ಕಠ್ಮಂಡು : ನೇಪಾಳದ (Nepal) ತ್ರಿಶೂಲಿ ಕಣಿವೆಯಲ್ಲಿ ಸಂಭವಿಸಿದ ಭೀಕರ ಪ್ರಕೃತಿ ವಿಕೋಪ (Nepal Flood) ನೂರಾರು ಜೀವಗಳನ್ನು ಬಲಿ ಪಡೆದುಕೊಂಡಿದೆ. ಆದರೆ, ಪ್ರಾಣಾಪಾಯದ ನಡುವೆಯೂ ಒಬ್ಬ ಶಿಕ್ಷಕ (Teacher) ತೋರಿದ ಸಮಯಪ್ರಜ್ಞೆ ಮತ್ತು ಸಮಯೋಚಿತ ನಿರ್ಧಾರ 1,643 ಮುಗ್ಧ ಮಕ್ಕಳ ಪ್ರಾಣ ಉಳಿಸುವ ಮೂಲಕ ದೇಶಾದ್ಯಂತ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.
ಕೇವಲ ನಿಮಿಷಗಳಲ್ಲಿ ನಡೆದ ವಿನಾಶ ಮತ್ತು ಸಮಯಪ್ರಜ್ಞೆ ನುವಾಕೋಟ್ ಜಿಲ್ಲೆಯ ತ್ರಿಭುವನ್ ತ್ರಿಶೂಲಿ ಮಾಧ್ಯಮಿಕ ಶಾಲೆಯಲ್ಲಿ ಬುಧವಾರ ಬೆಳಿಗ್ಗೆ 9:20ರ ವೇಳೆಗೆ ಪ್ರಾಂಶುಪಾಲ ಹಾಗೂ ಇಂಗ್ಲಿಷ್ ಶಿಕ್ಷಕರಾದ 47 ವರ್ಷದ ರಾಜೇಂದ್ರ ದಾವಾಡಿ ಅವರಿಗೆ ಗೆಳೆಯನೊಬ್ಬನಿಂದ ದೂರವಾಣಿ ಕರೆ ಬಂದಿತ್ತು. "ಗ್ರಾಮವೆಲ್ಲಾ ಪ್ರವಾಹಕ್ಕೆ ಕೊಚ್ಚಿಹೋಗಿದೆ, ತಕ್ಷಣ ಇಲ್ಲಿಂದ ಓಡಿ ಪ್ರಾಣ ಉಳಿಸಿಕೊಳ್ಳಿ" ಎಂಬ ಎಚ್ಚರಿಕೆಯನ್ನು ಆ ಕರೆ ನೀಡಿತು. ಪ್ರಾಣಾಪಾಯ ಗ್ರಹಿಸಿ ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತ ಅಷ್ಟಕ್ಕೇ ನಿಲ್ಲದೇ, ಶಾಲೆಗೆ ಬರುತ್ತಿದ್ದ ಬಸ್ ಚಾಲಕರಿಗೆ ತಕ್ಷಣ ಫೋನ್ ಮಾಡಿ ವಾಹನಗಳನ್ನು ಸುರಕ್ಷಿತ ಸ್ಥಳಕ್ಕೆ ಹಿಂತಿರುಗಿಸುವಂತೆ ಆದೇಶಿಸಿದರು. ನದಿಯ ಸೇತುವೆ ದಾಟುತ್ತಿದ್ದ ಒಂದು ಬಸ್ ಸಂಪರ್ಕ ಸಿಗದೆ ಹೋಯಿತಾದರೂ, ತಕ್ಷಣವೇ ಎಲ್ಲ ಮಕ್ಕಳನ್ನು ಎತ್ತರದ ಗುಡ್ಡದತ್ತ ಕರೆದೊಯ್ಯಲು ವ್ಯವಸ್ಥೆ ಮಾಡಿದರು. ಭಯದಿಂದ ಕುಸಿದುಬಿದ್ದ ಬಾಲಕಿಯೊಬ್ಬಳನ್ನು ಬೈಕ್‌ನಲ್ಲಿ ಸುರಕ್ಷಿತ ಸ್ಥಳಕ್ಕೆ ತಲುಪಿಸಲಾಯಿತು. ಮರದ ಅಡಿಯಲ್ಲಿ ಜೀವ ಉಳಿಸಿಕೊಂಡ ಮಕ್ಕಳು ದುರದೃಷ್ಟವಶಾತ್, ಉಪಹಾರ ತಯಾರಿಸಲು ನದಿ ದಂಡೆಯಲ್ಲಿದ್ದ ತಮ್ಮ ಕೊಠಡಿಗೆ ತೆರಳಿದ್ದ ಸಾಮಾಜಿಕ ವಿಜ್ಞಾನ ಶಿಕ್ಷಕ ಸಂತೋಷ್ ಪರಿಯಾರ್ ಮತ್ತು ಶಾಲೆಯ ಬಾಗಿಲುಗಳನ್ನು ಮುಚ್ಚಲು ಹಿಂತಿರುಗಿದ್ದ ಸಿಬ್ಬಂದಿ ಸುಲ್ತಾನ್ ಲಾಮಾ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿ ಅಂತಿಮ ಶ್ವಾಸ ಎಳೆದರು.
ನೇಪಾಳ-ಟಿಬೆಟ್ ಗಡಿಭಾಗದ ಲ್ಯಾಂಗ್‌ಟಾಂಗ್ ಲಿರುಂಗ್ ಶಿಖರದಿಂದ ಬೃಹತ್ ಹಿಮಪಾತ ಮತ್ತು ಬಂಡೆಗಳು ಕುಸಿದು ಬಿದ್ದಿದ್ದರಿಂದ ಲೆಂಧೆ ಖೋಲಾ ನದಿಯಲ್ಲಿ ದಿಢೀರ್ ಉಕ್ಕಿ ಹರಿದ ಜಲಪ್ರಳಯ ಇಡೀ ತ್ರಿಶೂಲಿ ಕಣಿವೆಯನ್ನು ನಡುಗಿಸಿತ್ತು. ಈ ಭೀಕರ ಆಘಾತದಿಂದ ನೂರಾರು ಜನರು ಮೃತಪಟ್ಟು, ಸಾವಿರಾರು ಜನರು ಕಾಣೆಯಾಗಿದ್ದರು. ನದಿಪಾತ್ರದ ಬಹುತೇಕ ಸೇತುವೆಗಳು, ಮನೆಗಳು ಮತ್ತು ವಿದ್ಯುತ್ ಸ್ಥಾವರಗಳು ನೀರಿನಲ್ಲಿ ಕೊಚ್ಚಿಹೋದವು.
ಆರಂಭದಲ್ಲಿ ತಮ್ಮ ಮೂರು ಅಂತಸ್ತಿನ ಶಾಲಾ ಕಟ್ಟಡವು ನದಿಯಿಂದ 60 ಮೀಟರ್ ಎತ್ತರದಲ್ಲಿದ್ದು ಸುರಕ್ಷಿತವಾಗಿದೆ ಎಂದು ದಾವಾಡಿ ಭಾವಿಸಿದ್ದರು. ಆದರೆ ಮರುಕ್ಷಣವೇ ವಿದ್ಯಾರ್ಥಿಯೊಬ್ಬರ ಪೋಷಕರು ಓಡೋಡಿ ಬಂದು ನೀರು ಅತ್ಯಂತ ವೇಗವಾಗಿ ಹೆಚ್ಚುತ್ತಿರುವುದಾಗಿ ತಿಳಿಸಿದರು. ಪರಿಸ್ಥಿತಿಯ ತೀವ್ರತೆಯನ್ನು ಅರಿತ ಪ್ರಾಂಶುಪಾಲರು ತಡಮಾಡದೆ ಶಾಲೆಯ ಗಂಟೆಯನ್ನು ಸತತವಾಗಿ ಬಾರಿಸಿ, ತರಗತಿಗಳಲ್ಲಿದ್ದ ಎಲ್ಲ ಮಕ್ಕಳನ್ನು ಖಾಲಿ ಮಾಡುವಂತೆ ಶಿಕ್ಷಕರಿಗೆ ಖಡಕ್ ಸೂಚನೆ ನೀಡಿದರು.
ಉಕ್ಕಿ ಹರಿಯುತ್ತಿದ್ದ ಕೆಸರು ನೀರು ಶಾಲೆಯ ಸನಿಹಕ್ಕೆ ಬರುತ್ತಿದ್ದಂತೆಯೇ ಮಕ್ಕಳೆಲ್ಲರೂ ಓಡಿ ಹೋಗಿ ಬೆಟ್ಟದ ಮೇಲಿದ್ದ ಮರದ ಅಡಿಯಲ್ಲಿ ಆಶ್ರಯ ಪಡೆದರು. ಕಣ್ಣಿಮೆಚ್ಚಾಕುವಷ್ಟರಲ್ಲಿ ಶಾಲೆಯ ಕಟ್ಟಡವೇ ಪ್ರವಾಹದ ರಭಸಕ್ಕೆ ಸಿಲುಕಿ ನೆಲಸಮವಾಯಿತು. ರಾಜೇಂದ್ರ ದಾವಾಡಿ ಅವರ ಈ ಧೈರ್ಯದ ನಿರ್ಧಾರದಿಂದಾಗಿ ಶಾಲೆಯಲ್ಲಿದ್ದ 1,643 ವಿದ್ಯಾರ್ಥಿಗಳು ಮತ್ತು ಹೆಚ್ಚಿನ ಸಿಬ್ಬಂದಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದರು.
ಸಮಯಕ್ಕೆ ಸರಿಯಾಗಿ ನಿರ್ಧಾರ ತೆಗೆದುಕೊಂಡು ನೂರಾರು ಕುಟುಂಬಗಳ ಕಣ್ಣೀರನ್ನು ಒರೆಸಿದ ಶಿಕ್ಷಕ ರಾಜೇಂದ್ರ ದಾವಾಡಿ ಅವರ ನಿಸ್ವಾರ್ಥ ಸೇವೆ ಹಾಗೂ ಶೌರ್ಯವನ್ನು ಇಡೀ ನೇಪಾಳ ದೇಶವೇ ಕೊಂಡಾಡುತ್ತಿದೆ.

