Dailyhunt Logo
  • Light mode
    Follow system
    Dark mode
    • Play Story
    • App Story
PAKISTAN: ಅಮೆರಿಕ , ಇರಾನ್‌ ಇಬ್ರೂ ನಮ್ಮ ದೇಶಕ್ಕೆ ಬಂದು ಮಾತುಕತೆ ಮಾಡಿ - ಪಾಕಿಸ್ತಾನ ಆಹ್ವಾನ

PAKISTAN: ಅಮೆರಿಕ , ಇರಾನ್‌ ಇಬ್ರೂ ನಮ್ಮ ದೇಶಕ್ಕೆ ಬಂದು ಮಾತುಕತೆ ಮಾಡಿ - ಪಾಕಿಸ್ತಾನ ಆಹ್ವಾನ

Navasamaja.com 1 month ago

ಸ್ಲಾಮಾಬಾದ್: ವಿಶ್ವದಾದ್ಯಂತ ತಲ್ಲಣ ಮೂಡಿಸಿದ್ದ ಅಮೆರಿಕ (America) ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಗೆ (Iran War) ಈಗ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಉಭಯ ದೇಶಗಳು ಮುಂದಿನ 15 ದಿನಗಳ ಕಾಲ ಯುದ್ಧವನ್ನು ನಿಲ್ಲಿಸಲು ಒಪ್ಪಿಕೊಂಡಿದ್ದು (Ceasefire), ಇದು ಜಾಗತಿಕ ಮಟ್ಟದಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದೆ.

ಈ ಸಂಘರ್ಷದ ನಡುವೆ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನದ (Pakistan) ಪ್ರಧಾನಿ ಶೆಹಬಾಜ್ ಷರೀಫ್, ಬರುವ ಶುಕ್ರವಾರ ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆಯಲ್ಲಿ ಭಾಗವಹಿಸುವಂತೆ ಅಮೆರಿಕ ಮತ್ತು ಇರಾನ್ ದೇಶಗಳಿಗೆ ಆಹ್ವಾನ ನೀಡಿದ್ದಾರೆ.

ಈ ಮಹತ್ವದ ಬೆಳವಣಿಗೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಶೆಹಬಾಜ್ ಷರೀಫ್, ಅಮೆರಿಕ, ಇರಾನ್ ಮತ್ತು ಅವುಗಳ ಮಿತ್ರಪಕ್ಷಗಳು ತಕ್ಷಣದಿಂದ ಜಾರಿಗೆ ಬರುವಂತೆ ಯುದ್ಧವನ್ನು ಸ್ಥಗಿತಗೊಳಿಸಲು ಒಪ್ಪಿಕೊಂಡಿವೆ ಎಂದು ತಿಳಿಸಿದ್ದಾರೆ. ಲೆಬನಾನ್ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಈ ಕದನ ವಿರಾಮ ಅನ್ವಯವಾಗಲಿದೆ. ಶಾಂತಿಯ ಹಾದಿಯಲ್ಲಿ ಈ ಎರಡೂ ದೇಶಗಳು ತೋರಿರುವ ಬುದ್ಧಿವಂತಿಕೆ ಮತ್ತು ಸಹಕಾರವನ್ನು ಅವರು ಶ್ಲಾಘಿಸಿದ್ದಾರೆ. ಶುಕ್ರವಾರ ನಡೆಯಲಿರುವ 'ಇಸ್ಲಾಮಾಬಾದ್ ಮಾತುಕತೆ' ಮೂಲಕ ದೀರ್ಘಕಾಲದ ಶಾಂತಿ ನೆಲೆಸಲಿ ಎಂಬುದು ಪಾಕಿಸ್ತಾನದ ಆಶಯವಾಗಿದೆ.

ಇತ್ತ ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ಕೂಡ ಎರಡು ವಾರಗಳ ಕಾಲ ಕದನ ವಿರಾಮಕ್ಕೆ ಸಮ್ಮತಿಸಿದೆ. ಆದರೆ ಇದು ಯುದ್ಧದ ಅಂತ್ಯವಲ್ಲ ಎಂದು ಇರಾನ್ ಎಚ್ಚರಿಸಿದೆ. ನಮ್ಮ ಕೈಗಳು ಇನ್ನೂ ಟ್ರಿಗರ್ ಮೇಲಿವೆ, ಶತ್ರುಗಳು ಸಣ್ಣ ತಪ್ಪು ಮಾಡಿದರೂ ನಾವು ಬಲವಾದ ಪ್ರತ್ಯುತ್ತರ ನೀಡುತ್ತೇವೆ ಎಂದು ಇರಾನ್ ಸ್ಪಷ್ಟಪಡಿಸಿದೆ. ಈ ಕದನ ವಿರಾಮದ ಭಾಗವಾಗಿ ಇರಾನ್‌ನ ಇಂಧನ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪ ಮುಂದಿಟ್ಟಿದ್ದರು.

ಇದಕ್ಕೂ ಮೊದಲು ಅಧ್ಯಕ್ಷ ಟ್ರಂಪ್ ಅವರು ಇರಾನ್ ವಿರುದ್ಧ ಕಠಿಣ ಎಚ್ಚರಿಕೆ ನೀಡಿದ್ದರು. ಒಂದು ವೇಳೆ ಮಾತುಕತೆ ವಿಫಲವಾದರೆ ಇರಾನ್‌ನ ವಿದ್ಯುತ್ ಮತ್ತು ಸೇತುವೆಗಳನ್ನು ನಾಶಪಡಿಸುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಈಗ ಪಾಕಿಸ್ತಾನದ ಮನವಿಯ ಮೇರೆಗೆ ದಾಳಿಯನ್ನು ಮುಂದೂಡಲಾಗಿದ್ದು, ಶಾಂತಿ ಮಾತುಕತೆಗೆ ಅವಕಾಶ ನೀಡಲಾಗಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕೂಡ ಇಳಿಕೆಯಾಗಿದ್ದು, ಆರ್ಥಿಕ ವಲಯದಲ್ಲಿ ಸಕಾರಾತ್ಮಕ ಬದಲಾವಣೆ ಕಂಡುಬಂದಿದೆ. ಶುಕ್ರವಾರ ನಡೆಯಲಿರುವ ಮಾತುಕತೆಯು ಈ ಸಂಘರ್ಷಕ್ಕೆ ಪೂರ್ಣವಿರಾಮ ಇಡುತ್ತದೆಯೇ ಎಂದು ಇಡೀ ವಿಶ್ವವೇ ಕುತೂಹಲದಿಂದ ಕಾಯುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja