ನವದೆಹಲಿ: ಏರ್‌ಪೋರ್ಟ್‌ನ ಚಹಾ-ಸಮೋಸಾ ಬೆಲೆಯಿಂದ ಹಿಡಿದು ಕಾರ್ಮಿಕರ ಕಷ್ಟಗಳವರೆಗೆ ಸಂಸತ್ತಿನಲ್ಲಿ ಸದಾ ಧ್ವನಿ ಎತ್ತುತ್ತಿದ್ದ ಯುವ ಮುಖಂಡ ರಾಘವ್ ಚಡ್ಡಾ, (Raghav Chadha) ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ಸಂದರ್ಭದಲ್ಲಿ ನಿಗೂಢ ಮೌನ ಕಾಯ್ದುಕೊಂಡಿದ್ದರು.
ವಿದ್ಯಾರ್ಥಿಗಳು ದೆಹಲಿಯ ರಸ್ತೆಗಳಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾಗಲೂ ಈ ಯುವ ಸಂಸದ ತುಟಿ ಬಿಚ್ಚದಿರುವುದು ಸಾರ್ವಜನಿಕ ವಲಯ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟೀಕೆ ಮತ್ತು ಟ್ರೋಲ್‌ಗಳಿಗೆ ಕಾರಣವಾಗಿತ್ತು. ತಾವೇಕೆ ಇಷ್ಟು ದಿನ ಸುಮ್ಮನಿದ್ದೆ ಎಂಬ ಕುರಿತು ಕೊನೆಗೂ ಅವರು ರಾಜ್ಯಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಜವಾಬ್ದಾರಿಗಳೂ ಬದಲಾಗಿವೆ ಎಂದ ಚಡ್ಡಾ ಕೇವಲ ಸುದ್ದಿಯಾಗುವುದರಲ್ಲಿ ತಮಗೆ ನಂಬಿಕೆಯಿಲ್ಲ ಕ್ಯಾಮೆರಾಗಳ ಮುಂದೆ ಬಂದು ಕೇವಲ ಸುದ್ದಿಯಾಗುವುದರಲ್ಲಿ ತಮಗೆ ನಂಬಿಕೆಯಿಲ್ಲ ಎಂದ ಅವರು, ಈ ಜ್ವಲಂತ ಸಮಸ್ಯೆಗೆ ಕಾನೂನಾತ್ಮಕ ಪರಿಹಾರ ಸಿಗುವವರೆಗೂ ಸಂಸತ್ತಿನಲ್ಲಿ ಮಾತನಾಡಬಾರದು ಎಂದು ನಿರ್ಧರಿಸಿದ್ದಾಗಿ ಹೇಳಿದರು. ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗೆ ಸಾಮಾನ್ಯ ಕ್ರೋಸಿನ್ ಮಾತ್ರೆ ನೀಡಿ ಗುಣಪಡಿಸಲು ಸಾಧ್ಯವಿಲ್ಲ. ಅದೇ ರೀತಿ ಪೇಪರ್ ಸೋರಿಕೆಯಂತಹ ಪಿಡುಗನ್ನು ಕೇವಲ ಮಾಧ್ಯಮ ಹೇಳಿಕೆಗಳಿಂದ ತಡೆಯಲು ಸಾಧ್ಯವಿಲ್ಲ, ಅದಕ್ಕೆ ಈಗ ತಂದಿರುವ ಕಠಿಣ ಕಾನೂನಿನಂತಹ ಬಲವಾದ ಸಾಂಸ್ಥಿಕ ಬದಲಾವಣೆಗಳೇ ಬೇಕು ಎಂದು ಅವರು ಅಭಿಪ್ರಾಯಪಟ್ಟರು. ಕೊನೆಯದಾಗಿ ನೀಟ್ ಅಭ್ಯರ್ಥಿಗಳಿಗೆ ಧೈರ್ಯ ತುಂಬಿದ ಚಡ್ಡಾ, ವಿದ್ಯಾರ್ಥಿಗಳ ಆಕ್ರೋಶ ಮತ್ತು ಅಸಮಾಧಾನದಲ್ಲಿ ಸಂಪೂರ್ಣ ನ್ಯಾಯವಿದೆ. ದೇಶದ ಯುವಜನತೆ ಸಂಕಷ್ಟದಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಆಡಳಿತಗಾರನಾಗಿ ಅಲ್ಲದೆ, ಮನೆಯ ಹಿರಿಯ ಪೋಷಕನಂತೆ ಅವರ ಧ್ವನಿಗೆ ಕಿವಿಗೊಟ್ಟಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ತಕ್ಷಣ ಕಾರ್ಯಪ್ರವೃತ್ತವಾಗಿದ್ದು, ವ್ಯವಸ್ಥೆಯನ್ನು ಸುಧಾರಿಸಲು ಐತಿಹಾಸಿಕ ತೀರ್ಮಾನಗಳನ್ನು ಜಾರಿಗೊಳಿಸಿದೆ ಎಂದು ವಿವರಿಸಿದರು.
ಆಮ್ ಆದ್ಮಿ ಪಕ್ಷದಿಂದ (AAP) ಇತ್ತೀಚೆಗಷ್ಟೇ ಹೊರಬಂದು ಭಾರತೀಯ ಜನತಾ ಪಕ್ಷ (BJP) ಸೇರಿರುವ ಸಂಸದ ರಾಘವ್ ಚಡ್ಡಾ, ಪೇಪರ್ ಸೋರಿಕೆ ನಿಯಂತ್ರಣದ ನೂತನ ಮಸೂದೆ ಕುರಿತ ಚರ್ಚೆಯ ವೇಳೆ ತಮ್ಮ ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಿದರು. ರಾಜಕೀಯ ನೆಲೆಯಲ್ಲಿ ತಮ್ಮ ಸ್ಥಾನ ಬದಲಾದ ಬೆನ್ನಲ್ಲೇ ಜವಾಬ್ದಾರಿಗಳೂ ಬದಲಾಗಿವೆ ಎಂದು ಅವರು ತಿಳಿಸಿದರು. "ಹಿಂದೆ ನಾನು ಪ್ರತಿಪಕ್ಷದಲ್ಲಿದ್ದಾಗ ತಪ್ಪುಗಳನ್ನು ಪ್ರಶ್ನಿಸುವುದು ನನ್ನ ಕರ್ತವ್ಯವಾಗಿತ್ತು, ಅದನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಆದರೆ ಈಗ ಆಡಳಿತ ಪಕ್ಷದ ಭಾಗವಾಗಿರುವುದರಿಂದ ಕೇವಲ ಪ್ರಶ್ನೆ ಮಾಡುವುದಷ್ಟೇ ನನ್ನ ಕೆಲಸವಲ್ಲ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ನನ್ನ ಹೊಣೆಗಾರಿಕೆಯಾಗಿದೆ" ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

