ನವದೆಹಲಿ: 2027ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಣೆಯಾಗಲಿರುವ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ (Padma Awards) ನಾಮನಿರ್ದೇಶನ ಮತ್ತು ಶಿಫಾರಸು ಪ್ರಕ್ರಿಯೆಯು ಈಗಾಗಲೇ 2026ರ ಮಾರ್ಚ್ 15 ರಿಂದಲೇ ಪ್ರಾರಂಭವಾಗಿದೆ. ಈ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಿಗೆ ಹೆಸರುಗಳನ್ನು ನಾಮನಿರ್ದೇಶನ ಮಾಡಲು 2026ರ ಜುಲೈ 31 ಕೊನೆಯ ದಿನವಾಗಿದೆ ಎಂದು ಪಿಐಬಿ ಸಂಸ್ಥೆ ಮಾಹಿತಿ ನೀಡಿದೆ.
ನಾಮನಿರ್ದೇಶನ ಮಾಡುವುದು ಹೇಗೆ? ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳ ಸಾಲಿಗೆ ಸೇರುವ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು 1954 ರಲ್ಲಿ ಸ್ಥಾಪಿಸಲಾಯಿತು. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಗಣರಾಜ್ಯೋತ್ಸವದ ಮುನ್ನಾದಿನದಂದು ಈ ಪ್ರಶಸ್ತಿಗಳನ್ನು ಪ್ರಕಟಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ.
ಈ ಪ್ರಶಸ್ತಿಗಳಿಗೆ ಸಂಬಂಧಿಸಿದ ಎಲ್ಲಾ ನಾಮನಿರ್ದೇಶನ ಮತ್ತು ಶಿಫಾರಸುಗಳನ್ನು ಕೇವಲ ಆನ್‌ಲೈನ್ ಮೂಲಕ ಮಾತ್ರ ಸ್ವೀಕರಿಸಲಾಗುವುದು. ಆಸಕ್ತರು ಕೇಂದ್ರ ಸರ್ಕಾರದ ಅಧಿಕೃತ 'ರಾಷ್ಟ್ರೀಯ ಪುರಸ್ಕಾರ ಪೋರ್ಟಲ್' ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಪ್ರಸ್ತಾವನೆಗಳನ್ನು ಸಲ್ಲಿಸಬಹುದಾಗಿದೆ.
ಅಸಾಧಾರಣ ಸಾಧನೆ ಮಾಡಿದವರಿಗೆ ಪ್ರಶಸ್ತಿ
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಮತ್ತು ವಿಶಿಷ್ಟ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಈ ಗೌರವವನ್ನು ನೀಡಲಾಗುತ್ತದೆ. ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರಿಕ ಸೇವೆ ಹಾಗೂ ವ್ಯಾಪಾರ ಮತ್ತು ಕೈಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರಗಳ ಸಾಧಕರು ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ. ಜಾತಿ, ಧರ್ಮ, ಉದ್ಯೋಗ, ಹುದ್ದೆ ಅಥವಾ ಲಿಂಗ ಭೇದವಿಲ್ಲದೆ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಈ ಪ್ರಶಸ್ತಿ ಪಡೆಯುವ ಮುಕ್ತ ಅವಕಾಶವಿದೆ. ಆದರೆ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ (ಪಿಎಸ್‌ಯು) ಕೆಲಸ ಮಾಡುವವರು ಸೇರಿದಂತೆ ಎಲ್ಲಾ ಸರ್ಕಾರಿ ನೌಕರರಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದಿಲ್ಲ. ಆದರೆ ಸಾರ್ವಜನಿಕ ಸೇವೆಯಲ್ಲಿರುವ ವೈದ್ಯರು ಮತ್ತು ವಿಜ್ಞಾನಿಗಳಿಗೆ ಮಾತ್ರ ಈ ನಿಯಮದಿಂದ ವಿನಾಯಿತಿ ನೀಡಲಾಗಿದ್ದು, ಅವರು ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ.

