ಬೆಂಗಳೂರು: ಸಿದ್ದರಾಮಯ್ಯ ಅವರ ರಾಜೀನಾಮೆ ಮತ್ತು ರಾಜ್ಯ ರಾಜಕಾರಣದ ದಿಢೀರ್ ಬೆಳವಣಿಗೆಗಳ ಬೆನ್ನಲ್ಲೇ ನಿರ್ಗಮಿತ ಸಿಎಂ ಅವರು ಡಿಕೆ ಶಿವಕುಮಾರ್ ಅವರಿಗೆ ಭಸ್ಮಾಸುರ ರೀತಿ ಆಶೀರ್ವಾದ ಮಾಡಿದ್ದಾರೆ ಎಂದು ಬಿಜೆಪಿ ನಾಯಕ ಆರ್ ಅಶೋಕ್ (R Ashok) ಲೇವಡಿ ಮಾಡಿದ್ದಾರೆ.
ಹೊಸ ಡ್ರೈವರ್ ಬಂದರೂ ಪ್ರಯೋಜನವಾಗಲ್ಲ
ಇಂದು ವಿಧಾನಸಭೆಯಲ್ಲಿ ಮಾಧ್ಯಮಗಳ ಜೊತೆ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯದ ಕುರಿತು ಮಾರ್ಮಿಕವಾಗಿ ಮಾತನಾಡಿದ ವಿಪಕ್ಷ ನಾಯಕ, ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಮಾಡಿರುವ ಆಶೀರ್ವಾದ ಸದ್ಯ ಭಸ್ಮಾಸುರನ ಕಥೆಯನ್ನು ನೆನಪಿಸುತ್ತಿದೆ. ಭಸ್ಮಾಸುರನಿಗೆ ಸಿಕ್ಕ ಆಶೀರ್ವಾದದಂತೆ ಈ ಅಧಿಕಾರವೇ ಡಿ.ಕೆ. ಶಿವಕುಮಾರ್ ಅವರಿಗೆ ಮುಳುವಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ಆಂತರಿಕ ಕಚ್ಚಾಟ ಹಾಗೂ ರಾಹುಲ್ ಗಾಂಧಿ ಅವರ ಹಸ್ತಕ್ಷೇಪದಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದ್ದು, ಹೊಸ ಡ್ರೈವರ್ ಬಂದರೂ ರಾಜ್ಯದ ಜನರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ
ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಈ ಎಲ್ಲಾ ಬೆಳವಣಿಗೆಗಳ ಹಿಂದೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರ ಕಿತಾಪತಿ ಎದ್ದು ಕಾಣಿಸುತ್ತಿದೆ ಎಂದು ಜರೆದಿರುವ ಅವರು, ಅಧಿಕಾರದಲ್ಲಿದ್ದವರನ್ನು ಏಕಾಏಕಿ ಕುರ್ಚಿಯಿಂದ ತೆಗೆದು ಹಾಕುವುದು ಕಾಂಗ್ರೆಸ್ ಪಕ್ಷದ ಹಳೇ ಸಂಸ್ಕೃತಿ ಎಂದು ಟೀಕಿಸಿದ್ದಾರೆ. ಸಿದ್ದರಾಮಯ್ಯ ಅವರಂತಹ ಹಿಂದುಳಿದ ವರ್ಗದ ಪ್ರಭಾವಿ ನಾಯಕನನ್ನು ನಡೆಸಿಕೊಂಡ ರೀತಿಗೆ ಮುಂಬರುವ ದಿನಗಳಲ್ಲಿ ರಾಜ್ಯದ ಹಿಂದುಳಿದ ವರ್ಗದ ಜನರೇ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.
ರಾಜ್ಯ ಸರ್ಕಾರದ ಸದ್ಯದ ಪರಿಸ್ಥಿತಿಯನ್ನು ವಾಹನ ಚಾಲನೆಗೆ ಹೋಲಿಸಿ ಲೇವಡಿ ಮಾಡಿರುವ ಆರ್. ಅಶೋಕ್, ಸದ್ಯದ ಮಟ್ಟಿಗೆ ರಾಜ್ಯ ಸರ್ಕಾರದಲ್ಲಿ ಕೇವಲ ಡ್ರೈವರ್ ಬದಲಾಗಿದ್ದಾನೆ ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ. ಕಳೆದ ಮೂರು ವರ್ಷಗಳ ಕಾಲ ಸಿದ್ದರಾಮಯ್ಯ ಅವರು ಈ ಸರ್ಕಾರವೆಂಬ ಲಾರಿಯನ್ನು ತಮಗೆ ಇಷ್ಟ ಬಂದಂತೆ ಓಡಿಸಿದ್ದರು. ಆದರೆ ಈಗ ಅಧಿಕಾರ ಹಸ್ತಾಂತರದ ಹೆಸರಿನಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಸಿದ್ದರಾಮಯ್ಯ ಅವರು ಹಳೆಯ ಗುಜರಿ ಗಾಡಿಯನ್ನು ಕೈಗಿಟ್ಟಿದ್ದಾರೆ. ಕಳೆದ ಮೂರು ವರ್ಷಗಳಿಂದ ಮಾಡಿರುವ ಸಾಲದ ಹೊರೆ ಈ ಬಸ್ಸಿನ ಮೇಲಿದೆ. ಅಷ್ಟೇ ಅಲ್ಲದೆ, ಈಗ ಡಿ.ಕೆ. ಶಿವಕುಮಾರ್ ಓಡಿಸಬೇಕಾಗಿರುವ ಆ ಬಸ್ಸಿಗೆ ಸದ್ಯ ಡೀಸೆಲ್ ಕೂಡ ಇಲ್ಲದಂತಾಗಿದೆ ಎಂದು ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ಅಶೋಕ್ ಹಾಸ್ಯ ಮಾಡಿದ್ದಾರೆ.
ಜಮೀರ್ ಆಡಿಯೋ ಹಿಂದೆ ದೊಡ್ಡ ಪ್ಲಾನ್
ಇನ್ನು ಸಚಿವ ಜಮೀರ್ ಅಹಮದ್ ಖಾನ್ ಅವರದ್ದೆನ್ನಲಾದ ವಿವಾದಾತ್ಮಕ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ವಿಚಾರವಾಗಿ ಸಹ ಅವರು ಮಾತನಾಡಿದ್ದು, ಇದರ ಹಿಂದೆ ಕಾಂಗ್ರೆಸ್ ಪಕ್ಷದ ಆಂತರಿಕ ರಾಜಕೀಯ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತ ವಲಯ ಹಾಗೂ ಅವರ ಗ್ಯಾಂಗ್‌ಗೆ ರಾಜಕೀಯವಾಗಿ ಕತ್ತರಿ ಹಾಕುವ ಉದ್ದೇಶದಿಂದಲೇ ಈ ಆಡಿಯೋವನ್ನು ಉದ್ದೇಶಪೂರ್ವಕವಾಗಿ ಹೊರಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಬಣದ ನಾಯಕರು ಇನ್ಮುಂದೆ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ದಾವಣಗೆರೆ ಉಪಚುನಾವಣೆ ಮುಗಿದು ಇಷ್ಟು ದಿನಗಳಾದ ಬಳಿಕ ಈಗ ದಿಢೀರ್ ಆಗಿ ಆಡಿಯೋ ಬಿಡುಗಡೆ ಮಾಡಿರುವುದರ ಹಿಂದೆ ದೊಡ್ಡ ಪ್ಲಾನ್ ಅಡಗಿದೆ. ಜಮೀರ್ ಅಹಮದ್ ಅವರ ಸಚಿವ ಸ್ಥಾನಕ್ಕೆ ಕುತ್ತು ತರಲು ಅವರ ಸ್ವಪಕ್ಷದವರೇ ಈ ಸಂಚು ರೂಪಿಸಿದ್ದಾರೆ. ಉರ್ದು ಭಾಷೆಯಲ್ಲಿದ್ದ ಸಂಭಾಷಣೆಯನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಹಂಚುತ್ತಿರುವುದೇ ಇದಕ್ಕೆ ಸಾಕ್ಷಿ ಎಂದಿರುವ ಅಶೋಕ್, ಈ ಆಡಿಯೋ ಲೀಕ್ ಹಗರಣ ಸಂಪೂರ್ಣವಾಗಿ ಕಾಂಗ್ರೆಸ್ ಒಳಗಿನ ನಾಯಕರದ್ದೇ ಕೃತ್ಯ ಎಂದು ನೇರವಾಗಿ ದೂರಿದ್ದಾರೆ.
ರಾಜ್ಯ ರಾಜಕಾರಣದ ಸದ್ಯದ ಬೆಳವಣಿಗೆಗಳ ಕುರಿತು ಭವಿಷ್ಯ ನುಡಿದಿರುವ ಆರ್. ಅಶೋಕ್, ಸಚಿವ ಸ್ಥಾನ ಉಳಿಸಿಕೊಳ್ಳಲು ಮತ್ತು ಹೊಸದಾಗಿ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಈಗ ಹೈಕಮಾಂಡ್ ಭೇಟಿಗೆ ದೆಹಲಿಗೆ ಓಡುತ್ತಿದ್ದಾರೆ. ಆದರೆ, ಮುಂಬರುವ ದಿನಗಳಲ್ಲಿ ಸಚಿವ ಸಂಪುಟ ಕಸರತ್ತು ಮುಗಿದು ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ದೊಡ್ಡ ಅಸಮಾಧಾನ ಸ್ಫೋಟಗೊಳ್ಳಲಿದೆ. ಸಚಿವ ಸ್ಥಾನ ಸಿಗದೆ ವಂಚಿತರಾದ ನಾಯಕರೆಲ್ಲ ಸೇರಿಕೊಂಡು ಪಕ್ಷದೊಳಗೆ ಅತೃಪ್ತರ ಹೊಸ ಗುಂಪೊಂದನ್ನು ರಚಿಸಿಕೊಳ್ಳಲಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

