ತಿರುವನಂತಪುರಂ: 2026ರ ಕೇರಳ (Kerala) ವಿಧಾನಸಭಾ ಚುನಾವಣೆಯ (Vidhan sabha Election) ಪ್ರಚಾರದ ಕಾವು ಏರುತ್ತಿದೆ.. ಸರ್ವ ಪಕ್ಷಗಳು ಮತದಾರರ ಮನ ಗೆಲ್ಲಲು ಸರ್ವ ಪ್ರಯತ್ನ ಮಾಡುತ್ತಿವೆ. ಈ ನಡುವೆ, ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಕೇರಳದಲ್ಲಿ ಭರ್ಜರಿ ರೋಡ್ ಶೋ (Road Show) ಮತ್ತು ಬೃಹತ್ ಸಮಾವೇಶ ನಡೆಸುವ ಮೂಲಕ ಬಿಜೆಪಿಯ (BJP) ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೇರಳದ ಮಹಿಳೆಯರು ಬಿಜೆಪಿಗೆ ನೀಡುತ್ತಿರುವ ಅಭೂತಪೂರ್ವ ಬೆಂಬಲವು ರಾಜ್ಯದಲ್ಲಿ ಹೊಸ ರಾಜಕೀಯ ಬದಲಾವಣೆಯ ದಿಕ್ಸೂಚಿಯಾಗಿದೆ ಎಂದು ಬಣ್ಣಿಸಿದ್ದಾರೆ. ಕೇರಳದ ಸಾಕ್ಷರ ಮತ್ತು ಪ್ರಬುದ್ಧ ಮಹಿಳಾ ಮತದಾರರು ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳಿಂದ ಪ್ರಯೋಜನ ಪಡೆದಿದ್ದಾರೆ. ಉಜ್ವಲ ಯೋಜನೆ, ಆಯುಷ್ಮಾನ್ ಭಾರತ್ ಮತ್ತು ಮುದ್ರಾ ಸಾಲಗಳಂತಹ ಯೋಜನೆಗಳು ಕೇರಳದ ಮಹಿಳೆಯರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತಂದಿವೆ. ಕೇರಳದ ತಾಯಿ-ತಂಗಿಯರ ಆಶೀರ್ವಾದವೇ ಬಿಜೆಪಿಯ ಅತಿದೊಡ್ಡ ಶಕ್ತಿ ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದ್ದಾರೆ. ರಾಜ್ಯದ ಸಾಂಪ್ರದಾಯಿಕ ರಾಜಕೀಯ ಮೈತ್ರಿಕೂಟಗಳಾದ ಎಲ್‌ಡಿಎಫ್ (LDF) ಮತ್ತು ಯುಡಿಎಫ್ (UDF) ಮಹಿಳೆಯರ ಅಭಿವೃದ್ಧಿಯನ್ನು ಕಡೆಗಣಿಸಿವೆ ಎಂದು ಅವರು ಟೀಕಿಸಿದ್ದಾರೆ. ಕೇರಳವನ್ನು ದಶಕಗಳಿಂದ ಆಳುತ್ತಿರುವ ಎಡರಂಗ ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಗಳು ಕೇವಲ ವೋಟ್ ಬ್ಯಾಂಕ್ ರಾಜಕಾರಣದಲ್ಲಿ ತೊಡಗಿವೆ ಎಂದು ಪ್ರಧಾನಿ ಕಿಡಿಕಾರಿದ್ದಾರೆ. ದೆಹಲಿಯಲ್ಲಿ ಕುಳಿತು ದೋಸ್ತಿ ಮಾಡುವ ಈ ಎರಡು ಪಕ್ಷಗಳು, ಕೇರಳದಲ್ಲಿ ಮಾತ್ರ ಕುಸ್ತಿ ಆಡುತ್ತಿವೆ. ಇವರ ಭ್ರಷ್ಟಾಚಾರ ಮತ್ತು ತುಷ್ಟೀಕರಣದ ರಾಜಕಾರಣದಿಂದ ಕೇರಳದ ಯುವಜನತೆ ಮತ್ತು ಮಹಿಳೆಯರು ಬೇಸತ್ತಿದ್ದಾರೆ. ಈ ಬಾರಿ ಕೇರಳದ ಜನತೆ ಬಿಜೆಪಿಗೆ ಒಂದು ಅವಕಾಶ ನೀಡಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ತಮ್ಮ ಭಾಷಣದುದ್ದಕ್ಕೂ ಕೇರಳದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಶ್ಲಾಘಿಸಿದ ಮೋದಿ, ಶಬರಿಮಲೆ ಮತ್ತು ಪದ್ಮನಾಭಸ್ವಾಮಿ ದೇವಸ್ಥಾನಗಳಂತಹ ಪವಿತ್ರ ಸ್ಥಳಗಳ ರಕ್ಷಣೆ ಮತ್ತು ಗೌರವಕ್ಕೆ ಬಿಜೆಪಿ ಬದ್ಧವಾಗಿದೆ ಎಂದರು. ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ, ಪ್ರವಾಸೋದ್ಯಮ ಮತ್ತು ಕರಾವಳಿ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀಡಿರುವ ಕೊಡುಗೆಗಳನ್ನು ಅವರು ಪಟ್ಟಿ ಮಾಡಿದರು. ಬಿಜೆಪಿಯು ಈ ಬಾರಿ ಕೇರಳದಲ್ಲಿ ತನ್ನ ಸ್ಥಾನಗಳನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಲು ಮಹಿಳಾ ಮತದಾರರು ಮತ್ತು ಯುವ ಸಮುದಾಯವನ್ನು ಗುರಿಯಾಗಿಸಿಕೊಂಡಿದೆ. ಪ್ರಧಾನಿಯವರ ಈ ಭೇಟಿಯು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದ್ದು, ಕೇರಳದ ರಾಜಕೀಯ ಇತಿಹಾಸದಲ್ಲಿ ಬಿಜೆಪಿ ಈ ಬಾರಿ ಹೊಸ ದಾಖಲೆ ಬರೆಯಲಿದೆ ಎಂದು ಪಕ್ಷದ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿಯವರ ಪ್ರಚಾರ ವೈಖರಿಯು ಕೇರಳದ ತ್ರಿಕೋನ ಸ್ಪರ್ಧೆಯನ್ನು ಮತ್ತಷ್ಟು ರಂಗೇರಿಸಿದೆ. ಇದನ್ನೂಓದಿ: ನಾವು 1.31 ಲಕ್ಷ ಕೋಟಿ ಗ್ಯಾರಂಟಿಗಳಿಗೆ ನೀಡಿದ್ದೇವೆ, ಬಿಜೆಪಿ ಶ್ರೀಮಂತರ ಬಡವರ ನಡುವಿನ ಅಂತರ ಹೆಚ್ಚಿದೆ: ಸಿಎಂ

