ಬಳ್ಳಾರಿ: ದೇಶದ ಭದ್ರತೆಗೆ ಧಕ್ಕೆ ತರಲು ಉಗ್ರ ಸಂಘಟನೆಗಳು ರೂಪಿಸಿದ್ದ ಬೃಹತ್ ಸಂಚನ್ನು ಭೇದಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಅಖಾಡಕ್ಕಿಳಿದಿದ್ದಾರೆ. ಕರ್ನಾಟಕ(Karnataka) ಸೇರಿದಂತೆ ದೇಶಾದ್ಯಂತ ವಿವಿಧೆಡೆ ಬುಧವಾರ ಮುಂಜಾನೆಯೇ ಎನ್‌ಐಎ(NIA) ಅಧಿಕಾರಿಗಳ ತಂಡಗಳು ಮಹತ್ವದ ಜಂಟಿ ಕಾರ್ಯಾಚರಣೆ ಹಾಗೂ ಸರಣಿ ದಾಳಿಗಳನ್ನು ನಡೆಸಿವೆ.
ಕರ್ನಾಟಕದ ಗಣಿ ನಾಡು ಬಳ್ಳಾರಿಯಲ್ಲೂ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿ, ತೀವ್ರ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ದೇಶದ ಪ್ರಮುಖ ನಗರಗಳು ಮತ್ತು ಆಯಕಟ್ಟಿನ ಪ್ರವಾಸಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಭೀಕರ ವಿಧ್ವಂಸಕ ಕೃತ್ಯಗಳನ್ನು ಎಸಗಲು ಹಾಗೂ ಜನರಲ್ಲಿ ಆತಂಕ ಮೂಡಿಸಲು ಅಂತರರಾಷ್ಟ್ರೀಯ ಉಗ್ರ ಸಂಘಟನೆಗಳ ಬೆಂಬಲದೊಂದಿಗೆ ಸಂಚು ರೂಪಿಸಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ದೇಶವಿರೋಧಿ ನೆಟ್‌ವರ್ಕ್ ಬೆನ್ನತ್ತಿರುವ ಎನ್‌ಐಎ ಅಧಿಕಾರಿಗಳು, ದೇಶದ ಹಲವು ರಾಜ್ಯಗಳ ವಿವಿಧ ಆಯ್ದ ಸ್ಥಳಗಳಲ್ಲಿ ಏಕಕಾಲಕ್ಕೆ ಲಗ್ಗೆ ಇಟ್ಟು ಉಗ್ರ ಲಿಂಕ್‌ಗಳ ಪತ್ತೆಗೆ ಮುಂದಾಗಿದ್ದಾರೆ. ಬಳ್ಳಾರಿಯ ಕೌಲ್ ಬಜಾರ್‌ನಲ್ಲಿ ಎನ್‌ಐಎ ತಲಾಷ್! ಹೈದರಾಬಾದ್ ಲಿಂಕ್ ಆಧರಿಸಿ ದಾಳಿ
ಬಳ್ಳಾರಿ ನಗರದ ಕೌಲ್ ಬಜಾರ್ ನಿವಾಸಿಯಾದ ಅಬ್ದುಲ್ ನಜೀರ್ ಎಂಬಾತನ ಮನೆಗೆ ಮುಂಜಾನೆಯೇ ಅಧಿಕಾರಿಗಳ ತಂಡ ಲಗ್ಗೆ ಇಟ್ಟಿದೆ. ಸ್ಥಳೀಯ ಪೊಲೀಸರ ಬಿಗಿ ಭದ್ರತೆಯೊಂದಿಗೆ ಅಬ್ದುಲ್ ನಜೀರ್ ಮನೆಗೆ ಪ್ರವೇಶಿಸಿರುವ ಎನ್‌ಐಎ ತಂಡ, ಮನೆಯ ಪ್ರತಿಯೊಂದು ಕೋಣೆಯನ್ನು ಜಾಲಾಡುತ್ತಿದೆ. ದೇಶವಿರೋಧಿ ಕೃತ್ಯಕ್ಕೆ ಸಂಬಂಧಿಸಿದ ಡಿಜಿಟಲ್ ಪುರಾವೆಗಳು (ಮೊಬೈಲ್, ಲ್ಯಾಪ್‌ಟಾಪ್), ಬ್ಯಾಂಕ್ ಖಾತೆಗಳ ವಿವರ ಮತ್ತು ಸಂಶಯಾಸ್ಪದ ದಾಖಲೆಗಳಿಗಾಗಿ ತೀವ್ರ ತಲಾಷ್ ನಡೆಸಲಾಗುತ್ತಿದೆ.
ವಿಶ್ವಾಸಾರ್ಹ ಮೂಲಗಳ ಪ್ರಕಾರ, ಈ ಹಿಂದೆ ನೆರೆರಾಜ್ಯ ತೆಲಂಗಾಣದ ಹೈದರಾಬಾದ್‌ನಲ್ಲಿ ಅಬ್ದುಲ್ ನಜೀರ್ ವಿರುದ್ಧ ವಿಧ್ವಂಸಕ ಕೃತ್ಯಗಳ ಸಂಚು ಹಾಗೂ ದೇಶವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಗಂಭೀರ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಈ ಹಳೇ ಪ್ರಕರಣದ ಪ್ರಮುಖ ಲಿಂಕ್ ಹಾಗೂ ಸಾಕ್ಷ್ಯಗಳನ್ನು ಆಧರಿಸಿಯೇ ಎನ್‌ಐಎ ಅಧಿಕಾರಿಗಳು ಬಳ್ಳಾರಿಯ ಆತನ ಪ್ರಸ್ತುತ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಹೈದರಾಬಾದ್ ಹಾಗೂ ಬಳ್ಳಾರಿಯ ನಡುವೆ ಸಕ್ರಿಯವಾಗಿದ್ದ ದೇಶವಿರೋಧಿ ಶಕ್ತಿಗಳ ಸಂಪರ್ಕದ ನೆಟ್‌ವರ್ಕ್ ಮುರಿಯಲು ಈ ಕಾರ್ಯಾಚರಣೆ ಅತ್ಯಂತ ಪ್ರಮುಖವಾಗಿದೆ ಎನ್ನಲಾಗಿದೆ.

