ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಮಂಡಳಿ (CBSE) ಮೌಲ್ಯಮಾಪನದಲ್ಲಿ ಮಾಡಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ವಿದ್ಯಾರ್ಥಿಗಳಿಂದ ಭಾರಿ ಮೊತ್ತದ ಶುಲ್ಕ ವಸೂಲಿ ಮಾಡುತ್ತಿರುವುದನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಆರೋಪ ಮಾಡಿದ್ದಾರೆ.
ಶಿಕ್ಷಣ ಸಂಸ್ಥೆಯಲ್ಲಿ ಜೇಬುಕಳ್ಳರು ಕುಳಿತಿದ್ದಾರೆ
ಈ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು, ಶಿಕ್ಷಣ ಸಂಸ್ಥೆಗಳ ಒಳಗೆ ಜೇಬುಕಳ್ಳರು ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಬಿಎಸ್‌ಇ ಸಂಸ್ಥೆಯು ಶಿಕ್ಷಣವನ್ನು ಸೇವೆಯನ್ನಾಗಿ ನೋಡದೆ ವ್ಯಾಪಾರವನ್ನಾಗಿ ಮಾಡಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಿಬಿಎಸ್‌ಇ ಮಾಡಿದ ತಪ್ಪುಗಳಿಗೆ ದೇಶದ ಅಮಾಯಕ ವಿದ್ಯಾರ್ಥಿಗಳು ತಮ್ಮ ಭವಿಷ್ಯ ಮತ್ತು ಆತ್ಮವಿಶ್ವಾಸದ ಮೂಲಕ ಬೆಲೆ ತೆರಬೇಕಾಗಿ ಬಂದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳಿಗೆ 2 ಸಾವಿರ ಹೊರೆ
ಪರೀಕ್ಷೆಯ ಮೌಲ್ಯಮಾಪನದಲ್ಲಿ ಸಿಬಿಎಸ್‌ಇ ಮಾಡಿದ ಎಡವಟ್ಟುಗಳಿಂದಾಗಿ ವಿದ್ಯಾರ್ಥಿಗಳಿಗೆ ಕಡಿಮೆ ಅಂಕಗಳು ಬಂದಿವೆ. ಆದರೆ, ಅದನ್ನು ಸರಿಪಡಿಸಿಕೊಳ್ಳಲು ಮಂಡಳಿಯು ವಿದ್ಯಾರ್ಥಿಗಳ ಮುಂದೆಯೇ ದೊಡ್ಡ ಬಿಲ್ ಇಟ್ಟಿದೆ. ಡಿಜಿಟಲ್ ಸ್ಕ್ಯಾನ್ ಪ್ರತಿಯನ್ನು ಪಡೆಯಲು ಪ್ರತಿ ವಿಷಯಕ್ಕೆ 100 ರೂಪಾಯಿ, ಅಂಕಗಳ ಮರುಎಣಿಕೆಗೆ ಪ್ರತಿ ಪತ್ರಿಕೆಗೆ 100 ರೂಪಾಯಿ ಹಾಗೂ ಮರುಮೌಲ್ಯಮಾಪನದ ಅಡಿಯಲ್ಲಿ ಪ್ರತಿ ಪ್ರಶ್ನೆಗೆ 25 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಯೊಬ್ಬ ತಾನು ಬರೆದ ಉತ್ತರ ಪತ್ರಿಕೆಯ ಸರಿಯಾದ ಪರಿಶೀಲನೆಗಾಗಿ ಬರೋಬ್ಬರಿ 2,000 ರೂಪಾಯಿಗಳವರೆಗೆ ಹಣ ಪಾವತಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ದೇಶಾದ್ಯಂತ ಸುಮಾರು 4 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಈ ರೀತಿ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದು, ಇದರ ಮೂಲಕ ಸಿಬಿಎಸ್‌ಇ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆತಂಕ ವ್ಯಕ್ತಪಡಿಸಿದ್ದಾರೆ. ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಪ್ರಕ್ರಿಯೆಯನ್ನು ಕೇವಲ ಮೊಬೈಲ್ ಫೋನ್‌ಗಳ ಮೂಲಕ ಮಾಡಿರುವುದರಿಂದ ಅಂಕ ನೀಡಿಕೆಯಲ್ಲಿ ತಪ್ಪುಗಳಾಗಿರುವುದು ಖಚಿತವಾಗಿದೆ. ಸಂಸ್ಥೆ ಮಾಡಿದ ಇಂತಹ ಬೇಜವಾಬ್ದಾರಿ ತಪ್ಪುಗಳನ್ನು ಸರಿಪಡಿಸಲು ವಿದ್ಯಾರ್ಥಿಗಳಿಂದಲೇ ದಂಡ ವಸೂಲಿ ಮಾಡುತ್ತಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.
ಶಿಕ್ಷಣ ಕ್ಷೇತ್ರವನ್ನು ಉದ್ಯಮವನ್ನಾಗಿ ಪರಿವರ್ತಿಸಿದಾಗ ಇಂತಹ ತಪ್ಪುಗಳನ್ನು ತಿದ್ದಿಕೊಳ್ಳುವ ಬದಲು, ಮತ್ತಷ್ಟು ಹೆಚ್ಚಿಸಲಾಗುತ್ತದೆ. ತಪ್ಪು ಮಂಡಳಿಯದ್ದಾಗಿದ್ದರೂ ಶಿಕ್ಷೆ ಮಾತ್ರ ಮಕ್ಕಳಿಗೆ ಸಿಗುತ್ತಿದೆ ಮತ್ತು ಇದರಿಂದ ಸರ್ಕಾರಕ್ಕೆ ಭರಪೂರ ಆದಾಯ ಹರಿದುಬರುತ್ತಿದೆ. ಈ ಕಮರ್ಷಿಯಲ್ ಆಟದಿಂದಾಗಿ ದೇಶದ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯ, ಆತ್ಮವಿಶ್ವಾಸ ಮತ್ತು ಉಜ್ವಲ ಭವಿಷ್ಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ.

