ಫಿರೋಜ್‌ಪುರ (ಪಂಜಾಬ್): ಪಂಜಾಬ್‌ನ (Punjab) ಫಿರೋಜ್‌ಪುರ ಜಿಲ್ಲೆಯ ಮಮದೋತ್ ನಗರದಲ್ಲಿ ಆಮ್ ಆದ್ಮಿ ಪಾರ್ಟಿಯ (AAP) ನಾಯಕ ಗುರುಪ್ರೀತ್ ಸಿಂಗ್ ಗೋಪಿ (Gurpreet Singh Gopi) ಅವರನ್ನು ದುಷ್ಕರ್ಮಿಗಳು ಬೆನ್ನಟ್ಟಿ ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.
ಹಳೆಯ ದ್ವೇಷ ಹಾಗೂ ಚುನಾವಣೆಗೆ ಸಂಬಂಧಿಸಿದ ವೈಷಮ್ಯವೇ ಈ ಕೊಲೆಗೆ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ. ಘಟನೆಯ ವೇಳೆಯಲ್ಲಿ ಗುರುಪ್ರೀತ್ ಸಿಂಗ್ ಗೋಪಿ ಅವರು ತಮ್ಮ ಪರಿಚಿತ ಹರ್‌ಪ್ರೀತ್ ಎಂಬುವವರೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಬಂದೂಕುಧಾರಿ ದುಷ್ಕರ್ಮಿಗಳ ತಂಡವು ಇವರ ಬೈಕನ್ನು ಬೆನ್ನಟ್ಟಿ ಹತ್ತಿರದಿಂದ ಗುಂಡಿನ ದಾಳಿ ನಡೆಸಿದೆ. ತೀವ್ರವಾಗಿ ಗಾಯಗೊಂಡ ಗುರುಪ್ರೀತ್ ಗೋಪಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಗುರುಪ್ರೀತ್ ಅವರ ಬೈಕ್ ಹಿಂದೆ ಅವರ ಸ್ನೇಹಿತರು ಮತ್ತೊಂದು ಕಾರಿನಲ್ಲಿ ಬರುತ್ತಿದ್ದರು. ದುಷ್ಕರ್ಮಿಗಳು ಅವರ ಕಾರಿನ ಮೇಲೆಯೂ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಸಂಪೂರ್ಣ ಸನ್ನಿವೇಶ ಮತ್ತು ದಾಳಿಯ ಹಿಂದಿನ ಸರಣಿ ಬೆಳವಣಿಗೆಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಈ ಭೀಕರ ಕೊಲೆಯ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಭೂಪಿಂದರ್ ಸಿಂಗ್ ಸಿಧು, ಎರಡೂ ಗುಂಪುಗಳ ನಡುವೆ ಹಳೆಯ ವೈಷಮ್ಯವಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಚುನಾವಣೆಗೆ ಸಂಬಂಧಿಸಿದ ಹಳೆಯ ವಿವಾದವೇ ಈ ದಾಳಿಗೆ ಮುಖ್ಯ ಕಾರಣ ಎನ್ನಲಾಗಿದೆ. ದಾಳಿಕೋರರನ್ನು ಈಗಾಗಲೇ ಗುರುತಿಸಲಾಗಿದ್ದು, ಅವರಲ್ಲಿ ಮುಖ್ಯ ಆರೋಪಿಯು ಅಪರಾಧ ಹಿನ್ನೆಲೆಯುಳ್ಳವನಾಗಿದ್ದಾನೆ. ಆರೋಪಿಗಳ ಬಂಧನಕ್ಕಾಗಿ ಹಲವು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯ ಮತ್ತು ದಾಳಿಗಳನ್ನು ನಡೆಸಲಾಗುತ್ತಿದೆ. ಶೀಘ್ರದಲ್ಲೇ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪಂಜಾಬ್‌ನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಇಂತಹ ಅಪರಾಧ ಕೃತ್ಯಗಳು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಕುರಿತು ಹೊಸ ಆತಂಕವನ್ನು ಹುಟ್ಟುಹಾಕಿವೆ. ರಾಜಕೀಯ ಹಾಗೂ ಚುನಾವಣಾ ವೈಷಮ್ಯದಿಂದ ನಡೆದಿರುವ ಈ ಹತ್ಯೆಯು ಈಗ ರಾಜ್ಯ ರಾಜಕೀಯದಲ್ಲೂ ಭಾರಿ ಚರ್ಚೆಗೆ ಗ್ರಾಸವಾಗಿದೆ.

