Dailyhunt Logo
  • Light mode
    Follow system
    Dark mode
    • Play Story
    • App Story
RAIN: ಮಹಾರಾಷ್ಟ್ರದಲ್ಲಿ ಭಾರಿ ಮಳೆ, ರಾಜ್ಯಕ್ಕೆ 1 ಲಕ್ಷ ಕ್ಯೂಸೆಕ್ ನೀರಿನ ಒಳಹರಿವು

RAIN: ಮಹಾರಾಷ್ಟ್ರದಲ್ಲಿ ಭಾರಿ ಮಳೆ, ರಾಜ್ಯಕ್ಕೆ 1 ಲಕ್ಷ ಕ್ಯೂಸೆಕ್ ನೀರಿನ ಒಳಹರಿವು

Navasamaja.com 2 weeks ago

ಬೆಳಗಾವಿ: ಮಹಾರಾಷ್ಟ್ರದ (Maharashtra) ಘಟ್ಟ ಪ್ರದೇಶಗಳಲ್ಲಿ ಕಳೆದ 6 ದಿನಗಳಿಂದ ಬಿಡುವು ನೀಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ (Heavy Rain Effect) ಗಡಿ ಜಿಲ್ಲೆ ಬೆಳಗಾವಿಯಲ್ಲಿ (Belgaum) ಪ್ರವಾಹದ(flooding) ಭೀತಿ ಎದುರಾಗಿದೆ. ಕರ್ನಾಟಕದ(Karnataka) ನದಿಗಳಿಗೆ ಒಟ್ಟು 98 ಸಾವಿರದಿಂದ 1 ಲಕ್ಷ ಕ್ಯೂಸೆಕ್‌ಗೂ ಹೆಚ್ಚು ನೀರಿನ ಒಳಹರಿವು ದಾಖಲಾಗಿದ್ದು, ಕೇವಲ ಒಂದೇ ರಾತ್ರಿಯಲ್ಲಿ ಕೃಷ್ಣಾ ನದಿಗೆ ಬರೋಬ್ಬರಿ 28 ಸಾವಿರ ಕ್ಯೂಸೆಕ್ ಹೆಚ್ಚುವರಿ ನೀರು ಹರಿದು ಬಂದಿದೆ.

ಇದರಿಂದಾಗಿ ಬೆಳಗಾವಿ ಜಿಲ್ಲೆಯ ಪ್ರಮುಖ ನದಿಗಳಾದ ಕೃಷ್ಣಾ, ದೂದಗಂಗಾ, ವೇದಗಂಗಾ, ಹಿರಣ್ಯಕೇಶಿ, ಘಟಪ್ರಭಾ, ಮಲಪ್ರಭಾ ಹಾಗೂ ಮಾರ್ಕಂಡೇಯ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಭಾರೀ ಒಳಹರಿವಿನಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ 8 ಕೆಳಹಂತದ ಸೇತುವೆಗಳು ಜಲಾವೃತವಾಗಿವೆ. ಮುಲ್ಲಾಂಕಿ-ದತ್ತವಾಡ, ಕಾರದಗಾ-ಬೋಜ್, ಅಕ್ಕೋಳ-ಸಿದ್ನಾಳ, ಜತ್ರಾಟ್-ಭೀವಶಿ, ಬಾರವಾಡ-ಕನ್ನೂರ ಹಾಗೂ ಬೋಜವಾಡಿ-ಗಜವರವಾಡಿ ಸಂಪರ್ಕ ಸೇತುವೆಗಳು ಸೇರಿದಂತೆ ಹಲವು ಸೇತುವೆಗಳು ನೀರಿನಲ್ಲಿ ಮುಳುಗಿವೆ. ಪರಿಣಾಮ 16ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ಈ ಭಾಗದ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕಿಲೋಮೀಟರ್‌ಗಟ್ಟಲೆ ಬಳಸಿ ಪರ್ಯಾಯ ಮಾರ್ಗಗಳ ಮೂಲಕ ಸಂಚಾರ ಮಾಡುತ್ತಿದ್ದಾರೆ.

ಇತ್ತ ದೂದಗಂಗಾ ನದಿಯೂ ಕೂಡ ಉಕ್ಕಿ ಹರಿಯುತ್ತಿರುವುದರಿಂದ ನದಿ ಪಾತ್ರದ ಪಕ್ಕದಲ್ಲಿರುವ ಜಮೀನುಗಳಿಗೆ ಪ್ರವಾಹದ ನೀರು ನುಗ್ಗಿದೆ. ನಿಪ್ಪಾಣಿ ತಾಲೂಕಿನ ಶಿರದವಾಡ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ನೂರಾರು ಎಕರೆ ಗದ್ದೆಗಳು ಜಲಾವೃತಗೊಂಡಿವೆ. ಇತ್ತೀಚಿನವರೆಗೂ ಮಳೆಗಾಗಿ ಕಾಯುತ್ತಿದ್ದ ರೈತರು ಈಗ ಅತಿಯಾದ ನೀರಿನಿಂದಾಗಿ ಕಣ್ಣೀರು ಇಡುವಂತಾಗಿದೆ. ಜಮೀನಿನಲ್ಲಿ ಬೆಳೆದಿದ್ದ ಜೋಳ, ಉದ್ದು ಹಾಗೂ ಸೊಯಾಬೀನ್ ಬೆಳೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆ ಆಗಿದ್ದು, ಅನ್ನದಾತರು ಭಾರೀ ನಷ್ಟ ಅನುಭವಿಸುವ ಆತಂಕದಲ್ಲಿದ್ದಾರೆ. ನದಿ ತೀರದ ಜನರಿಗೆ ಎಚ್ಚರಿಕೆಯಿಂದ ಇರಲು ಸ್ಥಳೀಯ ಆಡಳಿತ ಸೂಚನೆ ನೀಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja