Dailyhunt Logo
  • Light mode
    Follow system
    Dark mode
    • Play Story
    • App Story
NEPAL: ನೇಪಾಳದಲ್ಲಿ ಭೀಕರ ಪ್ರವಾಹ.. ಐದು ತಿಂಗಳ ಹಿಂದೆಯೇ ಸಿಕ್ಕಿತ್ತು ಅಪಾಯದ ಮುನ್ಸೂಚನೆ!

NEPAL: ನೇಪಾಳದಲ್ಲಿ ಭೀಕರ ಪ್ರವಾಹ.. ಐದು ತಿಂಗಳ ಹಿಂದೆಯೇ ಸಿಕ್ಕಿತ್ತು ಅಪಾಯದ ಮುನ್ಸೂಚನೆ!

Navasamaja.com 3 weeks ago

ವದೆಹಲಿ: ಹಿಂದೂ ಕುಶ್ ಹಿಮಾಲಯ (HKH) ಪರ್ವತ ಶ್ರೇಣಿಗಳಲ್ಲಿನ ಹಿಮನದಿಗಳು (ಗ್ಲೇಸಿಯರ್‌ಗಳು) ದಿನದಿಂದ ದಿನಕ್ಕೆ ಅತ್ಯಂತ ವೇಗವಾಗಿ ಕರಗುತ್ತಿದ್ದು, ಜಾಗತಿಕ (Shocking) ತಾಪಮಾನ ಏರಿಕೆಯ ಭೀಕರ ಪರಿಣಾಮಗಳು ಈಗ ಕಣ್ಣೆದುರೇ ಗೋಚರಿಸತೊಡಗಿವೆ. ಇತ್ತೀಚೆಗೆ ನೇಪಾಳದಲ್ಲಿ (Nepal) 272ಕ್ಕೂ ಹೆಚ್ಚು ಜನರ ಪ್ರಾಣ ಬಲಿ ಪಡೆದ ಭೀಕರ ಪ್ರವಾಹಕ್ಕೆ (Floods) ಪರ್ವತ ಪ್ರದೇಶಗಳಲ್ಲಿ ಹಿಮಪಾತವಾಗುವ ಬದಲಿಗೆ ಮಳೆ ಸುರಿಯುತ್ತಿರುವುದೇ ಮುಖ್ಯ ಕಾರಣ ಎಂಬ ಆತಂಕಕಾರಿ ವಿಷಯವನ್ನು ವಿಜ್ಞಾನಿಗಳು ಹಾಗೂ ಸಂಶೋಧಕರು ಬಹಿರಂಗಪಡಿಸಿದ್ದಾರೆ.

ಅಲ್ಲದೇ, ಈ ವಿಚಾರವಾಗಿ 5 ತಿಂಗಳ ಹಿಂದೆಯೇ ಮುನ್ಸೂಚನೆ ಸಿಕ್ಕಿತ್ತು ಎನ್ನಲಾಗಿದೆ.

ಏನಿದೆ ಈ ಶಾಕಿಂಗ್‌ ವರದಿಯಲ್ಲಿ?

ಖಠ್ಮಂಡುವಿನಲ್ಲಿರುವ 'ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟೇನ್ ಡೆವಲಪ್‌ಮೆಂಟ್' (ಐಸಿಐಎಮ್‌ಒಡಿ) ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ, 2000ನೇ ಇಸವಿಯ ನಂತರ ಹಿಮಾಲಯದ ಹಿಮನದಿಗಳು ಕರಗುವ ವೇಗ ದುಪ್ಪಟ್ಟಾಗಿದೆ. 1975ರಿಂದೀಚೆಗೆ ಸುಮಾರು 27 ಮೀಟರ್‌ಗಳಷ್ಟು ದಪ್ಪದ ಹಿಮದ ಪದರ ಕರಗಿ ನೀರಾಗಿದೆ. 1990ರಿಂದ 2020ರ ನಡುವಿನ ಮೂರು ದಶಕಗಳಲ್ಲಿ ಎಚ್‌ಕೆಎಚ್ ಪ್ರದೇಶದ ಹಿಮನದಿಗಳು ತಮ್ಮ ಒಟ್ಟು ವಿಸ್ತೀರ್ಣದ ಶೇಕಡಾ 12ರಷ್ಟು ಭಾಗವನ್ನು ಮತ್ತು ಶೇಕಡಾ 9ರಷ್ಟು ಹಿಮದ ಸಂಗ್ರಹವನ್ನು ಕಳೆದುಕೊಂಡಿವೆ. ಈ ಕರಗುತ್ತಿರುವ ಹಿಮನದಿಗಳ ನೀರನ್ನೇ ನಂಬಿಕೊಂಡಿರುವ ದಕ್ಷಿಣ ಏಷ್ಯಾದ ಸುಮಾರು 200 ಕೋಟಿ ಜನರಿಗೆ ಮುಂಬರುವ ದಿನಗಳಲ್ಲಿ ತೀವ್ರ ಕುಡಿಯುವ ನೀರಿನ ಅಭಾವ ಹಾಗೂ ಹಠಾತ್ ಪ್ರವಾಹದ ಭೀತಿ ಎದುರಾಗಲಿದೆ.

ಇತ್ತೀಚೆಗೆ ನೇಪಾಳದಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಸಂಶೋಧನೆಗಳು ನಡೆಯುತ್ತಿವೆಯಾದರೂ, ಸುಮಾರು 4,000 ಮೀಟರ್ ಹಾಗೂ ಅದಕ್ಕಿಂತ ಹೆಚ್ಚಿನ ಎತ್ತರದ ಪ್ರದೇಶಗಳಲ್ಲಿ ಹಿಮ ಬೀಳುವ ಬದಲು ಮಳೆ ಸುರಿಯುತ್ತಿರುವುದು ಪ್ರಮುಖ ಕಾರಣ ಎಂದು ವಿಜ್ಞಾನಿಗಳು ಶಂಕಿಸಿದ್ದಾರೆ. ಡೆಹರಾಡೂನ್‌ನ ವಾಡಿಯಾ ಹಿಮಾಲಯನ್ ಜಿಯಾಲಜಿ ಸಂಸ್ಥೆಯ ವಿಜ್ಞಾನಿಗಳು ತಿಳಿಸಿರುವಂತೆ, ನಿರಂತರ ತಾಪಮಾನ ಏರಿಕೆಯಿಂದಾಗಿ ಎತ್ತರದ ಪರ್ವತಗಳಲ್ಲಿ ಮಳೆಯಾಗುತ್ತಿದೆ, ಇದರಿಂದ ಹಿಮದ ಹೊದಿಕೆ ಕಡಿಮೆಯಾಗಿ ಬಂಡೆಗಳು ಮತ್ತು ಬಂಜರು ಭೂಮಿ ಹೊರಗೆ ಕಾಣಿಸಿಕೊಳ್ಳುತ್ತಿದೆ. ಈ ಬಂಡೆಗಳು ಹೆಚ್ಚಿನ ಶಾಖವನ್ನು ಹೀರಿಕೊಳ್ಳುವುದರಿಂದ ಪರ್ವತಗಳ ಇಳಿಜಾರುಗಳು ಶಕ್ತಿ ಕಳೆದುಕೊಂಡು ಕುಸಿಯುತ್ತಿವೆ.

ನೇಪಾಳದ ಭೋಟೆ ಕೋಶಿ ನದಿಯ ಉಪನದಿಯಾದ ಲೆಂಡೆ ಖೋಲಾಗೆ ಅತಿ ಎತ್ತರದ ಪ್ರದೇಶದಿಂದ ಅಪಾರ ಪ್ರಮಾಣದ ಹಿಮ ಹಾಗೂ ಬಂಡೆಗಳ ಕುಸಿತ (ಐಸ್-ರಾಕ್ ಅವಲಾಂಚೆ) ಬಿದ್ದಿದ್ದರಿಂದ ಹಠಾತ್ ಪ್ರವಾಹ ಸೃಷ್ಟಿಯಾಗಿರಬಹುದು ಎಂದು ಐಸಿಐಎಮ್‌ಒಡಿ ಸಂಶೋಧಕರು ಅಂದಾಜಿಸಿದ್ದಾರೆ. ಧ್ರುವ ಪ್ರದೇಶಗಳನ್ನು ಹೊರತುಪಡಿಸಿದರೆ ಜಗತ್ತಿನಲ್ಲೇ ಅತಿ ಹೆಚ್ಚು ಹಿಮದ ಸಂಗ್ರಹವಿರುವುದು ಹಿಂದೂ ಕುಶ್ ಹಿಮಾಲಯದಲ್ಲೇ. ಇಲ್ಲಿ 63,700ಕ್ಕೂ ಹೆಚ್ಚು ಹಿಮನದಿಗಳಿದ್ದು, 55,000 ಚದರ ಕಿಲೋಮೀಟರ್‌ಗಿಂತಲೂ ಹೆಚ್ಚಿನ ಪ್ರದೇಶವನ್ನು ಆವರಿಸಿವೆ. ಇವು ಏಷ್ಯಾದ 10 ಪ್ರಮುಖ ನದಿಗಳ ಮೂಲವಾಗಿದ್ದು, ಕೋಟ್ಯಂತರ ಜನರ ಆಹಾರ, ನೀರು ಮತ್ತು ವಿದ್ಯುತ್ ಅಗತ್ಯಗಳನ್ನು ಪೂರೈಸುತ್ತಿವೆ.

ಪರಿಸರ ಸಮತೋಲನ ಏರುಪೇರಾಗುವ ಭೀತಿ

ಆದರೆ, 4,500ರಿಂದ 6,000 ಮೀಟರ್ ಎತ್ತರದಲ್ಲಿರುವ ಶೇಕಡಾ 78ರಷ್ಟು ಹಿಮನದಿ ಪ್ರದೇಶಗಳು ಎತ್ತರಾಧಾರಿತ ತಾಪಮಾನ ಏರಿಕೆಗೆ ತೀವ್ರವಾಗಿ ತುತ್ತಾಗುತ್ತಿವೆ. ವಿಶೇಷವಾಗಿ ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರ ನದಿ ಪಾತ್ರಗಳಲ್ಲಿ ಅತ್ಯಧಿಕ ಪ್ರಮಾಣದ ಹಿಮನದಿಗಳು ಕರಗುತ್ತಿದ್ದು, ಪರಿಸರ ಸಮತೋಲನ ಸಂಪೂರ್ಣವಾಗಿ ಏರುಪೇರಾಗುವ ಭೀತಿ ಎದುರಾಗಿದೆ. ತಕ್ಷಣವೇ ಜಾಗತಿಕ ಮಟ್ಟದಲ್ಲಿ ತಾಪಮಾನ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಹಿಮಾಲಯದ ತಪ್ಪಲಿನ ದೇಶಗಳು ಮತ್ತಷ್ಟು ಪ್ರಾಕೃತಿಕ ವಿಕೋಪಗಳನ್ನು ಎದುರಿಸಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja