ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಮುಂಗಾರು ಮಳೆಯ ಅಬ್ಬರ ತೀವ್ರಗೊಂಡಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಾದ್ಯಂತ ಧಾರಾಕಾರ ಮಳೆ (rain) ಸುರಿಯುತ್ತಿದೆ. ಮುಂದಿನ ದಿನಗಳಲ್ಲೂ ವರುಣನ ಅಬ್ಬರ ಮುಂದುವರಿಯುವ ಮುನ್ಸೂಚನೆ ಇರುವುದರಿಂದ, ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಶಾಲಾ-ಕಾಲೇಜುಗಳಿಗೆ (schools- colleges) ನಾಳೆ (ಬುಧವಾರ, ಜುಲೈ 8) ಒಂದು ದಿನದ ಮಟ್ಟಿಗೆ ರಜೆ(holiday) ಘೋಷಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಮಾರ್ಗದರ್ಶನ ಹಾಗೂ ಕರೆಯ ಮೇರೆಗೆ ಸಾಗರ ತಾಲೂಕಿನ ತಹಶೀಲ್ದಾರ್ ಆದ ಡಾ. ಪ್ರತಿಭಾ ಅವರು ಈ ರಜೆಯ ಆದೇಶವನ್ನು ಪ್ರಕಟಿಸಿದ್ದಾರೆ. ಯಾವೆಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಅನ್ವಯ? ಸಾಗರ ತಾಲೂಕು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಒಡೆತನದ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಎಲ್ಲಾ ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು, ಎಲ್ಲಾ ಪದವಿಪೂರ್ವ (ಪಿಯುಸಿ) ಕಾಲೇಜುಗಳು, ಎಲ್ಲಾ ಡಿಪ್ಲೊಮಾ (ಪಲಿಟೆಕ್ನಿಕ್) ಕಾಲೇಜುಗಳಿಗೆ ಈ ರಜೆ ಕಡ್ಡಾಯವಾಗಿ ಅನ್ವಯಿಸಲಿದೆ. ರಜೆ ದಿನದ ಪಾಠ ಸರಿದೂಗಿಸಲು ವಿಶೇಷ ಸೂಚನೆ! ಮಳೆಯ ತುರ್ತು ಪರಿಸ್ಥಿತಿಯಿಂದಾಗಿ ಜುಲೈ 8ರ ಬುಧವಾರದಂದು ರಜೆ ನೀಡಲಾಗಿದ್ದು, ಈ ದಿನದಂದು ವಿದ್ಯಾರ್ಥಿಗಳಿಗೆ ಆಗುವ ಪಠ್ಯ ಚಟುವಟಿಕೆಗಳ ನಷ್ಟವನ್ನು ಸರಿದೂಗಿಸಲು ತಹಶೀಲ್ದಾರ್ ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಬರುವ ರಜಾ ದಿನಗಳಂದು (ಭಾನುವಾರ ಅಥವಾ ಇತರೆ ರಜೆಗಳು) ವಿಶೇಷ ತರಗತಿಗಳನ್ನು ಹಮ್ಮಿಕೊಳ್ಳುವ ಮೂಲಕ ಪಾಠ ಪ್ರವಚನಗಳನ್ನು ಪೂರ್ಣಗೊಳಿಸುವಂತೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿದೆ. ಈ ಮಹತ್ವದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO), ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು (CDPO) ಹಾಗೂ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಮಲೆನಾಡು ಭಾಗದಲ್ಲಿ ಮಳೆ ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ನದಿ, ಹಳ್ಳ-ಕೊಳ್ಳಗಳ ಬಳಿ ತೆರಳದಂತೆ ಎಚ್ಚರಿಕೆ ವಹಿಸಲು ಕೋರಲಾಗಿದೆ. : TOXIC: 'ಟಾಕ್ಸಿಕ್'ನಲ್ಲಿ ಅತಿರೇಕದ ದೃಶ್ಯ ಎಂದ ನೆಟ್ಟಿಗರು, ಟೀಕಾಕಾರರಿಗೆ ಚಿತ್ರದ ನಟ ಖಡಕ್ ಕೌಂಟರ್!

