Dailyhunt Logo
  • Light mode
    Follow system
    Dark mode
    • Play Story
    • App Story
PAHALGAM ATTACK: ಪಹಲ್ಗಾಮ್​​​​ನಲ್ಲಿ ನಡೆದ ಉಗ್ರರ ದಾಳಿಯ ಮತ್ತೊಂದು ಆಘಾತಕಾರಿ ಅಂಶ ಬಯಲು!

PAHALGAM ATTACK: ಪಹಲ್ಗಾಮ್​​​​ನಲ್ಲಿ ನಡೆದ ಉಗ್ರರ ದಾಳಿಯ ಮತ್ತೊಂದು ಆಘಾತಕಾರಿ ಅಂಶ ಬಯಲು!

Navasamaja.com 1 week ago

ವದೆಹಲಿ: ಕಳೆದ ವರ್ಷ ಅಮಾಯಕರನ್ನು ಬಲಿಪಡೆದ ಪಹಲ್ಗಾಮ್ (Pahalgam Attack) ಉಗ್ರರ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಯಲ್ಲಿ ಹತ್ತಾರು ಆಘಾತಕಾರಿ ಸಂಗತಿಗಳು ಬಹಿರಂಗವಾಗಿವೆ.

ಕೇವಲ 3,000 ರೂಪಾಯಿ ಹಣದ ಆಸೆಗಾಗಿ ಸ್ಥಳೀಯರು ಉಗ್ರರಿಗೆ ಹೇಗೆ ರಕ್ಷಣೆ ನೀಡಿದರು, ಅವರಿಗೆ ಆಹಾರ ಮತ್ತು ಶಸ್ತ್ರಾಸ್ತ್ರಗಳನ್ನು ತರಲು ಹೇಗೆ ಸಹಾಯ ಮಾಡಿದರು ಹಾಗೂ ಭದ್ರತಾ ಪಡೆಗಳ ಸೂಕ್ಷ್ಮ ವಿವರಗಳನ್ನು ಹೇಗೆ ತಲುಪಿಸಿದರು ಎಂಬ ಭೀಕರ ರಹಸ್ಯಗಳನ್ನು ಎನ್‌ಐಎ ಪತ್ತೆಹಚ್ಚಿದೆ. ಬರೋಬ್ಬರಿ 26 ಜನರನ್ನು ಕೊಲ್ಲುವ ಮುನ್ನ ಭಯೋತ್ಪಾದಕರು ಸ್ಥಳೀಯ ದೇಶದ್ರೋಹಿಗಳ ನೆರವಿನೊಂದಿಗೆ ಎಲ್ಲೆಲ್ಲಿ ಅಡಗಿಕೊಂಡಿದ್ದರು ಎಂಬ ಸಂಪೂರ್ಣ ಚಿತ್ರಣ ಇಲಾಖೆಗೆ ಲಭ್ಯವಾಗಿದೆ.

ಅಲ್ಲಾಹನ ಹೆಸರಿನಲ್ಲಿ ಬೇಡಿಕೆ ಇಟ್ಟಿದ್ದ ಉಗ್ರರು
ಎನ್‌ಐಎ ತನಿಖೆಯ ಪ್ರಕಾರ, ದಾಳಿಗೂ ಮುನ್ನ ಉಗ್ರರಿಗೆ ಆಶ್ರಯ ನೀಡಿದ್ದ ಪ್ರಮುಖ ಆರೋಪಿ ಬಶೀರ್ ಅಹ್ಮದ್ ಜೋತತಾದ್, ಘಟನೆ ನಡೆದ ದಿನ ಸಂಜೆ ಹಿಲ್ ಪಾರ್ಕ್ ಬಳಿಯ ಅರಣ್ಯ ಪ್ರದೇಶದಲ್ಲಿ ತನ್ನ ಕುದುರೆಗಳನ್ನು ನೋಡಲು ಹೋಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಆ ಸಮಯದಲ್ಲಿ ಮರಗಳ ಮರೆಯಿಂದ ಆಯುಧಧಾರಿಗಳಾದ ಮೂವರು ಶಸ್ತ್ರಸಜ್ಜಿತ ವ್ಯಕ್ತಿಗಳು ಹೊರಬಂದಿದ್ದು, ಅವರು ಪಂಜಾಬಿ ಮಿಶ್ರಿತ ಉರ್ದು ಭಾಷೆಯಲ್ಲಿ ಮಾತನಾಡುತ್ತಿದ್ದರು. ಅಲ್ಲಾಹನ ಹೆಸರಿನಲ್ಲಿ ತಮಗೆ ಸುರಕ್ಷಿತವಾಗಿ ತಂಗಲು ಒಂದು ಜಾಗ ಮತ್ತು ತಿನ್ನಲು ಆಹಾರ ನೀಡುವಂತೆ ಬಶೀರ್ ಮುಂದೆ ಅವರು ಬೇಡಿಕೆ ಇಟ್ಟಿದ್ದರು. ಅವರು ಲಷ್ಕರ್-ಎ-ತೈಬಾ ಮತ್ತು ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಸಂಘಟನೆಯ ಭಯೋತ್ಪಾದಕರು ಎಂದು ತಕ್ಷಣವೇ ಅರಿವಾಗಿದ್ದರೂ ಸಹ, ಬಶೀರ್ ಅವರನ್ನು ಹಿಲ್ ಪಾರ್ಕ್‌ನಲ್ಲಿರುವ ತನ್ನ ಸೋದರಳಿಯ ಪರ್ವೇಜ್ ಅಹ್ಮದ್‌ನ ತಾತ್ಕಾಲಿಕ ಅಡಗುತಾಣಕ್ಕೆ ಕರೆದೊಯ್ದಿದ್ದ. ಅಷ್ಟೇ ಅಲ್ಲದೆ, ಯಾರಿಗೆ ಅನುಮಾನ ಬಾರದಂತೆ ತಾನೇ ಮೊದಲು ಆ ಅಡಗುತಾಣ ಪ್ರವೇಶಿಸಿ ಉಗ್ರರಿಗೆ ಕೈಸನ್ನೆಯ ಮೂಲಕ ಒಳಗೆ ಬರಲು ಗ್ರೀನ್ ಸಿಗ್ನಲ್ ನೀಡಿದ್ದ ಎಂಬುದು ತನಿಖೆಯಲ್ಲಿ ಸಾಬೀತಾಗಿದೆ.

ಆರೋಪಿ ಪರ್ವೇಜ್ ಅಹ್ಮದ್‌ನ ಅಡಗುತಾಣದಲ್ಲಿ ಆತನ ಪತ್ನಿ ತಾಹಿರಾ ಮತ್ತು ಸಣ್ಣ ಮಗು ಕೂಡ ಇದ್ದರು. ಉಗ್ರರು ಒಳಗೆ ಬರುತ್ತಿದ್ದಂತೆ ಪರ್ವೇಜ್ ಅವರಿಗೆ ನೀರು ಮತ್ತು ಚಹಾ ನೀಡಿ ಆತಿಥ್ಯ ವಹಿಸಿದ್ದ. ಶಸ್ತ್ರಸಜ್ಜಿತ ಉಗ್ರರು ತಂದಿದ್ದ ಭಾರಿ ಪ್ರಮಾಣದ ಮದ್ದುಗುಂಡುಗಳು ಹಾಗೂ ಚೀಲಗಳನ್ನು ಅಲ್ಲಿನ ಕಂಬಳಿಗಳ ಅಡಿಯಲ್ಲಿ ಮರೆಮಾಡಲು ಸೂಚಿಸಿದ್ದು, ಆರೋಪಿಗಳು ಅದರಂತೆಯೇ ಸಹಾಯ ಮಾಡಿದ್ದರು. ನಂತರ ಉಗ್ರರಿಗಾಗಿ ಅನ್ನ ಮತ್ತು ಟೊಮೆಟೊ ಸಾರು ತಯಾರಿಸಿ ಊಟ ಹಾಕಲಾಗಿತ್ತು. ಅವರ ಮುಂದಿನ ಪ್ರಯಾಣಕ್ಕಾಗಿ ರೊಟ್ಟಿಗಳನ್ನು ಕೂಡ ತಯಾರು ಮಾಡಿ ಪ್ಯಾಕ್ ಮಾಡಿಕೊಡಲಾಗಿತ್ತು. ಇದರೊಂದಿಗೆ ದಾರಿಯಲ್ಲಿ ಬಳಸಲು ಅಗತ್ಯವಿದ್ದ ಪಾತ್ರೆಗಳು, ಎರಡು ಕಂಬಳಿಗಳು ಮತ್ತು ಪ್ಲಾಸ್ಟಿಕ್ ಟಾರ್ಪಾಲಿನ್ ಅನ್ನು ಕೂಡ ಬಶೀರ್ ಮತ್ತು ಪರ್ವೇಜ್ ಒದಗಿಸಿದ್ದರು.

3 ಸಾವಿರದ ಆಸೆಗೆ ಉಗ್ರರಿಗೆ ಮಾಹಿತಿ
ಭಯೋತ್ಪಾದಕರು ಅಡಗುತಾಣದಲ್ಲಿ ಕುಳಿತು ಜಿಹಾದ್ ಬಗ್ಗೆ ಮಾತನಾಡುತ್ತಾ, ಈ ಪ್ರಕರಣದ ಪ್ರಮುಖ ಸೂತ್ರಧಾರಿಯಾದ ಲಷ್ಕರ್ ಕಮಾಂಡರ್ ಅಲಿ ಭಾಯಿ ಹೆಸರನ್ನು ಪದೇ ಪದೇ ಪ್ರಸ್ತಾಪಿಸುತ್ತಿದ್ದರು. ಈ ವೇಳೆ ಆರೋಪಿಗಳು ಉಗ್ರರೊಂದಿಗೆ ಅಮರನಾಥ ಯಾತ್ರೆಯ ಮಾರ್ಗಗಳು, ಹತ್ತಿರದಲ್ಲೇ ಇರುವ ಭಾರತೀಯ ಭದ್ರತಾ ಪಡೆಗಳ ಶಿಬಿರಗಳು ಮತ್ತು ಸ್ಥಳೀಯ ಭೌಗೋಳಿಕ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದರು. ರಾತ್ರಿ 10 ಗಂಟೆಯ ಸುಮಾರಿಗೆ ಅಲ್ಲಿಂದ ಹೊರಡುವ ಮುನ್ನ ಉಗ್ರರು ಪರ್ವೇಜ್‌ಗೆ ಕೇವಲ 3,000 ರೂಪಾಯಿ ಹಣವನ್ನು ಕೈಗಿಟ್ಟಿದ್ದರು. ಕೇವಲ ಮೂರು ಸಾವಿರ ರೂಪಾಯಿ ಮತ್ತು ಧಾರ್ಮಿಕ ಭಾವನೆಗಳ ಹೆಸರಿನಲ್ಲಿ ಸ್ಥಳೀಯರು ನಡೆಸಿದ ಈ ದೇಶದ್ರೋಹದ ಕೃತ್ಯವೇ ಮುಂದೆ ಪಹಲ್ಗಾಮ್‌ನಲ್ಲಿ 26 ಅಮಾಯಕರ ಭೀಕರ ನರಮೇಧಕ್ಕೆ ಕಾರಣವಾಯಿತು ಎಂಬುದನ್ನು ಎನ್‌ಐಎ ತನ್ನ ಚಾರ್ಜ್‌ಶೀಟ್‌ನಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja