ನೇಪಾಳದಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹದ (Nepal flood) ಅಡಿಹಿಡಿದ ಶೋಕದ ನಡುವೆ, 97 ವರ್ಷದ ವೃದ್ಧೆಯೊಬ್ಬರ ಹೋರಾಟ ಹಾಗೂ ಪವಾಡಸದೃಶ ರಕ್ಷಣೆ ಇಡೀ ದೇಶಕ್ಕೇ ಧೈರ್ಯದ ಸಂಕೇತವಾಗಿ ಹೊರಹೊಮ್ಮಿದೆ. ಹಿಮಪಾತ (Avlanche) ಹಾಗೂ ಭೋಟೆ ಕೋಶಿ ನದಿಯ (Koshi river) ಪ್ರವಾಹದಿಂದ ಕೊಚ್ಚಿಹೋದ ಕಟ್ಟಡದ ಭಗ್ನಾವಶೇಷಗಳ ಅಡಿಯಲ್ಲಿ ಸಿಲುಕಿದ್ದ ಗುಣ ಮಾಯಾ ಬೊಹಾರ ಎಂಬ ಹಿರಿಯ ಜೀವ, ಕಲ್ಲು-ಮಣ್ಣಿನ ರಾಶಿಯಿಂದ ಸುರಕ್ಷಿತವಾಗಿ ಹೊರಬಂದು ನೇಪಾಳದ ಈ ಮಹಾ ದುರಂತದ ಜೀವಂತ ಶಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ನೇಪಾಳದ ರಸುವಾ ಜಿಲ್ಲೆಯಲ್ಲಿ ಬುಧವಾರ ಹಿಮನದಿ ಕುಸಿದು ಭೋಟೆ ಕೋಶಿ ನದಿಯಲ್ಲಿ ದಿಢೀರ್ ರೌದ್ರಾವತಾರ ತಳೆದ ಪ್ರವಾಹವು ಅಪಾರ ಪ್ರಮಾಣದ ನಾಶನಷ್ಟವನ್ನು ಉಂಟುಮಾಡಿದೆ. ಈ ವೇಳೆ ವೃದ್ಧಾಶ್ರಮವೊಂದರಲ್ಲಿ ವಾಸಿಸುತ್ತಿದ್ದ ಗುಣ ಮಾಯಾ ಅವರು ಕುಸಿದುಬಿದ್ದ ಕಟ್ಟಡದ ಅವಶೇಷಗಳು ಮತ್ತು ಕೆಸರಿನಡಿಯಲ್ಲಿ ಸಿಲುಕಿಕೊಂಡಿದ್ದರು. ಸುಮಾರು 24 ಗಂಟೆಗಳ ಕಾಲ ಸಾವಿನ ನಡುವೆ ಹೋರಾಡುತ್ತಿದ್ದ ಅವರನ್ನು ರಕ್ಷಿಸಲು ನೇಪಾಳ ಸೇನೆ ಮತ್ತು ಪೋಲಿಸರು ಜಂಟಿಯಾಗಿ ಬೃಹತ್ ಕಾರ್ಯಾಚರಣೆ ನಡೆಸಿದರು. ಸುಮಾರು ನಾಲ್ಕು ಗಂಟೆಗಳ ಕಾಲ ಸುಧೀರ್ಘ ಕಾರ್ಯಾಚರಣೆ ನಡೆಸಿದ ರಕ್ಷಣಾ ಪಡೆಗಳು, ಕೊನೆಗೂ ವೃದ್ಧೆಯನ್ನು ಜೀವಂತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾದವು. ಕಾಠ್ಮಂಡುವಿನಿಂದ ತನ್ನ ಅಜ್ಜಿಯ ರಕ್ಷಣೆಗೆ ಧಾವಿಸಿ ಬಂದಿದ್ದ ಮೊಮ್ಮಗ ದೀಪಕ್ ಬೊಹಾರ, ಮರಗಳಿಗೆ ಹಗ್ಗ ಕಟ್ಟಿ ಕಟ್ಟಡದ ಆಳಕ್ಕೆ ಇಳಿದು ಅಜ್ಜಿ ಜೀವಂತವಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡರು. ಯುದ್ಧ ಗೆದ್ದುಬಂದ ಯೋಧನಂತೆ ಗುಣ ಮಾಯಾ ಅವರು ಭಗ್ನಾವಶೇಷಗಳಿಂದ ಹೊರಬಂದ ಕ್ಷಣ ಪ್ರತಿಯೊಬ್ಬರ ಕಣ್ಣಲ್ಲೂ ಭರವಸೆಯ ಬೆಳಕು ಮೂಡಿಸಿತು. ಬಳಿಕ ಜೆಸಿಬಿ ಯಂತ್ರದ (ಎಕ್ಸ್‌ಕವೇಟರ್) ಬಕೆಟ್‌ನಲ್ಲಿ ಕುಳ್ಳಿರಿಸಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು. ಮಣ್ಣಿನಿಂದ ಕೂಡಿದ ಬಟ್ಟೆ, ಆಯಾಸದಿಂದ ವೃದ್ಧಾಪ್ಯದ ಮುಖದಲ್ಲಿದ್ದ ಗಂಭೀರ ಭಾವನೆ ಹಾಗೂ ಜೆಸಿಬಿ ಬಕೆಟ್‌ನಲ್ಲಿ ಕುಳಿತಿರುವ ಅವರ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಮಹಾ ದುರಂತದ ನಡುವೆಯೂ ಬದುಕಿನ ಭರವಸೆಯ ಬಲವಾದ ಚಿತ್ರಣವಾಗಿ ಜಗತ್ತಿನ ಗಮನ ಸೆಳೆದಿದೆ. ಪ್ರಸ್ತುತ ಗುಣ ಮಾಯಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಾನು ಪ್ರವಾಹದ ಸುಳಿಯಿಂದ ಹೇಗೆ ಬದುಕಿ ಬಂದೆ ಎಂಬುದನ್ನು ವಿವರಿಸಲಾಗದಷ್ಟು ಆಘಾತದಲ್ಲಿದ್ದಾರೆ. ಈ ನಡುವೆ ನೇಪಾಳದ ಪ್ರವಾಹ ಪರಿಸ್ಥಿತಿ ಅತ್ಯಂತ ಭೀಕರವಾಗಿದೆ. ಇದುವರೆಗೆ 676 ಕ್ಕೂ ಹೆಚ್ಚು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, 300 ಕ್ಕೂ ಹೆಚ್ಚು ಭಾರತೀಯರು ಸೇರಿದಂತೆ ಸುಮಾರು 3,000 ಕ್ಕೂ ಹೆಚ್ಚು ಜನರು ಇನ್ನೂ ಪತ್ತೆಯಾಗಿಲ್ಲ. ಹವಾಮಾನ ಇಲಾಖೆಯು ಮತ್ತೆ ಭಾರಿ ಮಳೆ ಮತ್ತು ಸಿಡಿಲು ಸಹಿತ ಮಳೆಯ ಮುನ್ನೆಚ್ಚರಿಕೆ ನೀಡಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯುಂಟಾಗಿದೆ. ನೇಪಾಳದ ಹಣಕಾಸು ಸಚಿವ ಸ್ವರ್ಣಿಮ್ ವಾಗ್ಲೆ ಅವರ ಪ್ರಕಾರ, ಸಂಭವಿಸಿದ ಹಾನಿಯಿಂದ ದೇಶವನ್ನು ಮತ್ತೆ ಪುನರ್ನಿರ್ಮಿಸಲು ಸುಮಾರು 4 ರಿಂದ 5 ಶತಕೋಟಿ ಡಾಲರ್ ವೆಚ್ಚವಾಗಲಿದ್ದು, ಇದು ದೇಶದ ಒಟ್ಟು ಆರ್ಥಿಕತೆಯ ಶೇ 10 ರಷ್ಟಾಗಿದೆ. ಆದರೆ ಈ ಎಲ್ಲಾ ಕತ್ತಲೆಯ ನಡುವೆಯೂ, 97 ವರ್ಷದ ಗುಣ ಮಾಯಾ ಬೊಹಾರ ಅವರ ಬದುಕುವ ಛಲ ನೇಪಾಳದ ಜನತೆಗೆ ಭರವಸೆಯ ಬೆಳಕಾಗಿ ನಿಂತಿದೆ.

