ಆಂಧ್ರಪ್ರದೇಶ: ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಅವರ ದೊಡ್ಡ ಅಭಿಮಾನಿಯಾಗಿದ್ದ, ಅಪರೂಪದ ಜನ್ಮಜಾತ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ ಹದಿನೇಳು ವರ್ಷದ ಕಿಶೋರ ನಿರಂಜನ್ ಬುಧವಾರ ವಾರಂಗಲ್‌ನಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ನಿರಂಜನ್ ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಕ್ಷೀಣಿಸಿದ್ದು, ಬುಧವಾರ ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅಭಿಮಾನಿ ಭೇಟಿ ಮಾಡಿದ್ದ ಪವನ್ ಕಲ್ಯಾಣ್ ಹಾಸಿಗೆ ಮೇಲೆಯೇ ಕುಳಿತು ಆತ್ಮೀಯ ಆಲಂಗನ ಇದಲ್ಲದೇ, ಬಾಲಕನ ಮುಂದಿನ ವೈದ್ಯಕೀಯ ಚಿಕಿತ್ಸೆಯ ವೆಚ್ಚಕ್ಕಾಗಿ ಪವನ್ ಕಲ್ಯಾಣ್ ಸ್ಥಳದಲ್ಲೇ 1 ಲಕ್ಷ ರೂಪಾಯಿ ಆರ್ಥಿಕ ನೆರವು ಹಸ್ತಾಂತರಿಸಿದ್ದರು. ಇದರೊಂದಿಗೆ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಿಂದ ವಿಶೇಷವಾಗಿ ತರಿಸಲಾಗಿದ್ದ ಪವಿತ್ರ ಶೇಷವಸ್ತ್ರವನ್ನು ಬಾಲಕನಿಗೆ ಹೊದಿಸಿ, ಕಲ್ಯಾಣ ಅಕ್ಷತೆ ಹಾಗೂ ತೀರ್ಥಪ್ರಸಾದ ನೀಡಿ ಆಶೀರ್ವದ ಕೂಡ ಮಾಡಿದ್ದರು. ನಿರಂಜನ್ ಶೀಘ್ರ ಗುಣಮುಖನಾಗಲಿ ಎಂದು ವರಂಗಲ್‌ನ ಪ್ರಸಿದ್ಧ ಭದ್ರಕಾಳಿ ಅಮ್ಮನವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸುವುದಾಗಿ ಪವನ್ ಕಲ್ಯಾಣ್ ತಿಳಿಸಿದ್ದರು. ಇದಲ್ಲದೇ, ಪವನ್ ಕಲ್ಯಾಣ್ ಅವರ ಸಿನಿಮಾದ ಹಾಡುಗಳಿಗೆ ಹೆಜ್ಜೆ ಹಾಕಿದ್ದ ಹಳೆಯ ವಿಡಿಯೋಗಳನ್ನು ಪವನ್ ಕಲ್ಯಾಣ್ ಆಸಕ್ತಿಯಿಂದ ವೀಕ್ಷಿಸಿ ಆತನ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದರು. ಅಲ್ಲದೆ, ಬಾಲಕನ ಆಸೆಯಂತೆ ಅವನಿಗಾಗಿ ಒಂದು ಮುದ್ದಾದ ನಾಯಿಮರಿಯನ್ನು ಸಹ ಕೊಡಿಸಿದ್ದರು. ನೆಚ್ಚಿನ ನಟ ಹಾಗೂ ನಾಯಕನನ್ನು ಭೇಟಿಯಾದ ಕೆಲವೇ ದಿನಗಳಲ್ಲಿ ಅಭಿಮಾನಿ ಇಹಲೋಕ ತ್ಯಜಿಸಿರುವುದು ತೀವ್ರ ಆಘಾತ ಉಂಟುಮಾಡಿದೆ.
ಹಿಂದಿನ ತಿಂಗಳು ತೆಲಂಗಾಣದ ಹನುಮಕೊಂಡದಲ್ಲಿರುವ ಅಭಿಮಾನಿಯ ಮನೆಗೇ ಸ್ವತಃ ಪವನ್ ಕಲ್ಯಾಣ್ ಭೇಟಿ ನೀಡಿ ಆತನಿಗೆ ಧೈರ್ಯ ತುಂಬಿದ್ದರು. ತನ್ನ ಜೀವಿತಾವಧಿಯ ಕೊನೆಯ ಆಸೆಯಾಗಿ ಒಮ್ಮೆಯಾದರೂ ನಟ ಪವನ್ ಕಲ್ಯಾಣ್ ಅವರನ್ನು ಭೇಟಿಯಾಗಬೇಕೆಂದು ಆತ ಹಂಬಲಿಸುತ್ತಿದ್ದ. ತೆಲಂಗಾಣದ ಜನಸೇನಾ ನಾಯಕರ ಮೂಲಕ ಈ ವಿಷಯ ಪವನ್ ಕಲ್ಯಾಣ್ ಅವರ ಗಮನಕ್ಕೆ ಬಂದ ತಕ್ಷಣ, ಅವರು ಬೆಳಗ್ಗೆಯೇ ನೇರವಾಗಿ ನಿರಂಜನ್ ನಿವಾಸಕ್ಕೆ ಹೋಗಿದ್ದರು.
ಚಲನವಲನವಿಲ್ಲದೆ ಹಾಸಿಗೆಯಲ್ಲೇ ಮಲಗಿದ್ದ ಅಭಿಮಾನಿ ನಿರಂಜನ್ ಸ್ಥಿತಿಯನ್ನು ಕಂಡು ಪವನ್ ಕಲ್ಯಾಣ್ ತೀವ್ರ ಭಾವುಕರಾಗಿದ್ದರು. ಆತನ ಹಾಸಿಗೆಯ ಮೇಲೆಯೇ ಕುಳಿತು, ಆತ್ಮೀಯವಾಗಿ ಆಲಂಗಿಸಿಕೊಂಡರಲ್ಲದೆ, ಆತನ ಹಣೆಗೊಂದು ಮುತ್ತಿಟ್ಟು ಆಪ್ಯಾಯತೆಯಿಂದ ಮಾತನಾಡಿಸಿದ್ದರು. "ಚಿಕ್ಕಂದಿನಿಂದಲೂ ನೀವೆಂದರೆ ನನಗೆ ತುಂಬಾ ಇಷ್ಟ ಸ್ವಾಮಿ" ಎಂದು ನಿರಂಜನ್ ಹೇಳಿದ ಮಾತುಗಳನ್ನು ಕೇಳಿ ಪವನ್ ಕಲ್ಯಾಣ್ ಕಣ್ಣಾಲಿಗಳು ಒದ್ದೆಯಾಗಿದ್ದವು. ಬಾಲಕನ ಪೋಷಕರಾದ ಪೊನುಗೋಟಿ ರಾಂಗೋಪಾಲ್ ಮತ್ತು ಮಾನಸ ಅವರೊಂದಿಗೆ ಮಾತನಾಡಿ, ವೈದ್ಯಕೀಯ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು.

