Dailyhunt Logo
  • Light mode
    Follow system
    Dark mode
    • Play Story
    • App Story
NEPAL : ನೇಪಾಳ ಪ್ರವಾಹದಿಂದ 'ಗ್ರೇಟ್ ಎಸ್ಕೇಪ್' - ಸಾವಿನ ದವಡೆಯಿಂದ ಬದುಕಿಬಂದ ಕನ್ನಡಿಗರು ಹೇಳಿದ್ದೇನು?

NEPAL : ನೇಪಾಳ ಪ್ರವಾಹದಿಂದ 'ಗ್ರೇಟ್ ಎಸ್ಕೇಪ್' - ಸಾವಿನ ದವಡೆಯಿಂದ ಬದುಕಿಬಂದ ಕನ್ನಡಿಗರು ಹೇಳಿದ್ದೇನು?

Navasamaja.com 3 weeks ago

ಹಾವೇರಿ: ನೇಪಾಳದಲ್ಲಿ (Nepal) ಹಠಾತ್ ಪ್ರವಾಹ ಅಪ್ಪಳಿಸುವ ಕೆಲವೇ ಗಂಟೆಗಳ ಮುನ್ನ ಅಪಾಯದ ಪ್ರದೇಶವನ್ನು ದಾಟಿದ್ದ ಹಾವೇರಿಯ (Haveri) 55 ಮಂದಿ ಪ್ರವಾಸಿಗರು ಇದೀಗ ಸುರಕ್ಷಿತ ಸ್ಥಳ ಸೇರಿದ್ದಾರೆ. ಆದರೆ, ತಮ್ಮ ಕಣ್ಣೆದುರೇ ಪ್ರವಾಹದ (Flood) ರುದ್ರರೂಪ ಕಂಡ ಈ ಪ್ರವಾಸಿಗರ ಮಾತುಗಳು ದುರಂತದ ಭೀಕರತೆಯನ್ನು ತೆರೆದಿಡುತ್ತಿವೆ.

'ನಾವು 12 ಗಂಟೆ ತಡವಾಗಿದ್ದರೆ ನಮ್ಮ ಗತಿಯೂ ಬೇರೆಯಾಗಿರುತ್ತಿತ್ತು' ಎಂದು ಪ್ರವಾಸಿಗರು ಹೇಳಿಕೊಂಡಿದ್ದಾರೆ.

ಹಾವೇರಿ ಜಿಲ್ಲೆಯಿಂದ 55 ಮಂದಿಯ ತಂಡ ಆಗಸ್ಟ್ 23ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇಪಾಳ ಪ್ರವಾಸಕ್ಕೆ ಹೊರಟಿತ್ತು. ಮರುದಿನ ಉತ್ತರ ಪ್ರದೇಶದ ಗೋರಖ್‌ಪುರ ತಲುಪಿದ ತಂಡ ಅಲ್ಲಿಂದ ನೇಪಾಳದ ಪೋಖರಾಗೆ ತೆರಳಿತ್ತು. ಪ್ರವಾಸದ ಭಾಗವಾಗಿ ಆಗಸ್ಟ್ 25ರಂದು ಪೋಖರಾದಿಂದ ಮುಕ್ತಿನಾಥ ದೇವಸ್ಥಾನಕ್ಕೆ ಪ್ರಯಾಣ ಬೆಳೆಸಿತ್ತು.

ಮುಕ್ತಿನಾಥ ದರ್ಶನ ಮುಗಿಸಿ ವಾಪಸ್ ಬರುವಾಗ ತಂಡ ಏಷ್ಯಾದಲ್ಲೇ ಅತಿ ಎತ್ತರ ಹಾಗೂ ಉದ್ದವಾದ ಕುಶ್ಮಾ ಕೈಯಾ ತೂಗು ಸೇತುವೆಯನ್ನು ದಾಟಿತ್ತು. ಆ ವೇಳೆ ಪರಿಸ್ಥಿತಿ ಸಹಜವಾಗಿತ್ತು. ಆದರೆ ಸಂಜೆ ವೇಳೆಗೆ ಭಾರಿ ಮಳೆ ಆರಂಭವಾಗಿತ್ತು. ಮರುದಿನ ಬೆಳಗ್ಗೆ ಪರಿಸ್ಥಿತಿ ಸಂಪೂರ್ಣ ಬದಲಾಗಿತ್ತು.

ಆಗಸ್ಟ್ 26ರಂದು ಬೆಳಗ್ಗೆ ಸುಮಾರು 9 ಗಂಟೆ ವೇಳೆಗೆ ಹಠಾತ್ ಪ್ರವಾಹ ಉಂಟಾಗಿ ಹಲವು ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಹಾನಿ ಸಂಭವಿಸಿದೆ. ಪ್ರವಾಹದ ರಭಸಕ್ಕೆ ಸೇತುವೆಯೂ ಕೊಚ್ಚಿಕೊಂಡು ಹೋಗಿದೆ. ಆದರೆ ಅದೃಷ್ಟವಶಾತ್ ಹಾವೇರಿಯ ಪ್ರವಾಸಿಗರು ಅದಕ್ಕೂ ಮುನ್ನವೇ ಆ ಪ್ರದೇಶವನ್ನು ದಾಟಿದ್ದರು.

20 ಕಿ.ಮೀ. ಅಂತರದಲ್ಲಿ ಉಳಿಯಿತು ಜೀವ

ಪ್ರವಾಹದಿಂದ ಭಾರಿ ಹಾನಿಗೊಳಗಾದ ಪ್ರದೇಶದಿಂದ ಸುಮಾರು 20 ಕಿ.ಮೀ. ದೂರದಲ್ಲಿದ್ದ ಕಾರಣ 55 ಮಂದಿಯ ತಂಡ ಸುರಕ್ಷಿತವಾಗಿತ್ತು. ಪರಿಸ್ಥಿತಿ ಗಂಭೀರವಾಗಿರುವುದು ತಿಳಿಯುತ್ತಿದ್ದಂತೆ ಅಲ್ಲಿಂದ ತಕ್ಷಣವೇ ಹೊರಟ ಪ್ರವಾಸಿಗರು ಸುಮಾರು 50 ಕಿ.ಮೀ. ದೂರದ ಸುರಕ್ಷಿತ ಪ್ರದೇಶ ತಲುಪಿದರು.

ತಂಡದಲ್ಲಿದ್ದ ಶಿವನಗೌಡ ಚಿಲ್ಲೂರ್ ತಮ್ಮ ಅನುಭವ ಹಂಚಿಕೊಂಡಿದ್ದು, ಮುಕ್ತಿನಾಥ ದರ್ಶನ ಮುಗಿಸಿ ವಾಪಸ್ ಬರುವಷ್ಟರಲ್ಲಿ ಹವಾಮಾನ ಬದಲಾಗಿತ್ತು. ಆದರೆ ಪ್ರವಾಹ ತೀವ್ರಗೊಂಡ ಪ್ರದೇಶವನ್ನು ಅದಕ್ಕೂ ಮುನ್ನ ದಾಟಿದ್ದರಿಂದ ತಮ್ಮ ತಂಡ ಅಪಾಯದಿಂದ ಪಾರಾಯಿತು ಎಂದು ತಿಳಿಸಿದ್ದಾರೆ.

ಸದ್ಯ ಪ್ರವಾಸಿಗರು ಸುರಕ್ಷಿತ ಸ್ಥಳದಲ್ಲಿದ್ದು, ಅಲ್ಲಿಂದ ಮತ್ತೊಂದು ಮಾರ್ಗದ ಮೂಲಕ ಅಯೋಧ್ಯೆಗೆ ತೆರಳಲು ಸಿದ್ಧತೆ ನಡೆಸಿದ್ದಾರೆ. ಆಗಸ್ಟ್ 29ರ ಸಂಜೆ ವೇಳೆಗೆ ಬೆಂಗಳೂರಿಗೆ ಮರಳುವ ನಿರೀಕ್ಷೆಯಲ್ಲಿದ್ದಾರೆ.

'12 ಗಂಟೆ ತಡವಾಗಿದ್ದರೆ ನಮ್ಮ ಕಥೆಯೇ ಬೇರೆಯಾಗುತ್ತಿತ್ತು'

ಅದೇ ತಂಡದ ಸಹ ಪ್ರಯಾಣಿಕ ಎಸ್.ಬಿ. ಗುಲಪ್ಪನವರ್ ಹೇಳಿರುವ ಮಾತುಗಳು ಈ 'ಗ್ರೇಟ್ ಎಸ್ಕೇಪ್' ಎಷ್ಟು ಸಣ್ಣ ಅಂತರದಲ್ಲಿ ನಡೆದಿದೆ ಎಂಬುದನ್ನು ತೋರಿಸುತ್ತವೆ.

'ಪ್ರವಾಹ ಸಂಭವಿಸಿದ ದಿನ ಇಡೀ ದಿನ ಭಯದಲ್ಲೇ ಕಳೆದಿದ್ದೆವು. ನಾವು ಒಂದು ದಿನ ಮುಂಚಿತವಾಗಿ ಅಪಾಯದ ಪ್ರದೇಶಗಳನ್ನು ದಾಟಿದ್ದೇವು. ಕೇವಲ 12 ಗಂಟೆ ತಡವಾಗಿದ್ದರೂ ನಾವೂ ಪ್ರವಾಹಕ್ಕೆ ಕೊಚ್ಚಿಹೋಗಬಹುದಿತ್ತು' ಎಂದು ಅವರು ತಿಳಿಸಿದ್ದಾರೆ.

ಪ್ರವಾಹದ ನಡುವೆ ಸಿಲುಕಿಕೊಳ್ಳದೆ ಸುರಕ್ಷಿತವಾಗಿ ಹೊರಬಂದಿರುವುದು ಒಂದು ರೀತಿಯಲ್ಲಿ ಪುನರ್ಜನ್ಮದ ಅನುಭವದಂತಾಗಿದೆ ಎಂದು ಪ್ರವಾಸಿಗರು ಹೇಳಿದ್ದಾರೆ.

ಹಾವೇರಿಯವರು ಪಾರು, ಧಾರವಾಡದ ಟೆಕ್ಕಿ ನಾಪತ್ತೆ

ಹಾವೇರಿಯ 55 ಮಂದಿ ಸುರಕ್ಷಿತವಾಗಿರುವ ಸುದ್ದಿ ಕುಟುಂಬಗಳಿಗೆ ನೆಮ್ಮದಿ ತಂದಿದ್ದರೂ, ನೇಪಾಳ ಪ್ರವಾಹದಲ್ಲಿ ಮತ್ತೊಬ್ಬ ಕನ್ನಡಿಗ ನಾಪತ್ತೆಯಾಗಿರುವುದು ಆತಂಕ ಮೂಡಿಸಿದೆ.

ಧಾರವಾಡ ಮೂಲದ 45 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ರಾಕೇಶ್ ನಾಯಕ್ ಅವರು ಆಗಸ್ಟ್ 25ರಿಂದ ಕುಟುಂಬದ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ಉದ್ಯೋಗದಲ್ಲಿರುವ ರಾಕೇಶ್, ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳುತ್ತಿದ್ದ ಈಶಾ ಫೌಂಡೇಶನ್‌ನ 71 ಸದಸ್ಯರ ತಂಡದೊಂದಿಗೆ ಪ್ರಯಾಣಿಸುತ್ತಿದ್ದರು.

ನೇಪಾಳದ ಮೂಲಕ ತಂಡ ವಾಪಸ್ ಬರುತ್ತಿದ್ದ ವೇಳೆ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ್ದು, ರಾಕೇಶ್ ಸೇರಿದಂತೆ ಕೆಲವರೊಂದಿಗೆ ಸಂಪರ್ಕ ಕಡಿತಗೊಂಡಿದೆ ಎನ್ನಲಾಗಿದೆ. ರಾಕೇಶ್ ಸುರಕ್ಷಿತವಾಗಿದ್ದು ಶೀಘ್ರದಲ್ಲೇ ಕುಟುಂಬದವರನ್ನು ಸಂಪರ್ಕಿಸಲಿ ಎಂಬ ನಿರೀಕ್ಷೆಯಲ್ಲಿ ಕುಟುಂಬಸ್ಥರು ಕಾಯುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja