Dailyhunt Logo
  • Light mode
    Follow system
    Dark mode
    • Play Story
    • App Story
NITIN GADKARI: ದುರ್ಬಲಗೊಂಡಿವೆ ದೇಶದ 471 ಸೇತುವೆಗಳು..! ಮಾಹಿತಿ ಬಿಚ್ಚಿಟ್ಟ ನಿತಿನ್‌ ಗಡ್ಕರಿ

NITIN GADKARI: ದುರ್ಬಲಗೊಂಡಿವೆ ದೇಶದ 471 ಸೇತುವೆಗಳು..! ಮಾಹಿತಿ ಬಿಚ್ಚಿಟ್ಟ ನಿತಿನ್‌ ಗಡ್ಕರಿ

Navasamaja.com 1 week ago

ವದೆಹಲಿ: ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Highway) ಒಟ್ಟು 471 ಸೇತುವೆಗಳು ದುರ್ಬಲವಾಗಿರುವುದು ಪತ್ತೆಯಾಗಿದ್ದು, ಈ ಪೈಕಿ 159 ಸೇತುವೆಗಳ ದುರಸ್ತಿ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಬಾಕಿ ಉಳಿದಿರುವ 312 ಸೇತುವೆಗಳ ರಿಪೇರಿ ಕಾರ್ಯವನ್ನು ಡಿಸೆಂಬರ್ 2028ರೊಳಗೆ ಮುಗಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಸರ್ಕಾರ (Central Government) ಬುಧವಾರ ಸಂಸತ್ತಿಗೆ ಮಾಹಿತಿ ನೀಡಿದೆ.

ರಾಷ್ಟ್ರೀಯ ಹೆದ್ದಾರಿ ಜಾಲದಲ್ಲಿನ ಸೇತುವೆಗಳ ಸುರಕ್ಷತಾ ಲೆಕ್ಕಪರಿಶೋಧನೆ ಕುರಿತು ರಾಜ್ಯಸಭೆ ಸದಸ್ಯ ವಿ.ಶಿವದಾಸನ್ ಅವರು ಕೇಳಿದ ಪ್ರಶ್ನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಲಿಖಿತ ಉತ್ತರದಲ್ಲಿ ಈ ಅಂಕಿ-ಅಂಶಗಳನ್ನು ಹಂಚಿಕೊಂಡಿದ್ದಾರೆ.

ಇಲಾಖೆ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದೆ

ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಎಲ್ಲ ಸೇತುವೆಗಳು, ಮೇಲ್ಸೇತುವೆಗಳು ಹಾಗೂ ಫ್ಲೈಓವರ್‌ಗಳಲ್ಲಿನ ಯಾವುದೇ ದೋಷಗಳನ್ನು ಆರಂಭದಲ್ಲೇ ಪತ್ತೆಹಚ್ಚಲು ಸಂಬಂಧಪಟ್ಟ ಇಲಾಖೆಗಳು ಕಾಲಕಾಲಕ್ಕೆ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿವೆ ಎಂದು ಸಚಿವ ಗಡ್ಕರಿ ತಿಳಿಸಿದರು. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), ರಾಜ್ಯ ಲೋಕೋಪಯೋಗಿ ಇಲಾಖೆಗಳು (PWD), ರಾಷ್ಟ್ರೀಯ ಹೆದ್ದಾರಿ ಮೂಲಸೌಕರ್ಯ ಅಭಿವೃದ್ಧಿ ನಿಗಮ (NHIDCL) ಮತ್ತು ಗಡಿ ರಸ್ತೆಗಳ ಸಂಸ್ಥೆ (BRO) ನೇತೃತ್ವದಲ್ಲಿ ಈ ತಪಾಸಣಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ ಎಂದು ಅವರು ವಿವರಿಸಿದರು.

ತಂತ್ರಾಂಶವನ್ನು ಅಭಿವೃದ್ಧಿಪಡಿಸಲು ಸಜ್ಜಾದ ಕೇಂದ್ರ

ಇತ್ತೀಚಿನ ವರ್ಷಗಳಲ್ಲಿ ದೇಶದ ಹಲವೆಡೆ ಸೇತುವೆಗಳು ಕುಸಿಯುತ್ತಿರುವ ಹಿನ್ನೆಲೆಯಲ್ಲಿ, ಸೇತುವೆಗಳ ಸುರಕ್ಷತೆಯ ದತ್ತಾಂಶವನ್ನು ಕೇಂದ್ರೀಕರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಸೇತುವೆಗಳ ನೈಜ-ಸಮಯದ (real-time) ಸೇತುವೆ ಹಾಗೂ ರಸ್ತೆಗಳ ಮೇಲೆ ನಿಗಾ ಇಡುವ ತಂತ್ರಾಂಶವನ್ನು ಅಭಿವೃದ್ಧಿಪಡಿಸಲು ರಸ್ತೆ ಸಾರಿಗೆ ಸಚಿವಾಲಯವು ಮದ್ರಾಸ್ ಐಐಟಿ (IIT Madras) ಮತ್ತು ಸಿ-ಡ್ಯಾಕ್ (C-DAC) ಸಂಸ್ಥೆಗಳ ಜೊತೆ ಕೈಜೋಡಿಸಿದೆ. ಅಲ್ಲದೆ, ನಿರಂತರ ಮೇಲ್ವಿಚಾರಣೆ ಹಾಗೂ ವೈಜ್ಞಾನಿಕ ನಿರ್ವಹಣೆಗಾಗಿ ಸೆಪ್ಟೆಂಬರ್ 30ರೊಳಗೆ 'ಇಂಡಿಯನ್ ಬ್ರಿಡ್ಜ್ ಮ್ಯಾನೇಜ್ಮೆಂಟ್ ಸಿಸ್ಟಮ್' (IBMS) ಅಡಿಯಲ್ಲಿ ದೇಶಾದ್ಯಂತ ಇರುವ ಸೇತುವೆಗಳ ಡಿಜಿಟಲ್ ದಾಖಲೆ ಮತ್ತು ಸ್ಥಿತಿಗತಿ ಸಮೀಕ್ಷೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ಎಲ್ಲಾ ರಸ್ತೆ ನಿರ್ವಹಣಾ ಏಜೆನ್ಸಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja