ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ತಲೆನೋವಾಗಿರುವ ಪಾರ್ಕಿಂಗ್ (Parking policy) ಸಮಸ್ಯೆಗೆ ಮುಕ್ತಿ ಹಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಸಂಚಾರ ಪೊಲೀಸ್ ಇಲಾಖೆ (Traffic Police) ಜಂಟಿಯಾಗಿ 'ಪಾರ್ಕಿಂಗ್ ನೀತಿ-2026' ತರಲು ಮುಂದಾಗಿದೆ.
ಖಾಲಿ ನಿವೇಶನಗಳಲ್ಲಿ ಸಾರ್ವಜನಿಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದರೆ ಬರೋಬ್ಬರಿ 35 ವರ್ಷಗಳ ಕಾಲ ಆಸ್ತಿ ತೆರಿಗೆ ವಿನಾಯಿತಿ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿರುವ ಬಂಪರ್ ಆಫರ್ಗೆ ಬೆಂಗಳೂರಿನ ಆಸ್ತಿ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಈ ಹೊಸ ಪಾರ್ಕಿಂಗ್ ನೀತಿಯ ಪ್ರಕಾರ, ನಗರದಲ್ಲಿ ಖಾಲಿ ಬಿದ್ದಿರುವ ನಿವೇಶನಗಳಲ್ಲಿ ಮಲ್ಟಿ-ಸ್ಟೋರಿ (ಬಹಳ ಅಂತಸ್ತಿನ) ಅಥವಾ ಆಟೋಮೇಟೆಡ್ ಪಾರ್ಕಿಂಗ್ ನಿರ್ಮಿಸಿದರೆ ಮಾಲೀಕರಿಗೆ 15 ರಿಂದ 35 ವರ್ಷಗಳವರೆಗೆ ಆಸ್ತಿ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಸಿಗಲಿದೆ. ಆದರೆ ಸರ್ಕಾರದ ಈ ಆಫರ್ ಹಿಂದೆ ದೊಡ್ಡ ಜಾಲ ಅಡಗಿದೆ ಎಂಬುದು ಸೈಟ್ ಮಾಲೀಕರ ಗಂಭೀರ ಆರೋಪವಾಗಿದೆ. "ನಮಗೆ ಸರ್ಕಾರದ ಟ್ಯಾಕ್ಸ್ ಫ್ರೀ ಆಫರ್ ಬೇಡ, ನಮ್ಮ ಸೈಟು ನಮಗೆ ಮುಖ್ಯ" ಎಂದು ಮಾಲೀಕರು ಜಿಬಿಎ ಮತ್ತು ಸಂಚಾರ ಪೊಲೀಸರ ಹೊಸ ನೀತಿಯ ವಿರುದ್ಧ ತಿರುಗಿಬಿದ್ದಿದ್ದಾರೆ. ದಶಕಗಳ ಕಾಲ ಸಾರ್ವಜನಿಕರು ಬಂದು ಒಂದು ಜಾಗದಲ್ಲಿ ಪಾರ್ಕಿಂಗ್ ಮಾಡಿದರೆ, ಭವಿಷ್ಯದಲ್ಲಿ ಆ ಜಾಗದ ಮೇಲಿನ ಹಕ್ಕೇ ತಮಗೆ ತಪ್ಪಿಹೋಗಬಹುದು ಎಂಬ ಆತಂಕ ಸೈಟ್ ಮಾಲೀಕರನ್ನು ಕಾಡುತ್ತಿದೆ. 35 ವರ್ಷ ಅಂದರೆ ಒಂದು ಇಡೀ ತಲೆಮಾರೇ ಕಳೆದುಹೋಗುತ್ತದೆ, ಅಲ್ಲಿಯವರೆಗೆ ಸ್ವಂತ ಜಾಗವನ್ನು ಬಳಸಲಾಗದೆ ಕೂರುವುದು ಜಾಗ ಕಬಳಿಸುವ ತಂತ್ರಕ್ಕೆ ಬಲಿಯಾದಂತೆ ಎಂದು ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ. ಮತ್ತೊಂದೆಡೆ, ಸರ್ಕಾರದ ಈ ಹೊಸ ಪಾರ್ಕಿಂಗ್ ನೀತಿಯನ್ನು ಕೆಲವರು ಮುಕ್ತವಾಗಿ ಸ್ವಾಗತಿಸಿದ್ದು, ಇದೊಂದು ಲಾಭದಾಯಕ ಯೋಜನೆ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಇಷ್ಟು ದಿನ ಖಾಲಿ ಬಿದ್ದಿದ್ದ ಸೈಟ್ಗಳಿಂದ ಮಾಲೀಕರಿಗೆ ಯಾವುದೇ ಆದಾಯವಿರಲಿಲ್ಲ, ಮೇಲಾಗಿ ಪ್ರತಿವರ್ಷ ದೊಡ್ಡ ಮೊತ್ತದ ತೆರಿಗೆಯನ್ನು ಕಿಸೆಯಿಂದ ಕಟ್ಟಬೇಕಿತ್ತು. ಕೆಲವು ಕಡೆಗಳಲ್ಲಿ ಖಾಲಿ ಸೈಟುಗಳಲ್ಲಿ ಯಾರು ಬೇಕಾದರೂ ಬಂದು ಗಾಡಿ ನಿಲ್ಲಿಸಿ ಹೋಗುತ್ತಿದ್ದರೂ ಮಾಲೀಕರಿಗೆ ನಯಾಪೈಸೆ ಸಿಗುತ್ತಿರಲಿಲ್ಲ. ಆದರೆ ಈಗ ಸರ್ಕಾರವೇ ಅಧಿಕೃತವಾಗಿ ಪಾರ್ಕಿಂಗ್ ಮಾಡಲು ಅವಕಾಶ ಕೊಟ್ಟು, ದಶಕಗಳ ಕಾಲ ಟ್ಯಾಕ್ಸ್ ಫ್ರೀ ಮಾಡುವುದರಿಂದ ಮಾಲೀಕರಿಗೇ ದೊಡ್ಡ ಲಾಭವಾಗಲಿದೆ. ಸ್ವಂತ ಹೂಡಿಕೆ ಅಥವಾ ಪಿಪಿಪಿ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಪಾರ್ಕಿಂಗ್ ಕಟ್ಟಡ ಕಟ್ಟಿದರೆ, ಮುಂದಿನ ತಲೆಮಾರಿಗೆ ಕಾಯಂ ಆದಾಯದ ಮೂಲ ಸಿಕ್ಕಂತಾಗುತ್ತದೆ ಎಂಬ ಪಾಸಿಟಿವ್ ಮಾತುಗಳೂ ಕೇಳಿಬರುತ್ತಿವೆ. ಒಟ್ಟಿನಲ್ಲಿ, ಆದಾಯದ ಆಸೆ ಮತ್ತು ಸೈಟ್ ಕಳೆದುಕೊಳ್ಳುವ ಭೀತಿಯ ನಡುವೆ ಬೆಂಗಳೂರಿನ ಹೊಸ ಪಾರ್ಕಿಂಗ್ ನೀತಿ ಈಗ ರಾಜಧಾನಿಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

