ಚೆನೈ: ಆಲ್ ಇಂಡಿಯಾ ಎನ್‌ಆರ್ ಕಾಂಗ್ರೆಸ್ (AINRC) ಮುಖ್ಯಸ್ಥ ಎನ್. ರಂಗಸಾಮಿ(N Rangasamy) ಅವರು ಐದನೇ ಬಾರಿಗೆ ಪುದುಚೇರಿಯ(Puducherry) ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಐಎನ್‌ಆರ್‌ಸಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟವು ಬಹುಮತ ಸಾಧಿಸಿ ಅಧಿಕಾರವನ್ನು ಉಳಿಸಿಕೊಂಡಿದೆ.
ಲೆಫ್ಟಿನೆಂಟ್ ಗವರ್ನರ್ ಕೆ. ಕೈಲಾಸನಾಥನ್ ಅವರು ರಂಗಸಾಮಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಎನ್. ರಂಗಸಾಮಿ ಅವರು ದೇವರ ಹೆಸರಿನಲ್ಲಿ ಪುದುಚೇರಿಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಂಗಸಾಮಿ ಅವರೊಂದಿಗೆ ಪ್ರಾದೇಶಿಕ ಪಕ್ಷದ ನಾಯಕ ಮಲ್ಲಾಡಿ ಕೃಷ್ಣ ರಾವ್ ಮತ್ತು ಬಿಜೆಪಿ ನಾಯಕ ಎ. ನಮಸ್ಸಿವಾಯಂ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆಂಧ್ರಪ್ರದೇಶದಲ್ಲಿರುವ ಪುದುಚೇರಿಯ ಪ್ರಾಂತ್ಯವಾದ 'ಯಾಣಂ' ಕ್ಷೇತ್ರವನ್ನು ಪ್ರತಿನಿಧಿಸುವ ಮಲ್ಲಾಡಿ ಕೃಷ್ಣ ರಾವ್ ಅವರು ತೆಲುಗು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.
ಬಿಜೆಪಿ ಮತ್ತು ಎಐಎನ್‌ಆರ್‌ಸಿ (AINRC) ಮೈತ್ರಿಕೂಟದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಿರುವುದನ್ನು ಸಂಭ್ರಮಿಸಲು ಕೇಂದ್ರದ ಪ್ರಮುಖ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

