ಕಠ್ಮಂಡು : ನೇಪಾಳ (Nepal Flood) ಮತ್ತು ಟಿಬೆಟ್ (Tibet) ಗಡಿಭಾಗದಲ್ಲಿ ಸಂಭವಿಸಿದ ಮಹಾ ಪ್ರಕೃತಿ ವಿಕೋಪ ಪರಿಸ್ಥಿತಿಯನ್ನು ಮತ್ತಷ್ಟು ಭೀಕರಗೊಳಿಸಿದೆ. ಟಿಬೆಟ್ ಭಾಗದ ಗಿರೋಂಗ್ ಗಡಿ ಬಂದರಿನ ಬಳಿ ನೈಸರ್ಗಿಕವಾಗಿ ರೂಪುಗೊಂಡಿದ್ದ ಆಣೆಕಟ್ಟು ಮತ್ತು ಸರೋವರ ಮೈದುಂಬಿ ಒಡೆದು ನೀರು ಹೊರಚೆಲ್ಲುತ್ತಿರುವುದರಿಂದ ನೇಪಾಳ ಹಾಗೂ ಟಿಬೆಟ್‌ನ ತಗ್ಗು ಪ್ರದೇಶಗಳಲ್ಲಿ ಹೊಸದಾಗಿ ಜಲಪ್ರಳಯದ ಭೀತಿ ಎದುರಾಗಿದೆ.
ಈ ಆಕಸ್ಮಿಕ ಬೆಳವಣಿಗೆಯಿಂದಾಗಿ ನೇಪಾಳ ಸೇನೆಯು ತಕ್ಷಣವೇ ಹೆಲಿಕಾಪ್ಟರ್ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಒಂದೂವರೆ ಗಂಟೆಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯರನ್ನು ಎತ್ತರದ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಿತು. ಸಾಗರಮಟ್ಟದಿಂದ ಅತ್ಯಂತ ಎತ್ತರದಲ್ಲಿರುವ ಹಿಮನದಿಯ ಭಾಗವೊಂದು ಕುಸಿದು ಲೆಂಧೆ ಖೋಲಾ ನದಿ ಜಲಾನಯನ ಪ್ರದೇಶಕ್ಕೆ ಬಿದ್ದಿದ್ದರಿಂದ ಹಿಮ, ಬಂಡೆಗಳು ಮತ್ತು ಕೆಸರಿನ ದೈತ್ಯ ಪ್ರವಾಹ ಸೃಷ್ಟಿಯಾಗಿತ್ತು. ಬೋಟೇಕೋಶಿ ಮತ್ತು ತ್ರಿಶೂಲಿ ನದಿ ಕಾರಿಡಾರ್‌ಗಳಲ್ಲಿ ಕ್ಷಣಾರ್ಧದಲ್ಲಿ ನೀರು ಸುಮಾರು ಮೂವತ್ತು ಅಡಿಗಳಷ್ಟು ಎತ್ತರಕ್ಕೆ ಜಿಗಿದು ಹರಿದ ಪರಿಣಾಮ ಇಡೀ ಪ್ರದೇಶ ಸರ್ವನಾಶವಾಗಿದೆ. ಗಡಿಯಿಂದ ಕೇವಲ ಏಳು ನಿಮಿಷಗಳಲ್ಲಿ ಧಾವಿಸಿದ ಈ ಕೆಸರು ಮಿಶ್ರಿತ ಪ್ರವಾಹ ಸೇತುವೆಗಳು, ರಸ್ತೆಗಳು ಮತ್ತು ಜಲವಿದ್ಯುತ್ ಯೋಜನೆಗಳನ್ನು ಕೊಚ್ಚಿಕೊಂಡು ಹೋಗಿದೆ. ಈ ಜಲಪ್ರಳಯದಿಂದಾಗಿ ನೇಪಾಳದಲ್ಲಿ ಮೃತರ ಸಂಖ್ಯೆ 469ಕ್ಕೆ ಏರಿಕೆಯಾಗಿದ್ದು, ನೆರೆಯ ಟಿಬೆಟ್‌ನಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 1,400ಕ್ಕೂ ಹೆಚ್ಚು ಜನರು ಇನ್ನೂ ಪತ್ತೆಯಾಗಿಲ್ಲ. ನಾಪತ್ತೆಯಾದವರಲ್ಲಿ ಭಾರತೀಯರು ಸೇರಿದಂತೆ ವಿವಿಧ ದೇಶಗಳ 540ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು, ಯಾತ್ರಿಕರು ಮತ್ತು ಕಾರ್ಮಿಕರು ಸೇರಿದ್ದಾರೆ. ಭಾರತದ 285ಕ್ಕೂ ಹೆಚ್ಚು ಪ್ರಜೆಗಳನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದ್ದು, ತ್ರಿಶೂಲಿ-1 ಯೋಜನೆಯಲ್ಲಿದ್ದ ಕಾರ್ಮಿಕರು ಹಾಗೂ ಯಾತ್ರಿಕರು ಸೇರಿದಂತೆ ಕೆಲವರನ್ನು ರಕ್ಷಿಸಲಾಗಿದೆ. ಪ್ರವಾಹದ ರಭಸಕ್ಕೆ ಕೊಚ್ಚಿಹೋದ ಮೃತದೇಹಗಳು ನೂರಾರು ಕಿಲೋಮೀಟರ್ ದೂರದ ತಗ್ಗು ಪ್ರದೇಶಗಳಲ್ಲಿ ಪತ್ತೆಯಾಗುತ್ತಿದ್ದು, ಭಾರತದ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಭಾಗದ ಗಂಡಕ್ ನದಿಯಲ್ಲೂ ಮೃತದೇಹಗಳು ಪತ್ತೆಯಾಗಿವೆ. ಇದರಿಂದಾಗಿ ಉತ್ತರ ಪ್ರದೇಶ ಮತ್ತು ಬಿಹಾರದ ಗಡಿ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಟಿಬೆಟ್‌ನಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಉನ್ನತ ಮಟ್ಟದ ರಕ್ಷಣಾ ಸಭೆ ನಡೆಸಿದ್ದು, ಅಲ್ಲಿಯೂ ಪ್ರವಾಹ ಭೀತಿಯಿಂದಾಗಿ ರಕ್ಷಣಾ ತಂಡಗಳನ್ನು ಸುರಕ್ಷಿತ ಅಂತರಕ್ಕೆ ಹಿಂಪಡೆಯಲಾಗಿದೆ. ನೇಪಾಳದಲ್ಲಿ ಸೇನೆ ಹಾಗೂ ಭದ್ರತಾ ಪಡೆಗಳು 14ಕ್ಕೂ ಹೆಚ್ಚು ಹೆಲಿಕಾಪ್ಟರ್‌ಗಳನ್ನು ಬಳಸಿ 1,500ಕ್ಕೂ ಹೆಚ್ಚು ಜನರನ್ನು ರಕ್ಷಿಸಿವೆ. ಭೋಟಕೋಶಿ ನದಿಯಲ್ಲಿ ಮಣ್ಣು ಹಾಗೂ ಕಲ್ಲುಗಳು ಸಿಲುಕಿ ಸೃಷ್ಟಿಯಾಗಿರುವ ಕೃತಕ ಸರೋವರ ಯಾವುದೇ ಕ್ಷಣದಲ್ಲಾದರೂ ಸಂಪೂರ್ಣವಾಗಿ ಒಡೆಯುವ ಅಪಾಯವಿರುವುದರಿಂದ ಇಡೀ ಗಡಿ ವಲಯದಲ್ಲಿ ಆತಂಕದ ವಾತಾವರಣ ಮನೆಮಾಡಿದೆ.

