ಕಠ್ಮಂಡು: ಕಳೆದ ಮೂರು ದಶಕಗಳಲ್ಲೇ ಕಂಡು ಕೇಳರಿಯದ ಭೀಕರ ಪ್ರವಾಹಕ್ಕೆ(Flood) ನೇಪಾಳ(nepal) ಸಂಪೂರ್ಣವಾಗಿ ತತ್ತರಿಸಿಹೋಗಿದೆ. ಈ ಪ್ರಕೃತಿ ವಿಕೋಪದಿಂದಾಗಿ(Natural disaster) ದೇಶಾದ್ಯಂತ ಸಾವಿನ ಸಂಖ್ಯೆ 392ಕ್ಕೆ ಏರಿಕೆಯಾಗಿದ್ದು, 1500ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ.
ಚಿತ್ವಾನ್, ನವಲ್‌ಪರಾಸಿ, ಧಾಡಿಂಗ್, ರಸುವಾ ಮತ್ತು ನುವಾಕೋಟ್ ಸೇರಿದಂತೆ ಹಲವು ಜಿಲ್ಲೆಗಳು ಜಲಪ್ರಳಯಕ್ಕೆ ತೀವ್ರವಾಗಿ ಹಾನಿಗೊಳಗಾಗಿವೆ. ಪ್ರವಾಸಕ್ಕಾಗಿ ತೆರಳಿದ್ದ 288 ಭಾರತೀಯರು ಸೇರಿದಂತೆ ನಾಪತ್ತೆಯಾಗಿರುವ ನೂರಾರು ಜನರಿಗಾಗಿ ರಕ್ಷಣಾ ಪಡೆಗಳು ಸಮರೋಪಾದಿಯಲ್ಲಿ ಹುಡುಕಾಟ ನಡೆಸುತ್ತಿವೆ. ಕಾರ್ಯಾಚರಣೆಯಲ್ಲ ನಿರತರಾಗಿರುವ ಸೈನಿಕರು ಹಾಗೂ ರಕ್ಷಣಾ ಸಿಬ್ಬಂದಿ ಇದುವರೆಗೆ 800ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂಪೂರ್ಣವಾಗಿ ಕಡಿತಗೊಂಡ ರಸ್ತೆ ಸಂಪರ್ಕ ಪ್ರವಾಹದ ರಭಸಕ್ಕೆ ದೇಶಾದ್ಯಂತ 80ಕ್ಕೂ ಹೆಚ್ಚು ಸೇತುವೆಗಳು (35 ಸಾಮಾನ್ಯ ಹಾಗೂ 45 ತೂಗುಸೇತುವೆಗಳು) ಕೊಚ್ಚಿಹೋಗಿವೆ. ರಾಜಧಾನಿ ಕಠ್ಮಂಡುವನ್ನು ಸಂಪರ್ಕಿಸುವ ಮುಖ್ಯ ಹೆದ್ದಾರಿ ಸೇರಿದಂತೆ ನೂರಾರು ಕಿಲೋಮೀಟರ್ ರಸ್ತೆಗಳು ನೀರುಪಾಲಾಗಿವೆ. ಪರಿಣಾಮವಾಗಿ ದೇಶದ ಪ್ರಮುಖ ಸಂಚಾರ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದ್ದು, ನೇಪಾಳದ ಆಧುನಿಕ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ನೈಸರ್ಗಿಕ ದುರಂತವಾಗಿ ದಾಖಲಾಗಿದೆ. ಬೆಂಗಳೂರಿನ 8 ಕನ್ನಡಿಗರು ನಾಪತ್ತೆ: ಕಠ್ಮಂಡುಗೆ ರಾಜ್ಯ ಸರ್ಕಾರದ ಅಧಿಕಾರಿಗಳು ನೇಪಾಳದ ಭೀಕರ ಪ್ರವಾಹದ ಬಿಸಿ ಕನ್ನಡಿಗರಿಗೂ ತಟ್ಟಿದೆ. ಬೆಂಗಳೂರು ಮೂಲದ 8 ಮಂದಿ ಪ್ರವಾಸಿಗರು ನೇಪಾಳದಲ್ಲಿ ಸಿಲುಕಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ಅವರ ರಕ್ಷಣೆಗೆ ಕರ್ನಾಟಕ ಸರ್ಕಾರ ತಕ್ಷಣದ ಕ್ರಮ ಕೈಗೊಂಡಿದೆ. ಕನ್ನಡಿಗರ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಲು ಮತ್ತು ಸಮನ್ವಯ ಸಾಧಿಸಲು ಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು ನೇರವಾಗಿ ಕಠ್ಮಂಡುಗೆ ಕಳುಹಿಸಲು ಸರ್ಕಾರ ನಿರ್ಧರಿಸಿದೆ. ನೆರವಿಗೆ ಸರ್ಕಾರದ ತುರ್ತು ಸಹಾಯವಾಣಿ ಸಂಕಷ್ಟದಲ್ಲಿರುವ ಕನ್ನಡಿಗರ ಕುಟುಂಬಗಳ ನೆರವಿಗಾಗಿ ಹಾಗೂ ತುರ್ತು ಮಾಹಿತಿಗಾಗಿ ರಾಜ್ಯ ಸರ್ಕಾರ ಸಹಾಯವಾಣಿ ಕೇಂದ್ರವನ್ನು ತೆರೆದಿದೆ. ಬಾಧಿತ ಕುಟುಂಬಸ್ಥರು ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

