ಪಾಕಿಸ್ತಾನ: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಪಾಕಿಸ್ತಾನ (Pakistan) ಮಧ್ಯಸ್ಥಿಕೆ ವಹಿಸುತ್ತಿರುವ ಬೆನ್ನಲ್ಲೇ, ಆ ದೇಶದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಮಾಡಿರುವ ಸಾಮಾಜಿಕ ಜಾಲತಾಣದ ಪೋಸ್ಟ್ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.
ಅನುಮಾನ ಹುಟ್ಟುಹಾಕಿದ ಪೋಸ್ಟ್
ಇರಾನ್ ಬಿಕ್ಕಟ್ಟಿನ ಕುರಿತು ಷರೀಫ್ ಅವರು ಎಕ್ಸ್ ಖಾತೆಯಲ್ಲಿ ಹಾಕಿದ್ದ ಸಂದೇಶವೊಂದರಲ್ಲಿನ ಸಣ್ಣ ಎಡಿಟಿಂಗ್ ತಪ್ಪಿನಿಂದಾಗಿ ಪಾಕಿಸ್ತಾನದ ರಾಜತಾಂತ್ರಿಕ ನಡೆಯ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಶೆಹಬಾಜ್ ಷರೀಫ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಲ್ಲಿ ಮನವಿಯೊಂದನ್ನು ಮಾಡಿದ್ದರು. ರಾಜತಾಂತ್ರಿಕ ಮಾತುಕತೆಗಳಿಗೆ ಅವಕಾಶ ನೀಡುವ ದೃಷ್ಟಿಯಿಂದ ಇರಾನ್ ಮೇಲೆ ವಿಧಿಸಿರುವ ಗಡುವನ್ನು ಎರಡು ವಾರಗಳ ಕಾಲ ವಿಸ್ತರಿಸಬೇಕು ಎಂದು ಅವರು ಕೋರಿದ್ದರು. ಇದೇ ವೇಳೆ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವ ಮೂಲಕ ಉದ್ವಿಗ್ನತೆ ಕಡಿಮೆ ಮಾಡಲು ಸಹಕರಿಸಬೇಕು ಎಂದು ಇರಾನ್ ಸರ್ಕಾರಕ್ಕೂ ಅವರು ಮನವಿ ಮಾಡಿದ್ದರು. ಆದರೆ ಈ ಸಂದೇಶವನ್ನು ಪೋಸ್ಟ್ ಮಾಡುವಾಗ ನಡೆದ ಒಂದು ತಪ್ಪು ಇಡೀ ವಿಷಯದ ದಿಕ್ಕನ್ನೇ ಬದಲಿಸಿದೆ.
ಏನಿದೆ ಪೋಸ್ಟ್‌ನಲ್ಲಿ?
ಷರೀಫ್ ಅವರ ಈ ಪೋಸ್ಟ್‌ನ ಎಡಿಟ್ ಹಿಸ್ಟರಿಯಲ್ಲಿ ನೋಡಿದಾಗ 'Draft - Pakistan's PM Message on X' ಎಂಬ ಲೇಬಲ್‌ನೊಂದಿಗೆ ಕಾಣಿಸಿಕೊಂಡಿದೆ. ಅಂದರೆ ಈ ಸಂದೇಶವು ಮೊದಲೇ ಸಿದ್ಧಪಡಿಸಿದ ಕರಡು ಪ್ರತಿಯಾಗಿತ್ತು ಎಂಬುದು ಇದರಿಂದ ಬಹಿರಂಗವಾಗಿದೆ. ಪ್ರಧಾನಿ ಅವರ ಅಧಿಕೃತ ಖಾತೆಯಲ್ಲಿ 'ಡ್ರಾಫ್ಟ್' ಎಂಬ ಪದ ಬಳಕೆಯಾಗಿರುವುದು ನೋಡಿ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಸಂದೇಶವನ್ನು ಪಾಕಿಸ್ತಾನವೇ ಸಿದ್ಧಪಡಿಸಿದ್ದೇ ಅಥವಾ ಬೇರೆ ಯಾವುದಾದರೂ ದೇಶದ ಪ್ರಭಾವದಿಂದ ಬರೆಯಲಾಗಿದೆಯೇ ಎಂಬ ಚರ್ಚೆ ಈಗ ಶುರುವಾಗಿದೆ.
ವಿಶೇಷವೆಂದರೆ ಈ ಪೋಸ್ಟ್‌ನಲ್ಲಿನ ಭಾಷೆಯು ವೈಟ್ ಹೌಸ್ ನೀಡಿದ ಸೂಚನೆಯಂತೆ ಕಾಣುತ್ತಿದೆ ಎಂದು ಕೆಲವು ಬಳಕೆದಾರರು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿದ್ದಾರೆ.. ಅಮೆರಿಕಕ್ಕೆ ಅನುಕೂಲವಾಗುವಂತೆ ಈ ಸಂದೇಶವನ್ನು ಸಿದ್ಧಪಡಿಸಲಾಗಿದ್ದು, ಪ್ರಧಾನಿ ಖಾತೆಯಿಂದ ಹಾಕಲಾಗಿದೆ ಅಷ್ಟೇ ಎಂಬ ವದಂತಿಗಳು ಹರಡುತ್ತಿವೆ. ಈ ಬಗ್ಗೆ ಪಾಕಿಸ್ತಾನದಿಂದ ಆಗಲಿ ಅಥವಾ ಅಮೆರಿಕದಿಂದ ಯಾವುದೇ ಅಧಿಕೃತ ಸ್ಪಷ್ಟನೆ ಹೊರಬಿದ್ದಿಲ್ಲ. ಆದರೂ ಪಾಕಿಸ್ತಾನವು ಇರಾನ್ ಮತ್ತು ಅಮೆರಿಕ ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆ ಆಗಿರುವುದರಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಗಮನಾರ್ಹ ಆಗಿದೆ. ಒಂದು ವೇಳೆ ದಾಳಿಗಳು ನಿಂತರೆ ತಾನು ಕೂಡ ಸೈನಿಕ ಕ್ರಮಗಳನ್ನು ನಿಲ್ಲಿಸುವುದಾಗಿ ಇರಾನ್ ತಿಳಿಸಿದ್ದು, ಈ ಅವಧಿಯಲ್ಲಿ ಸಮುದ್ರ ಮಾರ್ಗದಲ್ಲಿ ಸರಕು ಸಾಗಣೆಗೆ ಸುರಕ್ಷತೆ ನೀಡುವುದಾಗಿ ಭರವಸೆ ನೀಡಿದೆ.

