Dailyhunt Logo
  • Light mode
    Follow system
    Dark mode
    • Play Story
    • App Story
RAIN: ಮಹಾರಾಷ್ಟ್ರದಲ್ಲಿ ಮಹಾ ಮಳೆಗೆ ಜನಜೀವನ ತತ್ತರ, ನದಿಯಂತಾದ ರಸ್ತೆಗಳು!- VIDEO

RAIN: ಮಹಾರಾಷ್ಟ್ರದಲ್ಲಿ ಮಹಾ ಮಳೆಗೆ ಜನಜೀವನ ತತ್ತರ, ನದಿಯಂತಾದ ರಸ್ತೆಗಳು!- VIDEO

Navasamaja.com 3 weeks ago

ಮುಂಬೈ: ಮಹಾರಾಷ್ಟ್ರದಲ್ಲಿ (Maharashtra) ಕಳೆದ ನಾಲ್ಕು ದಿನಗಳಿಂದ ವರುಣದೇವ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ಶನಿವಾರದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ (Rain) ಇಡೀ ರಾಜ್ಯವೇ ತತ್ತರಿಸಿಹೋಗಿದೆ. ಪುಣೆ ಹಾಗೂ ಥಾಣೆ ಜಿಲ್ಲೆಗಳಲ್ಲಿ ಮಳೆಯ ರಭಸಕ್ಕೆ ಈಗಾಗಲೇ ಐದು ಜನ ಜೀವ ಕಳೆದುಕೊಂಡಿದ್ದಾರೆ.

ಇತ್ತ ರಾಜಧಾನಿ ಮುಂಬೈನಲ್ಲಿ (Mumbai) ಮುಂಜಾನೆಯಿಂದಲೇ ಮುಗಿಲು ಒಡೆದಂತೆ ಮಳೆ ಸುರಿಯುತ್ತಿದ್ದು, ರಸ್ತೆಗಳು ಸಾಗರದಂತಾಗಿವೆ. ಪ್ರವಾಹದ ನೀರಿನಲ್ಲಿ ಕಾರು, ಟ್ರಕ್ ಸೇರಿದಂತೆ ನೂರಾರು ವಾಹನಗಳು ಮುಳುಗಡೆಯಾಗಿದ್ದು, ಸಾರ್ವಜನಿಕರ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

ʻಗೇಟ್‌ ವೇ ಆಫ್‌ ಇಂಡಿಯಾ ಬಳಿ ಅಲೆಯ ಆರ್ಭಟ
ಮುಂಬೈನ ಪ್ರಸಿದ್ಧ ಪ್ರವಾಸಿ ತಾಣವಾದ ʻಗೇಟ್‌ ವೇ ಆಫ್‌ ಇಂಡಿಯಾʼ ಬಳಿ ಸಮುದ್ರದ ಅಲೆಗಳು ಬೃಹತ್ ಪ್ರಮಾಣದಲ್ಲಿ ಉಬ್ಬರವಿಳಿತ ಕಂಡು ಕರಾವಳಿಗೆ ಅಪ್ಪಳಿಸುತ್ತಿರುವ ಭಯಾನಕ ದೃಶ್ಯಗಳ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ವಸಾಯ್‌ ಹಾಗೂ ನವಿ ಮುಂಬೈ ಭಾಗಗಳಲ್ಲೂ ಪರಿಸ್ಥಿತಿ ಕೈಮೀರಿದ್ದು, ರಸ್ತೆಗಳು ನೀರಿನಡಿಯಲ್ಲಿ ಕಣ್ಮರೆಯಾಗಿರುವುದರಿಂದ ವಾಹನ ಸವಾರರು ದಿಕ್ಕುತೋಚದೆ ಪರದಾಡುವಂತಾಗಿದೆ. ಭಾಂಡಪ್‌ನ ಸೋನಾಪುರ ಎಂಬಲ್ಲಿ ನಿರಂತರ ಮಳೆಯಿಂದಾಗಿ ಮುಖ್ಯ ರಸ್ತೆಯ ಒಂದು ಭಾಗವೇ ಕುಸಿದು ಬಿದ್ದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇದೇ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ವಾಹನವೊಂದು ಕುಸಿದ ಕಂದಕಕ್ಕೆ ಉರುಳಿ ಬಿದ್ದಿದೆಯಾದರೂ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೆ ರೆಡ್‌ ಅಲರ್ಟ್‌ ಘೋಷಿಸಿದ ಹವಾಮಾನ ಇಲಾಖೆ
ಮತ್ತೊಂದೆಡೆ ಥಾಣೆ ಮತ್ತು ಪಾಲ್ಘರ್‌ ಜಿಲ್ಲೆಗಳಲ್ಲೂ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ಭಾರಿ ಗಾಳಿಗೆ ನೂರಾರು ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ತಗ್ಗು ಪ್ರದೇಶಗಳ ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಜನರು ದಿನಬಳಕೆಯ ವಸ್ತುಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಸದ್ಯದ ಪರಿಸ್ಥಿತಿ ಹೀಗಿರುವಾಗಲೇ ಹವಾಮಾನ ಇಲಾಖೆಯು (IMD) ಭಾನುವಾರವೂ (ಜುಲೈ 5) ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಎಚ್ಚರಿಸಿದ್ದು, ಮುಂಬೈ ಸೇರಿದಂತೆ ಪ್ರಮುಖ ಜಿಲ್ಲೆಗಳಿಗೆ ಅತ್ಯಂತ ಕಠಿಣವಾದ 'ರೆಡ್ ಅಲರ್ಟ್' ಘೋಷಿಸಿದೆ. ಅನಗತ್ಯವಾಗಿ ಯಾರೂ ಮನೆಗಳಿಂದ ಹೊರಬರಬಾರದು ಎಂದು ಸ್ಥಳೀಯ ಆಡಳಿತ ಜನರಲ್ಲಿ ವಿನಂತಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja