶಾದ್ಯಂತ ವಿದ್ಯಾರ್ಥಿಗಳಿಂದ ಸುಮಾರು 10,000 ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಎನ್‌ಟಿಎ ಪ್ರತಿಯೊಂದು ಆಕ್ಷೇಪಣೆಯನ್ನು ಅತ್ಯಂತ ಜಾಗರೂಕತೆಯಿಂದ ಪರಿಶೀಲಿಸುತ್ತಿದೆ. ಯುದ್ಧೋಪಾದಿಯಲ್ಲಿ ಮೌಲ್ಯಮಾಪನ ಹಾಗೂ ಪರಿಶೀಲನಾ ಕಾರ್ಯಗಳು ನಡೆಯುತ್ತಿದ್ದು, ಆಕ್ಷೇಪಣೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರವೇ ಅಂತಿಮ ಉತ್ತರ ಪತ್ರಿಕೆ ಹಾಗೂ ಫಲಿತಾಂಶವನ್ನು ಬಿಡುಗಡೆ ಮಾಡಲಾಗುತ್ತದೆ. ಪರೀಕ್ಷೆ ಮರು ಆಯೋಜನೆಯಾಗಿದ್ದರಿಂದ ಶೈಕ್ಷಣಿಕ ವರ್ಷದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ವಿದ್ಯಾರ್ಥಿಗಳಲ್ಲಿ ಮೂಡಿತ್ತು. ಆದರೆ ಎಂಬಿಬಿಎಸ್ ಸೇರಿದಂತೆ ಇತರ ವೈದ್ಯಕೀಯ ಕೋರ್ಸ್‌ಗಳ ಶೈಕ್ಷಣಿಕ ವರ್ಷದ ಆರಂಭಕ್ಕೆ ಯಾವುದೇ ರೀತಿಯ ವಿಳಂಬವಾಗುವುದಿಲ್ಲ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ. ನಿಗದಿತ ಸಮಯಕ್ಕೇ ಕೌನ್ಸೆಲಿಂಗ್ ಪ್ರಕ್ರಿಯೆಗಳು ಆರಂಭವಾಗಲಿದ್ದು, ಫಲಿತಾಂಶ ಪ್ರಕಟವಾದ ತಕ್ಷಣವೇ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯು ಅಖಿಲ ಭಾರತ ಕೋಟಾದ ಸೀಟುಗಳ ದಾಖಲಾತಿ ವೇಳಾಪಟ್ಟಿಯನ್ನು ಪ್ರಕಟಿಸಲಿದೆ. ಇದರೊಂದಿಗೆ ಆಯಾ ರಾಜ್ಯಗಳು ತಮ್ಮ ಪಾಲಿನ ಶೇಕಡಾ 85 ರಷ್ಟು ಸೀಟುಗಳಿಗೆ ಪ್ರತ್ಯೇಕವಾಗಿ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಆರಂಭಿಸಲಿವೆ. ಅಭ್ಯರ್ಥಿಗಳು ಫಲಿತಾಂಶ ಹೊರಬಿದ್ದ ನಂತರ ಎನ್‌ಟಿಎ ಅಧಿಕೃತ ವೆಬ್‌ಸೈಟ್ ಆದ neet.nta.nic.in ಗೆ ಭೇಟಿ ನೀಡಿ ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಅಂಕಪಟ್ಟಿ ಹಾಗೂ ಶ್ರೇಯಾಂಕದ ವಿವರಗಳನ್ನು ಪಡೆದುಕೊಳ್ಳಬಹುದು. ಕೌನ್ಸೆಲಿಂಗ್ ಪ್ರಕ್ರಿಯೆಗಾಗಿ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಗಳನ್ನು ಡೌನ್‌ಲೋಡ್ ಮಾಡಿಕೊಂಡು ಮುದ್ರಿತ ಪ್ರತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಸೂಚಿಸಲಾಗಿದೆ.

