ಹಾಸನ (Hasan) ಜಿಲ್ಲೆಯಾದ್ಯಂತ ವರುಣನ (Rain) ಅಬ್ಬರ ಮುಂದುವರಿದಿದ್ದು, ಇಂದು ಕೂಡ ವಿವಿಧೆಡೆ ಭಾರಿ ಮಳೆಯಾಗಿದೆ. ಕಳೆದ ಒಂದು ಗಂಟೆಗೂ ಹೆಚ್ಚು ಕಾಲದಿಂದ ನಿರಂತರವಾಗಿ ಸುರಿಯುತ್ತಿರುವ ಗುಡುಗು (Thunderstorm) ಸಹಿತ ಮಳೆಗೆ ಜಿಲ್ಲೆಯ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
ಜಿಲ್ಲಾ ಕೇಂದ್ರ ಹಾಸನ ಸೇರಿದಂತೆ ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ತಾಲೂಕಿನ ಹಲವೆಡೆ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಮಳೆ ಸುರಿದಿದೆ. ದಿಢೀರ್ ಆಗಿ ಅಪ್ಪಳಿಸಿದ ಮಳೆಯಿಂದಾಗಿ ರಸ್ತೆಗಳೆಲ್ಲಾ ಜಲಾವೃತಗೊಂಡಿದ್ದು, ವಾಹನ ಸವಾರರು ಹಾಗೂ ಬೀದಿ ಬದಿ ವ್ಯಾಪಾರಿಗಳು ಆಶ್ರಯಕ್ಕಾಗಿ ಪರದಾಡುವಂತಾಯಿತು. ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಬಿಡುವು ನೀಡದೆ ಸುರಿಯುತ್ತಿರುವ ಈ ಮಳೆಯು ಸಾರ್ವಜನಿಕರಿಗೆ ಕೊಂಚ ತೊಂದರೆ ನೀಡಿದ್ದರೂ, ಅನ್ನದಾತನ ಮೊಗದಲ್ಲಿ ಮಾತ್ರ ಮಂದಹಾಸ ಮೂಡಿಸಿದೆ. ತೀವ್ರ ಮಳೆ ಕೊರತೆಯಿಂದಾಗಿ ಜಿಲ್ಲೆಯ ಬಹುತೇಕ ಕೆರೆ-ಕಟ್ಟೆಗಳು ಒಣಗಿಹೋಗಿದ್ದವು. ಕುಡಿಯುವ ನೀರಿಲ್ಲದೆ ಜನಸಾಮಾನ್ಯರು ಮಾತ್ರವಲ್ಲದೆ, ಜಾನುವಾರುಗಳು ಕೂಡ ತತ್ತರಿಸಿದ್ದವು. ಹಸಿರು ಮೇವಿನ ಕೊರತೆಯಿಂದ ಹೈನುಗಾರಿಕೆ ನಂಬಿದ್ದ ರೈತರು ಕಂಗಾಲಾಗಿದ್ದರು. ಇದೀಗ ಮೂರು ದಿನಗಳ ನಿರಂತರ ಮಳೆಯಿಂದಾಗಿ ಒಣಗಿದ್ದ ಕೆರೆ-ಕಟ್ಟೆಗಳಿಗೆ ಜೀವಕಳೆ ಬಂದಿದ್ದು, ಹಂತ ಹಂತವಾಗಿ ನೀರು ತುಂಬಿಕೊಳ್ಳುತ್ತಿದೆ. ಇತ್ತ ಒಣಗಿದ್ದ ಜಮೀನುಗಳಲ್ಲಿ ಹಸಿರು ಮೇವು ಚಿಗುರೊಡೆಯುತ್ತಿರುವುದು ರೈತರುಸಂತಸಗೊಂಡಿದ್ದಾರೆ. ಕರ್ನಾಟಕದಲ್ಲಿ ವರುಣನ ಅಬ್ಬರ - ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ 7 ದಿನ ಭಾರಿ ಮಳೆ ಬೆಂಗಳೂರು: ರಾಜ್ಯದಲ್ಲಿ ಮುಂದಿನ 7 ದಿನಗಳ ಕಾಲ ಮಳೆಯ ಅಬ್ಬರ ಜೋರಾಗಿರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಕರ್ನಾಟಕದಾದ್ಯಂತ ಗುಡುಗು, ಸಿಡಿಲು ಮತ್ತು ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ನೈಋತ್ಯ ಮುಂಗಾರು ಮಾರುತಗಳ ಹಿನ್ನೆಲೆಯಲ್ಲಿ ಹವಾಮಾನದಲ್ಲಿ ಈ ದೊಡ್ಡ ಬದಲಾವಣೆಯಾಗುತ್ತಿದ್ದು, ಸಾರ್ವಜನಿಕರು ಮತ್ತು ರೈತರು ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಕಲಬುರ್ಗಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ರಾಜಧಾನಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬಾಗಲಕೋಟೆ, ವಿಜಯಪುರ ಮತ್ತು ಕೊಪ್ಪಳ ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹಲವೆಡೆ ಬಲವಾದ ಗಾಳಿಯೊಂದಿಗೆ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯುವಾಗ ಜಾಗರೂಕರಾಗಿರಲು ಸೂಚಿಸಲಾಗಿದೆ.ಬೆಂಗಳೂರು ನಗರ ಹವಾಮಾನ: ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಮಧ್ಯಾಹ್ನ ಅಥವಾ ಸಂಜೆ ಮತ್ತು ರಾತ್ರಿಯ ವೇಳೆಯಲ್ಲಿ ಗುಡುಗು-ಮಿಂಚು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ. ಮೇ 28ರಿಂದ ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ.ಬಂಗಾಳಕೊಲ್ಲಿಯಲ್ಲಿ ಜೂನ್ 3ರಿಂದ ವಾಯುಭಾರ ಕುಸಿತದಂತ ತಿರುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜೂನ್ 4 ರಂದು ಮುಂಗಾರು ಕೇರಳಕ್ಕೆ ಹಾಗೂ 5ರಂದು ರಾಜ್ಯಕ್ಕೆ ಆಗಮಿಸುವ ನಿರೀಕ್ಷೆ ಇದೆ. ರೈತರಿಗೆ ಸೂಚನೆ ಕಟಾವು ಮಾಡಿದ ಬೆಳೆಗಳನ್ನು ಬಯಲಿನಲ್ಲಿ ಇಡದೆ, ತಕ್ಷಣವೇ ಸುರಕ್ಷಿತ ಹಾಗೂ ಮುಚ್ಚಿದ ಜಾಗಗಳಿಗೆ ಸ್ಥಳಾಂತರಿಸಿ. ತೋಟಗಳಲ್ಲಿ ಮತ್ತು ಜಾನುವಾರುಗಳನ್ನು ಮೇಯಿಸಲು ಹೊರಗೆ ಕರೆದೊಯ್ಯುವಾಗ ಸಿಡಿಲಿನ ಬಗ್ಗೆ ಎಚ್ಚರವಿರಲಿ ಇನ್ನು ಸತತವಾಗಿ 7 ದಿನಗಳ ಕಾಲ ರಾಜ್ಯದಾದ್ಯಂತ ಮಳೆ ಮುಂದುವರಿಯುವುದರಿಂದ, ತಗ್ಗು ಪ್ರದೇಶಗಳಲ್ಲಿ ನೀರು ತುಂಬುವ ಸಾಧ್ಯತೆಯಿದೆ. ಹೊರಗಡೆ ಕೆಲಸದ ಮೇಲೆ ಹೋಗುವವರು ಅಥವಾ ಪ್ರವಾಸದ ಪ್ಲಾನ್ ಮಾಡಿರುವವರು ಹವಾಮಾನದ ವರದಿಯನ್ನು ಗಮನದಲ್ಲಿಟ್ಟುಕೊಂಡು ಹೊರಡುವುದು ಒಳ್ಳೆಯದು.

