ಪ್ರಸಿದ್ಧ ಒಟಿಟಿ ಹಾಗೂ ವೀಡಿಯೊ ಸ್ಟ್ರೀಮಿಂಗ್ ದೈತ್ಯ ನೆಟ್‌ಫ್ಲಿಕ್ಸ್ (Netflix) ಸೇವೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪ್ರಪಂಚದಾದ್ಯಂತ ಸಾವಿರಾರು ಬಳಕೆದಾರರು ತೊಂದರೆ ಎದುರಿಸಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಅಥವಾ ವೆಬ್ ಸರಣಿಗಳನ್ನು ವೀಕ್ಷಿಸಲು ಯತ್ನಿಸಿದಾಗ ಬಳಕೆದಾರರ ಪರದೆಯ ಮೇಲೆ ಎರೆರ್ ಮೆಸೇಜ್ ಕಾಣಿಸಿಕೊಂಡು ಸೇವೆ ಸ್ಥಗಿತಗೊಂಡಿತ್ತು.
ಸಾಮಾಜಿಕ ಜಾಲತಾಣಗಳು ಹಾಗೂ ವೆಬ್‌ಸೈಟ್‌ಗಳ ಸೇವಾ ವ್ಯತ್ಯಯಗಳನ್ನು ತನಿಖೆ ಮಾಡಿ ವರದಿ ಮಾಡುವ 'ಡೌನ್ ಡಿಟೆಕ್ಟರ್' ವೆಬ್‌ಸೈಟ್ ಪ್ರಕಾರ, ಅಮೆರಿಕದ ಕಾಲಮಾನ ಮಧ್ಯಾಹ್ನ 3:25 ರ ಸುಮಾರಿಗೆ ಏಕಾಏಕಿ ಸಾವಿರಾರು ಜನ ಗ್ರಾಹಕರು ನೆಟ್‌ಫ್ಲಿಕ್ಸ್ ಕೆಲಸ ಮಾಡುತ್ತಿಲ್ಲ ಎಂದು ದೂರು ದಾಖಲಿಸಲು ಪ್ರಾರಂಭಿಸಿದರು. ಅಮೆರಿಕ ಒಂದರಲ್ಲೇ ಸುಮಾರು 6,500ಕ್ಕೂ ಹೆಚ್ಚು ಬಳಕೆದಾರರು ಈ ಸಮಸ್ಯೆಯ ಬಗ್ಗೆ ವರದಿ ಮಾಡಿದ್ದು, ಒಟ್ಟಾರೆಯಾಗಿ 7,000ಕ್ಕೆ ಸಮೀಪಿಸಿದಷ್ಟು ಬಳಕೆದಾರರು ದೂರು ಸಲ್ಲಿಕೆ ಮಾಡಿದ್ದರು. ದೂರು ನೀಡಿದ ಒಟ್ಟು ಬಳಕೆದಾರರ ಪೈಕಿ ಶೇಕಡಾ 43 ರಷ್ಟು ಜನರು ನೆಟ್‌ಫ್ಲಿಕ್ಸ್‌ನಲ್ಲಿ ವೀಡಿಯೊ ಸ್ಟ್ರೀಮಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರೆ, ಶೇಕಡಾ 30 ರಷ್ಟು ಗ್ರಾಹಕರು ನೆಟ್‌ಫ್ಲಿಕ್ಸ್ ಮೊಬೈಲ್ ಹಾಗೂ ಟಿವಿ ಆಯಪ್ ತೆರೆಯಲು ತೊಂದರೆ ಅನುಭವಿಸುತ್ತಿರುವುದಾಗಿ ಹೇಳಿದರು. ಉಳಿದಂತೆ ಶೇಕಡಾ 26 ರಷ್ಟು ಬಳಕೆದಾರರಿಗೆ ಸರ್ವರ್ ಸಂಪರ್ಕ ಸಾಧಿಸಲು ಸಾಧ್ಯವಾಗದೆ ತಾಂತ್ರಿಕ ತೊಡಕು ಎದುರಾಗಿತ್ತು. ಈ ಸರ್ವರ್ ಸಮಸ್ಯೆಯು ಕೇವಲ ಅಮೆರಿಕಕ್ಕೆ ಮಾತ್ರ ಸೀಮಿತವಾಗಿರದೆ, ಕೆನಡಾ, ಯುನೈಟೆಡ್ ಕಿಂಗ್‌ಡಮ್ (ಯುಕೆ) ಸೇರಿದಂತೆ ಪ್ರಪಂಚದ ಹಲವಾರು ಪ್ರಮುಖ ದೇಶಗಳ ವೀಕ್ಷಕರ ಮೇಲೆಯೂ ಪರಿಣಾಮ ಬೀರಿತು. ನೆಟ್‌ಫ್ಲಿಕ್ಸ್ ಪ್ರಸ್ತುತ ಜಾಗತಿಕವಾಗಿ ಸುಮಾರು 35 ಕೋಟಿ (350 ಮಿಲಿಯನ್) ಪಾವತಿಸಿದ ಚಂದಾದಾರರನ್ನು ಹೊಂದಿದ್ದು, ಈ ಪೈಕಿ 6.7 ಕೋಟಿಯಿಂದ 8.8 ಕೋಟಿಯಷ್ಟು ಸಕ್ರಿಯ ಬಳಕೆದಾರರು ಅಮೆರಿಕದಲ್ಲೇ ಇದ್ದಾರೆ. ವಿಶ್ವಾದ್ಯಂತ ವ್ಯಾಪಕವಾಗಿ ಈ ತಾಂತ್ರಿಕ ವ್ಯತ್ಯಯ ಉಂಟಾಗಿದ್ದರೂ ಸಹ, ಇದು ಸುದೀರ್ಘ ಸಮಯ ಮುಂದುವರಿಯಲಿಲ್ಲ. ತೊಂದರೆ ವರದಿಯಾದ ಕೇವಲ 40 ರಿಂದ 45 ನಿಮಿಷಗಳಲ್ಲಿ, ಅಂದರೆ ಮಧ್ಯಾಹ್ನ 4:30 ರ ಸುಮಾರಿಗೆ ನೆಟ್‌ಫ್ಲಿಕ್ಸ್ ತನ್ನ ಸರ್ವರ್‌ಗಳ ಸಮಸ್ಯೆಯನ್ನು ಯಶಸ್ವಿಯಾಗಿ ಸರಿಪಡಿಸಿತು. ತದನಂತರ ಬಹುತೇಕ ಎಲ್ಲಾ ಬಳಕೆದಾರರಿಗೆ ಎಂದಿನಂತೆ ಸುಲಭವಾಗಿ ಸ್ಟ್ರೀಮಿಂಗ್ ಸೇವೆಗಳು ಲಭ್ಯವಾದವು.

